ಒಳ ಮೀಸಲಾತಿ ವಿರೋಧಿಸಿ ಚುನಾವಣೆ ಬಹಿಷ್ಕಾರ

ಬಹಿಷ್ಕಾರ
Advertisement

ವಿಜಯಪುರ: ಇತ್ತೀಚಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಕೇಂದ್ರಕ್ಕೆ ಸಿಫಾರಸ್ಸು ಮಾಡಿರುವ ಒಳ ಮೀಸಲಾತಿ ವಿರೋಧಿಸಿ ಹುಲ್ಲೂರ್ ತಾಂಡಾ ನಿವಾಸಿಗಳು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ತಾಂಡಾದಲ್ಲಿ ಮತದಾರರು ಮತದಾನ ಬಹಿಷ್ಕರಿಸುವುದಾಗಿ ತಾಂಡಾದ ಬಸ್ ನಿಲ್ದಾಣ, ತಾಂಡಾ ಮುಖ್ಯ ರಸ್ತೆಗೆ ಕಾಣುವಂತೆ ಫ್ಲೆಕ್ಸ್ ಹಾಕಿದ್ದಾರೆ.
ಹಮಾರೋ ತಾಂಡೋ ಹಮಾರಾ ರಾಜ್ ಎಂದು ಪ್ಲೇಕ್ಸ್‌ನಲ್ಲಿ ಬರೆದು ಮತದಾನ ಬಹಿಷ್ಕಾರ ಮಾಡಿದ್ದು ಕೂಡಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಡಿರುವ ಶಿಫಾರಸ್ಸನ್ನು ವಾಪಾಸ್ ತೆಗೆದುಕೊಳ್ಳಬೇಕು. ನಮಗೆ ಆಗಿರುವ ಅನ್ಯಾಯವನ್ನು ಈಗಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಳ ಮೀಸಲಾತಿ ರದ್ದು ಮಾಡುವವರೆಗೂ ನಮ್ಮ ಗ್ರಾಮಕ್ಕೆ ಯಾವುದೇ ರಾಜಕೀಯ ಪಕ್ಷದ ಮುಖಂಡರು ಬರುವುದು ಬೇಡ. ಅಲ್ಲದೇ ನೊಂದ ನಮ್ಮ ಸಮಾಜದ ಜನರಿಗೆ ನ್ಯಾಯ ಸಿಗುವವರೆಗೂ ಯಾವುದೇ ಪಕ್ಷದ ಕಾರ್ಯಕರ್ತರು ಜನರ ಮನೆಗೆ ತೆರಳಿ ಮನವೊಲಿಸಿ ಮತ ಕೇಳುವ ಅರ್ಹತೆ ಇರುವುದಿಲ್ಲ ಎಂದು ಸ್ಪಷ್ಟವಾಗಿ ಫ್ಲೆಕ್ಸ್‌ನಲ್ಲಿ ಬರೆದಿದ್ದಾರೆ.