ಕಂದಕಕ್ಕೆ ಉರುಳಿದ ಕಾರು: ಬ್ರಾಹ್ಮಣ ಮಹಾಸಭಾ ಮುಖಂಡ ಸಾವು

Advertisement

ಖಾನಾಪುರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಬೆಳಗಾವಿಯತ್ತ ತೆರಳುತ್ತಿದ್ದ ಕಾರು ರಸ್ತೆ ಬದಿಯ ಕಂದಕಕ್ಕೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಇನ್ನುಳಿದ ಏಳು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಹೊಣಕಲ್ ಬಳಿ ಮಂಗಳವಾರ ಸಂಭವಿಸಿದೆ.
ಅಪಘಾತದಲ್ಲಿ ಮೃತರನ್ನು ಬಾಗಲಕೋಟ ಜಿಲ್ಲೆ ಸೂಳಿಕೆರೆ ನಿವಾಸಿ, ಹಿರಿಯ ವಕೀಲ ಹಾಗೂ ಬಾಗಲಕೋಟ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೃಷ್ಣ ಶ್ರೀನಿವಾಸ ದೇಶಪಾಂಡೆ (೭೯) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೃಷ್ಣ ಅವರ ಪತ್ನಿ ರಾಧಿಕಾ ದೇಶಪಾಂಡೆ (೬೫), ಮಗ (ಕಾರು ಚಾಲಕ) ಸಾಗರ ದೇಶಪಾಂಡೆ (೩೦), ಮೊಮ್ಮಗ ಸಾಚಿತ್ ದೇಶಪಾಂಡೆ (೭) ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾನ್ವಿ ದೇಶಪಾಂಡೆ (೧೨), ಆನಂದ ದೇಶಪಾಂಡೆ (೬೦), ಶಿಲ್ಪಾ ಕುಲಕರ್ಣಿ (೪೫), ಸ್ವಾತಿ ಫಡ್ನೀಸ್ (೫೦) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಗಲಕೋಟೆಯ ದೇಶಪಾಂಡೆ ಕುಟುಂಬದವರು ದಾಂಡೇಲಿಗೆ ಚಾರಣಕ್ಕೆ ತೆರಳಿದ್ದರು. ಮಂಗಳವಾರ ದಾಂಡೇಲಿಯಿಂದ ತಮ್ಮೂರಿನತ್ತ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.