ಕಂಟ್ರಂಗಮ್ಮತ್ತಿ ಹೇಳಿದ ಪಲ್ಟಿರಾಮನ ಕಥೆ

Advertisement

ಕಂಟ್ರಂಗಮ್ಮತ್ತಿ ಕಥೆ ಹೇಳಲು ಕುಳಿತಳೆಂದರೆ ಸಾಕು ಕಥೆ ಕೇಳಲು ಕುಳಿತವರು ದಂಗು ಬಡಿದು ಹೋಗುತ್ತಿದ್ದರು. ಆ ಕಥೆಗಳು ಎಷ್ಟರ ಮಟ್ಟಿಗೆ
ಆವರಿಸಿಕೊಳ್ಳುತ್ತಿದ್ದವು ಅಂದರೆ… ಆಕೆಯ ದೆವ್ವದ ಕಥೆ ಕೇಳಿ ತಿಂಗಳಾನುಗಟ್ಟಲೇ ಅದನ್ನೇ ಬಡಬಡಿಸುತ್ತಿದ್ದ. ಕೊನೆಗೆ ಕರಿಲಕ್ಷಂಪತಿ ತಾಯತ ಕಟ್ಟಿದ ಮೇಲೆ ಸ್ವಲ್ಪ ಕಡಿಮೆ ಆಯಿತು. ಮತ್ತೆಂದೂ ಆತ ಕಂಟ್ರಂಗಮ್ಮತ್ತಿಯ ಕಥೆ ಕೇಳಲು ಹೋಗಲಿಲ್ಲ. ಆದರೆ ಜನರು ಮಾತ್ರ ಆಕೆಯ ಕಥೆ ಕೇಳಲು ಮುಗಿಬೀಳುವುದು ಮಾತ್ರ ತಪ್ಪುತ್ತಿರಲಿಲ್ಲ. ಆಕೆಯ ಕಥೆ ಸುತ್ತ ಹತ್ತುಹರಿದಾರಿ ಊರುಗಳಿಗೆ ಪ್ರಸಿದ್ಧಿ ಪಡೆದಿದ್ದವು. ಕೆಲವೊಬ್ಬರು ಆಕೆಯ ಕಥೆ ಕೇಳಿ ಅದನ್ನು ಬೇರೆಯವರಿಗೆ ಹೇಳಿ ಶಹಬ್ಬಾಷ್‌ಗಿರಿ ಪಡೆದುಕೊಳ್ಳುತ್ತಿದ್ದರು. ಕಿವುಡುನಮಿ, ಕುರಿಲಚುಮವ್ವ ಮುಂತಾದವರು ಈಕೆಯ ಕಥೆಗಳನ್ನು ಇಟ್ಟುಕೊಂಡು ಯುಟೂಬ್‌ನಲ್ಲಿ ಹೇಳಿ ಸಿಕ್ಕಾಪಟ್ಟೆ ದುಡ್ಡು ಗಳಿಸತೊಡಗಿದರು. ಆಕೆಯ ರೀಸಂಟ್ ಕಥೆಯನ್ನು ಇಟ್ಟುಕೊಂಡು ಸಿನೆಮಾ ಮಾಡಬೇಕು ಎಂದು ನಿರ್ಮಾಪಕ ಡೂಗೀರಪ್ಪ ನಿರ್ಧರಿಸಿ ಆಕೆಯಕಥೆ ಕೇಳಲು ಕುಳಿತ…
ಆಗ ಕಥೆ ಹೇಳಲು ಶುರುಮಾಡಿದಳು ಕಂಟ್ರಂಗಮ್ಮತ್ತಿ…
