ಕಮಲಾ ಪವರ್ ಮಹಿಳೆ ಅವಾರ್ಡ್ ಪ್ರಶಸ್ತಿ ಪಡೆದ ಧಾರವಾಡದ ಅಪರ್ಣಾ ಪೂಜಾರಿ

ಅಪರ್ಣಾ
Advertisement

ಹುಬ್ಬಳ್ಳಿ: ಧಾರವಾಡದ ಅಪರ್ಣಾ ಪೂಜಾರಿಯವರಿಗೆ ಕಮಲಾ ಪವರ್ ಮಹಿಳೆ ಅವಾರ್ಡ್ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ನವ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದೇಶಾಂಗ ವ್ಯವಹಾರ ಹಾಗೂ ಸಂಸ್ಕೃತಿ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ದೇಶದ ೭೫ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೆಣ್ಣು ಮಕ್ಕಳ ಶಿಕ್ಷಣ, ಮಹಿಳಾ ಆರೋಗ್ಯ, ಸಂಗೀತ, ಭಾರತೀಯ ಸಂಸ್ಕೃತಿ ಮತ್ತು ಇನ್ನೂ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರು ತೋರಿದ ಶ್ರೇಷ್ಠತೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಯಿತು.
ಕಮಲಾ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ನಿದರ್ಶನಾ ಗೋವಾನಿ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ. ಪ್ರಶಸ್ತಿ ಪಡೆದ ಎಲ್ಲ ಮಹಿಳೆಯರು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.
ರೈಲ್ವೆ ಮತ್ತು ಜವಳಿ ರಾಜ್ಯ ಸಚಿವ ದರ್ಶನ ಜರ್ದೋಶ್, ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣ, ಲೀಲಾ ದೇವಿ ಇದ್ದರು.

ಇತ್ತೀಚೆಗೆ ನವ ದೆಹಲಿಯಲ್ಲಿ ನಡೆದ ಕಮಲಾ ಪವರ್ ಮಹಿಳೆ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದೇಶಾಂಗ ವ್ಯವಹಾರ ಹಾಗೂ ಸಂಸ್ಕೃತಿ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಧಾರವಾಡದ ಅಪರ್ಣಾ ಪೂಜಾರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.