ಗಣಿನಾಡಲ್ಲೇ ಬಿಜೆಪಿಗೆ ಕಂಪನ: ಬಿಜೆಪಿಗೆ ಟಾನಿಕ್ ನೀಡಬಲ್ಲರೇ ಅಮಿತ್ ಶಾ

amit shah
Advertisement

ಬಳ್ಳಾರಿ: ಬಿಜೆಪಿಗೆ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರ ತಂದುಕೊಡುವಲ್ಲಿ ಸಫಲವಾಗಿದ್ದ ಗಣಿನಾಡಲ್ಲೇ ಈಗ ಬಿಜೆಪಿಗೆ ಕಂಪನ ಶುರುವಾಗಿದೆ. ಪಕ್ಷದಿಂದ ಜನಾರ್ಧನರೆಡ್ಡಿ ಹೊರನಡೆದ ನಂತರ ನಾವಿಕನಿಲ್ಲದ ಹಡಗಿನಂತೆ ಬಿಜೆಪಿ ಸ್ಥಿತಿಯಾಗಿದ್ದು ಇದೇ ದಿ. 23ರಂದು ಸಂಡೂರಿಗೆ ಭೆಟ್ಟಿ ನೀಡಲಿರುವ ಬಿಜೆಪಿ ನೇತಾರ, ಕೇಂದ್ರ ಸಚಿವ ಅಮಿತ್ ಶಾ ಅವರು ಬಿಜೆಪಿಗೆ ಟಾನಿಕ್ ತುಂಬಬಲ್ಲರೇ ಎಂಬುದು ಕುತೂಹಲ ಕೆರಳಿಸಿದೆ.
ಗಣಿದಣಿಗಳಾದ ರೆಡ್ಡಿ ಸಹೋದರರು ೨೦೦೮ರಲ್ಲಿ ಸಕ್ರಿಯ, ಜಿದ್ದಿನ ರಾಜಕಾರಣ ಮಾಡಿದ್ದರಿಂದಲೇ ಬಿಜೆಪಿ ದಕ್ಷಿಣ ಭಾರತದಲ್ಲಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಪ್ರಮುಖ ಸಹಕಾರಣವಾಗಿತ್ತು. ಅದಾದ ನಂತರವೂ ಕೆಲವರ್ಷ ತನ್ನದೇ ಆದ ಗಟ್ಟಿತನವನ್ನು ಗಣಿ ಜಿಲ್ಲೆಗಳು ಹೊಂದಿದ್ದವು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿ ಹೋಗಿ ಬಿಜೆಪಿಗೆ ನೂರೆಂಟು ಸಮಸ್ಯೆಗಳು ಎದುರಾಗಿವೆ.
ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿದರೂ, ಬೇಲ್ ಮೇಲೆ ಹೊರಬಂದ ಜನಾರ್ಧನ ರೆಡ್ಡಿ ಪಕ್ಷದ ಮೇಲೆ ಬಿಗಿ ಹಿಡಿತ ಹೊಂದಿದ್ದರು. ಬರೀ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯಮಟ್ಟದಲ್ಲೂ ತಮ್ಮ ಮಾತು ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ತೀರಾ ಇತ್ತೀಚಿಗೆ ಅಮಿತ್ ಶಾ ಜನಾರ್ಧನ ರೆಡ್ಡಿಗೂ ಬಿಜೆಪಿಗೆ ಸಂಬಂಧ ಇಲ್ಲ ಎಂದ ಮೇಲೂ ಹಲವು ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯರ‍್ಯಾರು ಯಾವ್ಯಾವ ಸ್ಥಾನ ಅಲಂಕರಿಸಬೇಕು ಎಂಬುದನ್ನು ಗಣಿ ದಣಿಯೇ ನಿರ್ಧರಿಸುತ್ತಿದ್ದರು. ನಿಗಮ ಮಂಡಳಿಯ ನೇಮಕಾತಿ ವಿಷಯದಲ್ಲಿ ರೆಡ್ಡಿ ತೋರಿದ ಹಠಮಾರಿತನ ಇದಕ್ಕೆ ತಕ್ಕ ಉದಾರಹಣೆ ಆಗಿತ್ತು.
ಕೊನೆಗೂ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಬಿಜೆಪಿ ಕೆಲ ನಾಯಕರ ಹಠಮಾರಿತನಕ್ಕೆ ಬೇಸತ್ತ ರೆಡ್ಡಿ ಪಕ್ಷ ತೊರೆದು ತಮ್ಮದೇ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಕಟ್ಟಿದ್ದಾಯಿತು. ಇದರಿಂದ ಈಗ ಬಿಜೆಪಿ ಅವಳಿ ಜಿಲ್ಲೆಯಲ್ಲಿ ಬಾಲಂಗೋಸಿ ಇಲ್ಲದ ಗಾಳಿಪಟದಂತಾಗಿದೆ. ಪಕ್ಷಕ್ಕೆ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ತಮ್ಮ ಪ್ರಶ್ನಾತೀತ ನಾಯಕರಾಗಿದ್ದ ಜನಾರ್ಧನ ರೆಡ್ಡಿ ಖುದ್ದು ಹೊಸ ಪಕ್ಷ ಕಟ್ಟಿದ ಮೇಲೆ ಅವರ ಬೆನ್ನಿಗೆ ಇದ್ದ ಕಾರ್ಯಕರ್ತರು, ಮುಖಂಡರು ಇದೀಗ ಗೊಂದಲಕ್ಕೆ ಸಿಲುಕಿದ್ದಾರೆ. ಈ ಹಿಂದೆ ಬಿಎಸ್‌ಆರ್‌ಸಿ ಕಟ್ಟಿದಾಗ ರಾಮುಲು ಹಿಂದೆ ಹೋದಂತೆ ಹೋಗುವುದೇ ಬೇಡವೋ ಎಂಬ ಗೊಂದಲ ಒಂದು ಕಡೆಯಾದರೆ, ಬಿಜೆಪಿಯಲ್ಲಿಯೇ ಒಳ್ಳೆಯ ಅವಕಾಶ ಸಿಗಬಹುದೇನೋ ಎಂಬ ಆಸೆ ಬೇರೆ.
ಇನ್ನು ಪಕ್ಷದ ನಾಯಕತ್ವದ ವಿಷಯ ಬಂದರೆ ಜನಾರ್ಧನ ರೆಡ್ಡಿ ಜಾಗದಲ್ಲಿ ಬೇರೆ ನಾಯಕರನ್ನು ಊಹಿಸಿಕೊಳ್ಳಲು ಪಕ್ಷದ ಕಾರ್ಯಕರ್ತರಿಗೆ ಸಾಧ್ಯವಾಗುತ್ತಿಲ್ಲ. ರಾಮುಲು ಸಾಧ್ಯವಾದಷ್ಟು ಇಡೀ ಜಿಲ್ಲೆ ಮಾತ್ರವಲ್ಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ ಎಂಬುದು ಮೇಲ್ನೊಟಕ್ಕೆ ಕಂಡುಬರುತ್ತಿದೆ.
ಇದೇ ರೀತಿಯ ಪರಿಸ್ಥಿತಿ ನೂತನ ವಿಜಯನಗರ ಜಿಲ್ಲೆಯಲ್ಲೂ ಇದೆ. ಜಿಲ್ಲಾ ರಚನೆ ಆದ ಬಳಿಕ ಇಡೀ ಜಿಲ್ಲಾ ಬಿಜೆಪಿಯ ಪ್ರಶ್ನಾತೀತ ನಾಯಕರೆಂಬಂತೆ ಆನಂದ್‌ಸಿಂಗ್‌ರನ್ನು ಬಿಂಬಿಸಲಾಯಿತು. ಆದರೆ, ಜಿಲ್ಲಾ ಉಸ್ತುವಾರಿ ಕೈ ಬಿಟ್ಟು ಹೋದ ಮೇಲೆ ಸಿಂಗ್ ಜಿಲ್ಲಾ ರಾಜಕೀಯದಲ್ಲಿ ಬೇಕೆಂದೇ ತಲೆ ಹಾಕುತ್ತಿಲ್ಲ ಎನ್ನಲಾಗುತ್ತಿದೆ. ಹಂಪಿ ಉತ್ಸವದಲ್ಲಿ ಆದ ಅಯೋಮಯವೇ ಇದಕ್ಕೆ ತಾಜಾ ಉದಾರಹಣೆ ಎನ್ನಬಹುದು.
ಒಟ್ಟಾರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಮ್ಮ ಬಳ್ಳಾರಿ ಜಿಲ್ಲಾ ಬಿಜೆಪಿ ಇದೀಗ ಶಕ್ತಿಗುಂದಿದ ಹಾಗೆ ಕಂಡುಬರುತ್ತಿದೆ. ಇದೇ ಕಾರಣವೋ ಏನೊ ಅಮಿತ್ ಶಾ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಪಕ್ಷದಲ್ಲಿರುವ ಗೊಂದಲಗಳಿಗೆ ತಿಲಾಂಜಲಿ ಇರಿಸಿ ಹೊಸದೊಂದು ಮಾರ್ಗವನ್ನು ಕಂಡುಕೊಳ್ಳಬಲ್ಲರೇ ನೋಡಬೇಕಿದೆ.