ಬಹಳ ಹಿಂದ ಐನೂರು ಆರುನೂರು ವರ್ಷಗಳ ಹಿಂದೆ ಕೃಷ್ಣದೇವರಾಯನ ಕಾಲದ ಹಿಂದಿನ ಕಾಲದಲ್ಲಿ ಓರ್ವ ಲಗಾಟಿ ಲಚುಮ ಎಂಬ ವ್ಯಕ್ತಿ ಇದ್ದ. ಜಾತ್ರೆ, ಉರುಸುಗಳಲ್ಲಿ ಲಗಾಟಿ ಹೊಡೆದೊಡೆದು ಜನರನ್ನು ರಂಜಿಸುತ್ತಿದ್ದ. ಆತನ ನಿಜವಾದ ಹೆಸರನ್ನು ಹೇಳಿದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಮುಂದೆ ಲಗಾಟಿ ಅಂತ ಹೇಳಿದಕೂಡಲೇ ಲಚುಮ ಎಂದು ಹೇಳುತ್ತಿದ್ದರು. ಅಂತಹ ಲಚುಮ ಸತ್ತು ಹೋದ. ಆತನ ಮುಂದಿನ ಜನ್ಮದಲ್ಲಿ ಮತ್ತೆ ಎಲ್ಲೋ ಜನಿಸಿದ. ಆತನಿಗೆ ಮನೆಯಲ್ಲಿ ಜಿಟ್ಟೆ ಎಂದು ಹೆಸರಿಟ್ಟರು. ಸ್ವಲ್ಪ ದೊಡ್ಡವನಾದ ಮೇಲೆ ಸುಮ್ಮಸುಮ್ಮನೇ ಜಿಗಿಯುತ್ತಿದ್ದ. ಆತನಿಗೆ ಜಿಗಿಯುವ ಜಿಟ್ಟೆ ಎಂದು ಕರೆದರು. ಆ ಜನ್ಮ ಮುಗಿಸಿ ಇನ್ನೊಂದು ಜನ್ಮ ತಾಳಿದ. ಆತನ ಹೆಸರು ಹನುಮ ಎಂದು ಹೆಸರಿಟ್ಟರು. ಆತ ಸುಮ್ಮನೇ ಹಾರುತ್ತಿದ್ದ. ಜನರು ಆತನಿಗೆ ಹಾರುವ ಹನುಮ ಎಂದು ಹೆಸರಿಟ್ಟರು. ಎಲ್ಲ ಜನ್ಮದಲ್ಲಿಯೂ ಹೀಗೆ ಹಾರುತ್ತ, ಜಿಗಿಯುತ್ತ ಇದ್ದ. ಮುಂದೆ ಕಲಿಯುಗ ಆರಂಭವಾಯಿತು. ಆತ ಮತ್ತೆ ಬಿಹಾರದಲ್ಲಿ ಜನಿಸಿದ. ಕಾಲ ಬದಲಾಗಿತ್ತು. ಆತ ರಾಜಕೀಯಕ್ಕೆ ಬಂದ. ಮೊದಲು ಅಲ್ಲಿ ಜಿಗಿದ. ನಂತರ ಇಲ್ಲಿ ಜಿಗಿದ. ಮತ್ತೆ ಇನ್ನೊಂದೆಡೆ, ಮಗದೊಮ್ಮೆ ಮುಂದೆ… ಎಲ್ಲಿ ಏನಾದರೂ ಸಿಗುತ್ತದೆ ಎಂದರೆ ಅಲ್ಲಿ ಜಿಗಿಯುತ್ತಿದ್ದ. ಅದಕ್ಕೆ ಜನರು ಆತನನ್ನು ಪಲ್ಟಿ ಪಕ್ಯಾ ಎಂದು ಕರೆಯುತ್ತಿದ್ದರು. ಈಗ ಮತ್ತೆ ಜಿಗಿದಿದ್ದಾನೆ ಆತನಿಗೆ ಪಲ್ಟಿರಾಮ ಎಂದು ಕರೆಯುತ್ತಿದ್ದಾರೆ. ಆ ವ್ಯಕ್ತಿ ಯಾರು ಗೊತ್ತೆ? ಎಂದು ಗಟಗಟ ನೀರು ಕುಡಿದು ಕಥೆ ಮುಗಿಸಿದಳು ಕಂಟ್ರಂಗಮ್ಮತ್ತಿ.