ಕರ್ಣಾಟಕ ಬ್ಯಾಂಕ್ ಮಾಜಿ ಎಂ,ಡಿ. ಸಿ.ಇ.ಒ. ಜಯರಾಮ ಭಟ್ ಇನ್ನಿಲ್ಲ

Advertisement

ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ಮಾಜಿ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಪೊಳಲಿ ಜಯರಾಮ ಭಟ್ (೭೨) ಇಂದು ನಿಧನರಾದರು.
ಮುಂಬಯಿನಲ್ಲಿ ಅವರು ಮಂಗಳವಾರ ಯುನಿವರ್ಸಲ್ ಸೋಂಪೋ ವಿಮಾ ಕಂಪನಿಯ ಮಂಡಳಿ ಸಭೆಯಲ್ಲಿ ಭಾಗವಹಿಸಿ, ಬುಧವಾರ ಊರಿಗೆ ಮರಳುತ್ತಿದ್ದ ವೇಳೆ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಪೊಳಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಮಂಗಳೂರಿನಲ್ಲಿ ಪದವಿವರೆಗಿನ ಶಿಕ್ಷಣ ಪೂರೈಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಅವರು, ೧೯೭೩ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ಣಾಟಕ ಬ್ಯಾಂಕ್ ಸೇರಿದರು. ೧೯೭೬ರಲ್ಲಿ ಶಾಖಾ ವ್ಯವಸ್ಥಾಪಕರಾಗಿ ವಿವಿಧ ಶಾಖೆಗಳಲ್ಲಿ ಕಾರ್ಯ ನಿರ್ವಹಿಸಿ, ನಂತರ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ, ಉಪ ಪ್ರಧಾನ ವ್ಯವಸ್ಥಾಪಕರಾಗಿ, ೨೦೦೫ರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ನೇಮಕಗೊಂಡರು.
೨೦೦೯ರಲ್ಲಿ ಅವರಿಗೆ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹುದ್ದೆ ಒಲಿಯಿತು. ಸತತ ಮೂರು ಅವಧಿಗೆ ಅವರು ಈ ಹುದ್ದೆಯನ್ನು ನಿರ್ವಹಿಸಿದ್ದಾರೆ. ಇ-ಲಾಬಿ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್, ಆನ್‌ಲೈನ್ ಟ್ರೇಡಿಂಗ್ ಅಕೌಂಟ್, ಟ್ರಾವೆಲ್ ಕಾರ್ಡ್, ಗಿಫ್ಟ್ ಕಾರ್ಡ್ ಮುಂತಾದ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಂದ ಮೆಚ್ಚುಗೆ ಗಳಿಸಿದ್ದರು. ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಜಯರಾಮ್ ಭಟ್ ಅವರಿಗೆ ಅತ್ಯುತ್ತಮ ಮ್ಯಾನೇಜರ್ ಅವಾರ್ಡ್, ಅತ್ಯುತ್ತಮ ಸಾಧನಾ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.