ಕಟ್ಟಡ ಪರವಾನಿಗೆಗೆ ಎನ್‌ಓಸಿ ಹೆಸರಲ್ಲಿ ಕಿರಿಕಿರಿ: ವರದಿ ಸಲ್ಲಿಕೆಗೆ ಸಮಿತಿ ನೇಮಕ

ಹುಬ್ಬಳ್ಳಿ ವಿಮಾನ ನಿಲ್ದಾಣ
Advertisement

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಪಡೆಯಲು ಎನ್‌ಓಸಿ ಹೆಸರಿನಲ್ಲಿ ನಿವಾಸಿಗಳನ್ನು ಅಲೆದಾಡಿಸುತ್ತಿರುವ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆ ಮೇ ೨೨ ಮತ್ತು ೨೪ ರಂದು ಪ್ರಕಟಿಸಿದ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು, ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಪಾಲಿಕೆಯ ಮುಖ್ಯ ಹಣಕಾಸು ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ತನಿಖೆ ನಡೆಸಿ ೧೫ ದಿನದಲ್ಲಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಹು-ಧಾ ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ಅವರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿದ್ದು, ಸಹ ಕಾರ್ಯ ನಿರ್ವಾಹಕ ಅಭಿಯಂತರ ಶರಣಬಸಪ್ಪ ಕೆಂಭಾವಿ, ಪಾಲಿಕೆ ಲೆಕ್ಕದ ಶಾಖೆಯ ಅಧೀಕ್ಷಕರಾದ ಶೌಕತಲಿ ಸುಂಕದ, ಎಂ.ಎನ್. ಕಟ್ಟಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಪರಿಶೀಲನೆಗೆ ಮಂಗಳವಾರ ಆದೇಶಿಸಿದ್ದಾರೆ.
ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಗೋಕುಲ ರಸ್ತೆಯ ಪ್ರದೇಶ, ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ(ಆರೇಂಜ್ ಝೋನ್) ಕಟ್ಟಡ ಪರವಾನಿಗೆ ನೀಡುವ ಕುರಿತು ವಿಳಂಬ ನೀತಿ ಮತ್ತು ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲಿಯೇ ಪಾಲಿಕೆ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ.
ನಗರ ಯೋಜನೆ ವಿಭಾಗ(ಹುಬ್ಬಳ್ಳಿ ಹಾಗೂ ಧಾರವಾಡ) ವಲಯ ಕಚೇರಿ ೧ ರಿಂದ ೧೨ ರ ಕಚೇರಿಗಳಲ್ಲಿ ಕಟ್ಟಡ ಪರವಾನಿಗೆ ಹಾಗೂ ಕಟ್ಟಡ ಮುಕ್ತಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು(ಆನ್‌ಲೈನ್ ಹಾಗೂ ಆಫ್‌ಲೈನ್) ಹಾಗೂ ದಾಖಲಾತಿ ಪರಿಶೀಲನೆ ಮಾಡಿ ವಿಚಾರಣೆ ನಡೆಸಬೇಕು. ತಪ್ಪುಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ಸಮಿತಿಯಲ್ಲಿನ ವಿಚಾರಣಾಧಿಕಾರಿಗಳು ಹಾಗೂ ಅಧಿಕಾರಿಗಳು ಪ್ರಾಥಮಿಕವಾಗಿ ವಿಚಾರಣೆ ಪ್ರಕ್ರಿಯೆಯನ್ನು ಕೈಗೊಂಡು, ತಮ್ಮ ಸ್ಪಷ್ಟ ಅಭಿಪ್ರಾಯದ ವರದಿಯನ್ನು ಸೂಕ್ತ ದಾಖಲೆಗಳೊಂದಿಗೆ ೧೫ ದಿನಗಳ ಒಳಗಾಗಿ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಕಳೆದ ಶುಕ್ರವಾರ ಇದೇ ವಿಚಾರವಾಗಿ ಪಾಲಿಕೆ ಆಯುಕ್ತರು ಏಳು ಜನ ಅಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿದ್ದು, ಅದನ್ನು ವಾಪಾಸ್ ಪಡೆದಿದ್ದು, ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ.