ಕನ್ನಡ ಶಾಲೆ ದುರಸ್ತಿ, ಅಧಿಕಾರಿಗಳ ವರ್ತನೆಗೆ ಆಕ್ಷೇಪ

ನಾಡೋಜ ಡಾ.ಮಹೇಶ ಜೋಶಿ
Advertisement

ಬೆಳಗಾವಿ: ಖಾನಾಪುರ ತಾಲೂಕು ಲಿಂಗನಮಠ ಗ್ರಾಮದ ಕನ್ನಡ ಶಾಲೆಯ ಕಟ್ಟಡ ದುರಸ್ತಿಗೆ ಶಿಕ್ಷಣ ಇಲಾಖೆಯಲ್ಲಿ ಅನುದಾನ ಇಲ್ಲ ಎಂದು ಹೇಳುತ್ತಿರುವ ಅಧಿಕಾರಿಗಳ ವರ್ತನೆ ಆಕ್ಷೇಪಾರ್ಹ. ಕನ್ನಡ ಶಾಲೆ ಕಡೆಗಣಿಸುವುದನ್ನು ಪರಿಷತ್ತು ಸಹಿಸಿಕೊಳ್ಳುವುದಿಲ್ಲ ಎಂದು ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಂಘದ ಕನ್ನಡ ಭವನ ಉದ್ಘಾಟನೆ ನಿಮಿತ್ತ ಬಹರೇನ್‌ಗೆ ತೆರಳಿರುವ ನಾಡೋಜ ಡಾ.ಮಹೇಶ ಜೋಶಿ, ಲಿಂಗನಮಠ ಗ್ರಾಮದಲ್ಲಿ ಕೂಡಲೇ ಕನ್ನಡ ಶಾಲೆಯ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
`ಸಂಯುಕ್ತ ಕರ್ನಾಟಕ’ದಲ್ಲಿ ಶುಕ್ರವಾರ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಅವರು, ಖಾನಾಪುರ ತಾಲೂಕು ಗಡಿ ಪ್ರದೇಶದಲ್ಲಿದ್ದು ಈ ಭಾಗದಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡಬೇಕಾದ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ವರ್ತನೆ ಮಾಡುವುದು ಸರಿಯಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಉರ್ದು ಶಾಲೆಗೆ ನೀಡುತ್ತಿರುವ ಮನ್ನಣೆ, ಕನ್ನಡ ಶಾಲೆಗೆ ನೀಡದೇ ಇರುವುದು ಖಂಡನಾರ್ಹ. ತಕ್ಷಣದಲ್ಲಿ ಕನ್ನಡ ಶಾಲೆಯ ದುರಸ್ತಿಗೆ ಮುಂದಾಗದಿದ್ದಲ್ಲಿ, ಖಾನಾಪುರ ತಾಲ್ಲೂಕಿನ ಲಿಂಗನಮಠ ಕನ್ನಡ ಶಾಲೆಯ ಎದುರು ಖುದ್ದು ತಾವೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲಾಡಳಿತ ಹಾಗೂ ಬೆಳಗಾವಿ ಜಿಲ್ಲಾಪಂಚಾಯಿತಿ ಅಧಿಕಾರಿಗಳು ಲಿಂಗನಮಠ ಕನ್ನಡ ಶಾಲೆಗೆ ತೆರಳಿ ದುರಸ್ತಿ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಬೇಕು. ಅದಕ್ಕೆ ಬೇಕಾದ ಅನುದಾನದ ಕೊರತೆಯಾದಲ್ಲಿ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರ, ಶಾಸಕರ ಗಮನಕ್ಕೆ ತರುವ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಅನುದಾನ ತರಿಸಿಕೊಂಡಾದರೂ ಎಲ್ಲಾ ದುರಸ್ತಿ ಕಾರ್ಯ ಮಾಡಿ ಮುಗಿಸುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಮುಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.