ಬೆಂಗಳೂರು: ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಕನ್ನಡಿಗರು ದೊಡ್ಡ ಸಾಧನೆಗಳನ್ನು ಮಾಡಿದ್ದು, ಅದನ್ನು ಗುರುತಿಸುವ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ದೂರದ ಯಾವುದೇ ದೇಶದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ನಾವು ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ಮಾಡಬೇಕಿದೆ. ಕನ್ನಡದ ಬಗ್ಗೆ ಸ್ವಾಭಿಮಾನ ಇದ್ದಾಗ ಈ ಭಾಷೆಗೆ ಧಕ್ಕೆ ಬರುವುದಿಲ್ಲ ಎಂದರು.
ಸೂರ್ಯಚಂದ್ರರಿರುವವರೆಗೂ ಕನ್ನಡಕ್ಕೆ ಆತಂಕವಿಲ್ಲ:
ಇಡೀ ಸೃಷ್ಟಿಯನ್ನು ಎತ್ತಿ ಹಿಡಿದು ತನ್ನ ಆತ್ಮಚೈತನ್ಯ ಕೊಟ್ಟು ಕಾಪಾಡುತ್ತಾಳೆ. ಯಾರ ಕಾಲದಲ್ಲಿ ಏನು ಆಗಬೇಕೊ ಅದು ಆಗುತ್ತದೆ. ಭುವನೇಶ್ವರಿ ಪುತ್ಥಳಿ ಮಹೇಶ ಜೋಶಿಯವರ ಕಡೆಯಿಂದ ಆಗಿದೆ. ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ದೇವರ ಲಿಪಿ ಅಂತ ಕರೆಯಲಾಗುತ್ತದೆ. ಕನ್ನಡ ಭಾಷೆ ಶ್ರೀಮಂತವಾಗಲು ಕಾರಣವೆಂದರೆ ಅದು ಬದುಕಿಗೆ ಬಹಳ ಹತ್ತಿರವಾಗಿದೆ. ಭಾವನೆಗಳಿಂದ ತುಂಬಿರುವ ಭಾಷೆಯಾಗಿದೆ. ಕನ್ನಡಕ್ಕೆ ಯಾವತ್ತೂ ಆಪತ್ತು ಬಂದಿಲ್ಲ. ಎಲ್ಲಿಯವರೆಗೆ ಸೂರ್ಯಚಂದ್ರರು ಇರುತ್ತಾರೊ ಅಲ್ಲಿಯವರೆಗೆ ಕನ್ನಡಕ್ಕೆ ಯಾವುದೇ ಆತಂಕ ಇಲ್ಲ ಎಂದರು.
ಕನ್ನಡಕ್ಕೆ ಪ್ರಾಶಸ್ತ್ಯ ನೀಡುವ ವಿಧೇಯಕ:
ಬೆಳಗಾವಿ ಅಧಿವೇಶನದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡುವ ವಿಧೇಯಕ ಮಂಡನೆ ಮಾಡಲಾಗುವುದು. ಈ ಬಗ್ಗೆ ಚರ್ಚೆ ಮಾಡಿ ಅನುಮೋದನೆ ಮಾಡುತ್ತೇವೆ. ಅದು ಎಲ್ಲ ರೀತಿಯಲ್ಲಿ ಕಾರ್ಯಗತ ಮಾಡುವ ಕೆಲಸ ಮಾಡುತ್ತೇವೆ. ಸರ್ಕಾರ ಸಂಘ-ಸಂಸ್ಥೆಗಳ ಮನದಾಳದ ಮಾತುಗಳು ಅದರಲ್ಲಿ ಬರುವಂತೆ ನೋಡಿಕೊಳ್ಳಲಾಗುವುದು ಎಂದರು.