ಕರುನಾಡಿಗೆ ಅನ್ಯಾಯವಾಗಿದ್ದಾಗ ಸಚಿವ ಸ್ಥಾನ ತ್ಯಾಗ ಮಾಡಿದ್ದ ಅಂಬರೀಶ್

Advertisement

ಮಂಡ್ಯ :- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆದಾಗ ಕೇಂದ್ರ ಸಚಿವ ಸ್ಥಾನಕ್ಕೆ ಅಂಬರೀಶ್ ರಾಜೀನಾಮೆ ನೀಡಿ ರೈತರ ಪರ ನಿಲ್ಲಲಿಲ್ಲವಾ ಆದರೆ ಕಾಂಗ್ರೆಸ್ ಕಾವೇರಿ ವಿಷಯದಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ನಿರಂತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ತಮಿಳುನಾಡಿನ ಡಿಎಂಕೆ ಸರ್ಕಾರ ಓಲೈಸಿ ಕೊಳ್ಳಲು ರಾಜ್ಯದ ರೈತರನ್ನು ಬಲಿಕೊಡುತ್ತಿದೆ, ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ರಾತ್ರೋರಾತ್ರಿ ನೀರು ಹರಿಸಿದೆ ಎಂದರು.

ಚುನಾವಣೆಗೂ ಮುನ್ನ ರೈತರ ಹಿತ ಕಾಪಾಡುವುದಾಗಿ ಮೇಕೆದಾಟು ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಎಲ್ಲಾ ನಿರೀಕ್ಷೆ ಹುಸಿಯಾಗಿದ್ದು ಇದೀಗ ರೈತರನ್ನು ಸಂಕಷ್ಟಕ್ಕೆ ದೂಡಿದ್ದು, ಬೀದಿಗೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ, ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್ ನಾಯಕರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ದೇಶದ ಗಡಿ ಕಾಯುವ ಯೋಧ ಒಂದು ಕಣ್ಣು, ಅನ್ನ ನೀಡುವ ರೈತ ಮತ್ತೊಂದು ಕಣ್ಣು ಹಾಗಾಗಿ ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ಕಾವೇರಿ ಹೋರಾಟಕ್ಕೆ ಬಂದಿದ್ದೇವೆ ಹೊರತು ರಾಜಕಾರಣ ಮಾಡಲು ಅಲ್ಲ,ರಾಜಕಾರಣ, ಚುನಾವಣೆ ಮತ್ತು ಅಧಿಕಾರ ಯಾವುದು ಶಾಶ್ವತವಲ್ಲ, ಕಾಂಗ್ರೆಸ್ ಸರ್ಕಾರ ರೈತರಿಗೆ ಸಂಕಷ್ಟ ತಂದೊಡ್ಡಿದೆ ಎಂದರು.

ಕಾವೇರಿ ನದಿ ನೀರು ವಿಚಾರದಲ್ಲಿ ಆರಂಭದಿದ್ದರೂ ಸರ್ಕಾರ ವೈಫಲ್ಯತೆ ತೋರಿದೆ, ರೈತರಿಗೆ ನಿರಂತರ ಅನ್ಯಾಯ ಮಾಡುತ್ತಾ ಬಂದಿದೆ, ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪಕಾವೇರಿ ಹೋರಾಟ ಬೆಂಬಲಿಸಿದ್ದು, ಬೆಂಗಳೂರು ಬಂದ್ ಗೆ ಬಿಜೆಪಿ ಪಕ್ಷ ಬೆಂಬಲ ನೀಡಿದೆ. ರೈತರಿಗೆ ನ್ಯಾಯ ಕೊಡಿಸುವವರೆಗೂ ಹೋರಾಟ ನಿಲ್ಲದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣಗೌಡ ಮಾತನಾಡಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹೇಳಿರುವಂತೆ ಸಂಕಷ್ಟದ ಸಮಯದಲ್ಲಿ ತಮಿಳುನಾಡಿನ ಜೊತೆ ಮಾತುಕತೆಗೆ ಕರ್ನಾಟಕ ಸರ್ಕಾರ ಮುಂದಾಗ ಬೇಕಾಗಿದೆ, ತಕ್ಷಣ ಮಾತುಕತೆ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿದರು.

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಆರಂಭದಿಂದಲೂ ಮೈಮರೆತಿದೆ, ಇಂತಹ ನಿರ್ಲಿಪ್ತ ಧೋರಣೆಯಿಂದ ರೈತರು ಕಷ್ಟ ಪಡಬೇಕಾಗಿದೆ, ಬೆಳೆದು ನಿಂತಿರುವ ಬೆಳೆಗೂ ನೀರಿಲ್ಲ, ಕುಡಿಯಲು ನೀರಿಲ್ಲ, ಆದರೂ ಸಹ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ ಸರ್ಕಾರದ ರೈತ ವಿರೋಧಿ ನಿಲುವು ರೈತರನ್ನು ಅನ್ಯಾಯಕ್ಕೆ ದೂಡಿದೆ ಎಂದು ಹೇಳಿದರು.

ನೀರಿಲ್ಲದೆ ಬೆಳೆ ಬೆಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ 25000 ರೂ ಪರಿಹಾರ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು, ರಾಜ್ಯದ ಜನತೆಗೆ ಮದ್ಯಭಾಗ್ಯ ಕ್ಕಿಂತ ಕಾವೇರಿ ಭಾಗ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು