ಕಣ್ಣಿಗೆ ನೀರು ಹಚ್ಚಿಕೊಳ್ಳುವುದೇತಕ್ಕೆ?

ಗುರುಬೋಧೆ
Advertisement

ದೇವರ ಪೂಜೆಯ ಕೊನೆಯಲ್ಲಿ ವಿಷ್ಣು ಸ್ಮರಣೆ ಮಾಡುತ್ತಾರೆ. ಅಚ್ಯುತ, ಅನಂತ, ಗೋವಿಂದ ಮತ್ತು ವಿಷ್ಣು ಎಂಬ ನಾಲ್ಕು ನಾಮಗಳನ್ನು ಹೇಳುವ ಮೂಲಕ ಇದನ್ನು ಮಾಡುತ್ತಾರೆ. ಎಲ್ಲಾ ಧಾರ್ಮಿಕ ಆಚರಣೆಯಲ್ಲಿಯೂ ಕೊನೆಯಲ್ಲಿ ಹೀಗೆ ನಾಲ್ಕು ನಾಮಗಳನ್ನು ಉಚ್ಚರಿಸಿ ವಿಷ್ಣು ಸ್ಮರಣೆ ಮಾಡುತ್ತಾರೆ. ವಿಷ್ಣು ಸ್ಮರಣೆಗೆ ಮೊದಲು ಪುರೋಹಿತರು ಕಣ್ಣಿಗೆ ನೀರನ್ನು ಹಚ್ಚಿಕೊಳ್ಳಿ ಎನ್ನುತ್ತಾರೆ. ಆಗ ಕನ್ನಡಕ ಹಾಕಿಕೊಂಡು ಪೂಜೆಯಲ್ಲಿ ಕೂತವರೂ ಕೂಡ ಕನ್ನಡಕದ ಗ್ಲಾಸಿನ ಕೆಳಗೆ ಒದ್ದೆಯಾದ ಕೈ ಬೆರಳನ್ನು ತೂರಿಸಿ ಕಣ್ಣುಗಳನ್ನು ಒರೆಸಿಕೊಳ್ಳುತ್ತಾರೆ. ವಿಷ್ಣು ಸ್ಮರಣೆಗೆ ಮೊದಲು ಯಾಕೆ ಹೀಗೆ ಕಣ್ಣುಗಳಿಗೆ ನೀರು ಹಚ್ಚಿಕೊಳ್ಳುತ್ತಾರೆ?
ವಿಷ್ಣು ಸ್ಮರಣೆ ಮಾಡುವಾಗ ನಮ್ಮ ಮನಸ್ಸು ಆಲಸ್ಯ, ತೂಕಡಿಕೆ ಮುಂತಾದ ತಮೋ ಗುಣದ ಕಾರ್ಯಗಳಿಗೆ ಒಳಗಾಗದಿರಲೆಂದು ಹೀಗೆ ಮಾಡುತ್ತಾರೆ. ಮುಖ ಮನಸ್ಸಿನ ಆವಿರ್ಭಾವದ ಸ್ಥಾನ. ಇಡೀ ಮುಖಕ್ಕೆ ನೀರು ಹಾಕಿ ತೊಳೆದುಕೊಂಡಾಗಲೂ ಇದೇ ಪರಿಣಾಮವಾಗುತ್ತದೆ. ಪೂಜೆಗೆ ಕೂತ ಸ್ಥಳದಲ್ಲಿ ಇಡೀ ಮುಖಕ್ಕೆ ನೀರು ಹಾಕಿ ತೊಳೆಯಲು ಅನುಕೂಲತೆ ಇರುವುದಿಲ್ಲ. ಅದಕ್ಕಾಗಿ ಕಣ್ಣಿಗೆ ಮಾತ್ರವೇ ನೀರು ಹಚ್ಚಿಕೊಳ್ಳುವ ಪದ್ಧತಿ ಬಂದಿರಬಹುದು. ವೇದಾಂತ ಶಾಸ್ತ್ರದ ಪ್ರಕಾರ ಜಾಗೃತವಸ್ಥೆಯಲ್ಲಿ ಜೀವಾತ್ಮನು ಕಣ್ಣಿನಲ್ಲಿ ಅಥವಾ ಕಣ್ಣಿನ ಭಾಗದಲ್ಲಿ ಹೆಚ್ಚು ಸನ್ನಿಹಿತನಾಗಿರುತ್ತಾನೆ.(ನೇತ್ರಸ್ಥಂ ಜಾಗರಿತಂ ವಿದ್ಯಾತ್) ಈ ದೃಷ್ಟಿಯಿಂದಲೂ ಕಣ್ಣಿಗೆ ನೀರು ಹಚ್ಚಿಕೊಳ್ಳುವ ಪದ್ಧತಿ ಬಂದಿರಬಹುದು.
ಮಾಡಿದ ಧರ್ಮಾಚರಣೆಯಲ್ಲಿ ಆಗಿರಬಹುದಾದ ಲೋಪದೋಷಗಳ ಪರಿಮಾರ್ಜನೆಗಾಗಿ ಕೊನೆಯಲ್ಲಿ ವಿಷ್ಣುಸ್ಮರಣೆ. ಆ ವಿಷ್ಣುಸ್ಮರಣೆಯಲ್ಲಿಯೂ ಲೋಪದೋಷಗಳಾದರೆ ಸರಿಪಡಿಸಲು ಬೇರೆ ಮಾರ್ಗ ಇಲ್ಲ. ಹಾಗಾಗಿ ಅದನ್ನು ಪೂರ್ಣ ಮನಸ್ಸಿನಿಂದ ಮಾಡುವಂತಾಗಬೇಕು. ಧರ್ಮಾಚರಣೆಗಳಲ್ಲಿ ಅನವಧಾನಗಳಿಂದ ಆಗುವ ತಪ್ಪುಗಳನ್ನು ಪ್ರಮಾದಗಳೆಂದು ಕರೆಯುತ್ತಾರೆ. ಇಂತಹ ಪ್ರಮಾದಗಳಿಗೆ ಅವಕಾಶ ಕೊಡಬಾರದು. ಉಪನಿಷತ್ತು ಹೆಜ್ಜೆ ಹೆಜ್ಜೆಗೆ `ನ ಪ್ರಮದಿತವ್ಯಮ್’ (ಪ್ರಮಾದಕ್ಕೆ ಅವಕಾಶ ಕೊಡಬೇಡ) ಎಂಬುದಾಗಿ ಹೇಳುತ್ತದೆ. ತೂಕಡಿಕೆ ಬಂದರೆ ಅಥವಾ ಮನಸ್ಸು ಬೇರೆಲ್ಲೋ ತೊಡಗಿದ್ದರೆ ಹಿಡಿದ ಕೆಲಸದಲ್ಲಿ ಪ್ರಮಾದವು ಆಗೇ ಆಗುತ್ತದೆ. ಇವುಗಳನ್ನು ತಪ್ಪಿಸಲು ಧಾರ್ಮಿಕ ಆಚರಣೆಗಳಲ್ಲಿ ಕೂತವನಿಗೆ ಇರುವ ತತ್ ಕ್ಷಣದ ಉಪಾಯ. ಸುಲಭದ ಉಪಾಯ ಕಣ್ಣಿಗೆ ನೀರಚ್ಚಿಕೊಳ್ಳುವುದು. ಆದ್ದರಿಂದ ಇದನ್ನು ಕೊನೆಯಲ್ಲಿ ಮಾತ್ರವೇ ಮಾಡಬೇಕೆಂದಿಲ್ಲ. ಆರಂಭದಲ್ಲಿ, ಮಧ್ಯದಲ್ಲಿ, ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಕಣ್ಣಿಗೆ ನೀರು ಹಚ್ಚಿಕೊಳ್ಳಬಹುದು. ಹೀಗೆ ಮನಸ್ಸಿನ ಸಂಪೂರ್ಣ ಜಾಗರೂಕ ಸ್ಥಿತಿ ಧರ್ಮಾಚರಣೆಯ ಮೂಲ ಪೀಠಿಕೆ.