ಏರ್‌ ಶೋ: ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ

Advertisement

ಬೆಂಗಳೂರು: ಇಂದಿನ ವೈಮಾನಿಕ ಪ್ರದರ್ಶನ ಭಾರತದ ಹೊಸ ಶಕ್ತಿಯನ್ನು ಇಡೀ ವಿಶ್ವಕ್ಕೆ ಜಗಜ್ಜಾಹೀರು ಪಡೆಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ತಿಳಿಸಿದರು. ಯಲಹಂಕ ವಾಯುನೆಲೆಯಲ್ಲಿ ಆರಂಭಗೊಂಡ 14ನೇ ಆವೃತ್ತಿಯ ಏರೋ ಇಂಡಿಯಾ ಶೋ ಉದ್ಘಾಟಿಸಿ ಮಾತನಾಡಿದ ಅವರು, ನವಭಾರತದ ಸಾಮಥ್ರ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವಭಾರತದ ಸತ್ಯ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಇಂದು ರಾಷ್ಟ್ರವು ಹೊಸ ಎತ್ತರವನ್ನು ತಲುಪುತ್ತಿದೆ ಎಂದರು. ಏರೋ ಇಂಡಿಯಾ ಭಾರತದ ಸಾಮಥ್ರ್ಯಗಳನ್ನು ವಿಸ್ತರಿಸಲು ಒಂದು ಉದಾಹರಣೆಯಾಗಿದೆ. ಇಲ್ಲಿ ಸುಮಾರು 100 ರಾಷ್ಟ್ರಗಳ ಉಪಸ್ಥಿತಿಯು ಭಾರತದ ಮೇಲಿನ ವಿಶ್ವ ನಂಬಿಕೆಯನ್ನು ಹೆಚ್ಚಿಸಿದೆ. ಭಾರತ ಮತ್ತು ವಿಶ್ವದ 700ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಹೇಳಿದರು.
ಈ ಹಿಂದೆ ಭಾರತ ಸಶಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು ವಿಶ್ವಕ್ಕೆ ನಾವು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವ ಮಟ್ಟಿಗೆ ಬೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ರಕ್ಷಣಾ ಉತ್ಪನ್ನಗಳ ರಫ್ತು 5 ಬಿಲಿಯನ್ ದಾಟುವ ಗುರಿ ಹೊಂದಲಾಗಿದೆ ಎಂದರು. ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವ ಗುರಿ ಹೊಂದಿದ್ದು, ಒಟ್ಟಾರೆ 75 ಸಾವಿರ ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
21ನೇ ಶತಮಾನದಲ್ಲಿ ಭಾರತಕ್ಕೆ ಸಿಗುವ ಯಾವುದೇ ಅವಕಾಶಗಳನ್ನು ಕೈಚೆಲ್ಲುವ ಪ್ರಶ್ನೆಯೇ ಇಲ್ಲ. ಎಲ್ಲ ಕ್ಷೇತ್ರದಲ್ಲೂ ನಾವು ಗಣನೀಯ ಸಾಧನೆ ಮಾಡುವಂತೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ನಾವು ಇಂದು ಕೇವಲ ಮಾರುಕಟ್ಟೆಯಾಗಿ ಮಾತ್ರ ಉಳಿದುಕೊಂಡಿಲ್ಲ. ಹಲವಾರು ದೇಶಗಳಿಗೆ ರಕ್ಷಣಾ ಕ್ಷೇತ್ರದ ಪಾಲುದಾರರಾಗಿಯೂ ಗುರುತಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಹಲವಾರು ದೇಶಗಳ ರಕ್ಷಣಾ ಪಾಲುದಾರ ದೇಶವಾಗಿಯೂ ಭಾರತ ಹೊರಹೊಮ್ಮಲಿದೆ ಎಂದು ಹೇಳಿದರು.
ಇಂದಿನ ವೈಮಾನಿಕ ಪ್ರದರ್ಶನ ಭಾರತದ ಹೊಸ ಶಕ್ತಿಯನ್ನು ಇಡೀ ವಿಶ್ವಕ್ಕೆ ಜಗಜ್ಜಾಹೀರು ಪಡೆಸುವಲ್ಲಿ ಯಶಸ್ವಿಯಾಗಿದೆ ಎಂದು ಮೋದಿ ಬಣ್ಣಿಸಿದರು. ನಾವು ರಕ್ಷಣಾ ಕ್ಷೇತ್ರದಲ್ಲಿ ಹಲವಾರು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ನಮ್ಮ ಸಾಮಥ್ರ್ಯಕ್ಕೆ ಆತ್ಮ ನಿರ್ಭರ ಯೋಜನೆಯಡಿ ಉತ್ಪಾದಿಸಿರುವ ತೇಜಸ್ ಏರ್ ಕ್ರಾಫ್ಟ್ ಒಂದು ತಾಜಾ ಉದಾಹರಣೆ ಎಂದರು.
ಹಲವಾರು ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ನಾವು ಹೊಸ ಹೊಸ ಸಾಧನಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮೇಕ್ ಫಾರ್ ವಲ್ರ್ಡ್‍ನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.