ಕಂಬಳ ಗಾಮೀಣ ಕ್ರೀಡೆ ಮಾತ್ರವಲ್ಲ, ಗ್ರಾಮೀಣ ಬದುಕಿಗೆ ಶಕ್ತಿ ತುಂಬುವ ಕಲೆ: ಸಿಎಂ ಬಸವರಾಜ ಬೊಮ್ಮಾಯಿ

Advertisement

ಮೂಡುಬಿದಿರೆ: ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಬಿಂಬಿಸುವ ಕಂಬಳವು ಕ್ರೀಡೆ ಮಾತ್ರ ಅಲ್ಲ ಅದು ಗ್ರಾಮೀಣ ಬದುಕಿಗೆ ಶಕ್ತಿ ತುಂಬುವ ಕಲೆಯಾಗಿದೆ. ಶೌರ್ಯ, ಶಕ್ತಿ, ಕಲೆ, ಏಕಾಗ್ರತೆ ಇರುವ ಕಂಬಳ ತನ್ನದೇ ಆದ ಛಾಪನ್ನು ಮೂಡಿಸಿದೆ. ಮುಂದೊಂದು ದಿನ ಭಾರತದ ಎಲ್ಲಾ ರಾಜ್ಯಗಳಲ್ಲಿ ಕಂಬಳ ನಡೆಯಲಿದ್ದು, ವಿದೇಶಗಳಲ್ಲಿಯೂ ಕಂಬಳ ನಡೆಯುವ ದಿನಗಳು ಬರಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ ೨೦ ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳದಲ್ಲಿ ಭಾನುವಾರ ಭಾಗವಹಿಸಿ ಸುಶಾಸನ ದಿನಾಚರಣೆಯ ಅಂಗವಾಗಿ ವಾಜಪೇಯಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
ಕಂಬಳದಲ್ಲಿ ಕೋಣಗಳನ್ನು ಓಡಿಸಲು ಶಕ್ತಿಗಿಂತ ಬುದ್ಧಿಶಕ್ತಿಯೂ ಬೇಕು ಮತ್ತು ಹೊಂದಾಣಿಕೆ ಮತ್ತು ನಿಯಂತ್ರಿಸುವ ಕಲೆ ಗೊತ್ತಿದ್ದರೆ ಮಾತ್ರ ವಿಜೇತರಾಗುತ್ತಾರೆ ಎಂದ ಅವರು, ಪಾರಂಪರಿಕವಾದ ಈ ಈ ಕ್ರೀಡೆಯು ಸೂರ್ಯಚಂದ್ರರಿರುವ ತನಕ ಸದಾ ಬೆಳಗುತ್ತಿರಲಿ ಎಂದು ಶುಭ ಹಾರೈಸಿದರು.
ಕಂಬಳ ಸಮಿತಿಯ ವತಿಯಿಂದ ಮುಖ್ಯಮಂತ್ರಿ ಅವರನ್ನು ಸನ್ಮಾನಿಸಲಾಯಿತು.
ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, ಸಚಿವರಾದ ಸಿ.ಟಿ. ರವಿಕುಮಾರ್, ನಾರಾಯಣಗೌಡ, ಜಿಲ್ಲಾಧಿಕಾರಿ ರವಿ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಕೆ., ವಲಯಾರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಪೊಲೀಸ್ ವರಿಷ್ಠಾಧಿಕಾರಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಭಾಸ್ಕರ್ ಎಸ್.ಕೋಟ್ಯಾನ್ ಇದ್ದರು.
ಶಾಸಕ ಉಮಾನಾಥ ಕೋಟ್ಯಾನ್ ಸ್ವಾಗತಿಸಿದರು. ಕಂಬಳವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.