ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಹೋರಾಟ

Advertisement

ಹುಬ್ಬಳ್ಳಿ: ಇಂಗ್ಲಿಷ್ ನಾಮಫಲಕ ತೆರವುಗೊಳಿಸಿ ಕನ್ನಡ ಬೋರ್ಡ್ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು.
ಕೈಯಲ್ಲಿ ಬಡಿಗೆ ಹಿಡಿದು ಅನ್ಯ ಭಾಷೆ ಬ್ಯಾನರ್ ತೆರವುಗೊಳಿಸಲು ಯತ್ನಿಸಿದ ಕಾರ್ಯಕರ್ತರು ಅಲ್ಲಲ್ಲಿ ಪೊಲೀಸರ ಜತೆ ವಾಗ್ವಾದ ನಡೆಸಿದ ಘಟನೆಗಳು ವರದಿಯಾಗಿವೆ. ಧಾರವಾಡದ ಕಡಪಾ ಮೈದಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಮಾರುಕಟ್ಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಕೈಗಳಲ್ಲಿ ಕಟ್ಟಿಗೆ ಹಿಡಿದಿದ್ದ ಕರವೇ ಕಾರ್ಯಕರ್ತರು ರಸ್ತೆಯುದ್ದಕ್ಕೂ ಇಂಗ್ಲಿಷ್ ಬೋರ್ಡ್ ಹಾಕಿದ್ದ ಅಂಗಡಿಗಳ ನಾಮಫಲಕ ತೆರವುಗೊಳಿಸುತ್ತಲೇ ಸಾಗುತ್ತಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸರು ಬೋರ್ಡ್ ಧ್ವಂಸಗೊಳಿಸದಂತೆ ಎಚ್ಚರಿಕೆ ನೀಡಿದರು. ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಸುಮಾರು ೨೦ಕ್ಕೂ ಹೆಚ್ಚು ದೊಣ್ಣೆಗಳನ್ನು ವಶಕ್ಕೆ ಪಡೆದರು.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಅಳವಡಿಸಲಾದ ಅನ್ಯ ಭಾಷೆಯ ಬ್ಯಾನರ್ ತೆರವು ಮಾಡಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು. ಗದಗ, ಹಾವೇರಿಗಳಲ್ಲೂ ಕನ್ನಡ ಕಾರ್ಯಕರ್ತರು ಕನ್ನಡ ಬೋರ್ಡ್ ಅಳವಡಿಕೆಗೆ ಒತ್ತಾಯಿಸಿ ಇತರ ಭಾಷೆ ಬೋರ್ಡ್ ಹರಿದು ಹಾಕಲು ಮುಂದಾದರು.
೧೩ರ ವರೆಗೆ ಗಡುವು: ಧಾರವಾಡ ನಗರದೆಲ್ಲೆಡೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು, ಮಾ. ೧೩ರ ಒಳಗಾಗಿ ಶೇ. ೬೦ರಷ್ಟು ಕನ್ನಡ ಫಲಕವನ್ನು ಹಾಕುವಂತೆ ಅಂಗಡಿಕಾರರಿಗೆ ಮತ್ತು ವ್ಯಾಪಾರಸ್ಥರಿಗೆ ಮನವಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶಹರ ಠಾಣೆ ಸಿಪಿಐ ವಿಶ್ವನಾಥ ಚೌಗಲೆ ಅವರೊಂದಿಗೆ ಕಾರ್ಯಕರ್ತರ ವಾಗ್ವಾದ ನಡೆಯಿತು. ಬಳಿಕ ಪ್ರತಿಭಟನೆ ಮುಕ್ತಾಯಗೊಂಡಿತು.