ಕರ್ನಾಟಕದ ಒಗ್ಗಟ್ಟಿಗೆ ಬಿಕ್ಕಟ್ಟು

ಸಂಪಾದಕೀಯ
Advertisement

ದೇಶ ಇಲ್ಲವೇ ರಾಜ್ಯವೊಂದರ ಹೆಗ್ಗಳಿಕೆಯ ಮುದ್ರೆ ಇರುವುದು ಅದರ ಒಗ್ಗಟ್ಟಿನಲ್ಲಿ; ಬದುಕುವ ರೀತಿಯಿಂದ ಹಿಡಿದು ಆಚಾರ ವಿಚಾರ ಹಾಗೂ ಭಾಷೆಯ ಬಳಕೆಯವರೆಗೆ ವೈವಿಧ್ಯದ ನಡುವೆಯೂ ಐಕ್ಯಮತ್ಯವನ್ನು ಕಂಡುಕೊಳ್ಳುವ ರಾಜ್ಯದಲ್ಲಿ ನೆಲ ಜಲ ಹಾಗೂ ಧರ್ಮದ ವಿಚಾರಗಳಿಗೆ ಸಂಬಂಧಿಸಿದ ಬೆಳವಣಿಗೆಯಲ್ಲಿ ಇಂತಹ ಐಕ್ಯಮತ್ಯವೇ ಎಂತಹ ಬಿಕ್ಕಟ್ಟುಗಳನ್ನು ಸುಲಲಿತವಾಗಿ ನಿಗ್ರಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ರಾಜಕೀಯ ಭಿನ್ನಮತಕ್ಕೂ ರಾಜ್ಯದ ಭಿನ್ನಮತಕ್ಕೂ ಅಜಗಜಾಂತರ ವ್ಯತ್ಯಾಸ. ಕರ್ನಾಟಕ ವಿಧಾನ ಮಂಡಲದಲ್ಲಿ ಅಪರೂಪ ಎಂಬ ರೀತಿಯಲ್ಲಿ ಆಳುವ ಕಾಂಗ್ರೆಸ್ ಪಕ್ಷ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮುಂಗಡ ಪತ್ರದಲ್ಲಿ ಅನುದಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ಟೀಕೆ ಟಿಪ್ಪಣಿ ಮಾಡಿರುವ ವಿಚಾರದ ಬಗ್ಗೆ ತದ್ವಿರುದ್ಧವಾದ ನಿರ್ಣಯಗಳನ್ನು ಕೈಗೊಂಡಿರುವುದು ಕರ್ನಾಟಕದ ಒಗ್ಗಟ್ಟು ಪ್ರಥಮ ಬಾರಿಗೆ ಬಿಕ್ಕಟ್ಟಿಗೆ ತಿರುಗಿರುವುದು ನಿಜಕ್ಕೂ ಬೇಸರದ ಸಂಗತಿ. ಸರ್ಕಾರ ಪ್ರಾಯೋಜಿತ ನಿರ್ಣಯದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆಯನ್ನು ಆಕ್ಷೇಪಿಸುವ ಸಂಗತಿ ಇದ್ದರೆ, ಪ್ರತಿಪಕ್ಷಗಳ ನಿರ್ಣಯದಲ್ಲಿ ಈ ಅಂಶ ಮರೆಯಾಗಿದೆ. ಈ ನಿರ್ಣಯಗಳ ಪೈಕಿ ಸರ್ಕಾರದ ನಿರ್ಣಯ ಗದ್ದಲದ ನಡುವೆ ಅಂಗೀಕಾರ ಪಡೆದಿದೆ. ಆದರೆ, ಪ್ರತಿಪಕ್ಷಗಳ ನಿರ್ಣಯಕ್ಕೆ ಇಂತಹ ಸುಖಾಂತ್ಯ ಸಿಕ್ಕಿಲ್ಲ. ಇದರಿಂದಾಗಿ ದೇಶದ ಜನಕ್ಕೆ ಕರ್ನಾಟಕದಲ್ಲಿ ಒಮ್ಮತದ ಶಕ್ತಿ ಇಲ್ಲ ಎಂಬುದು ಬಹಿರಂಗವಾಗಿಯೇ ಗೊತ್ತಾಗಿರುವುದು ಒಂದು ರೀತಿಯಲ್ಲಿ ರಾಜ್ಯದ ಪರಂಪರಾಗತ ಹೃದಯ ಶ್ರೀಮಂತಿಕೆಯ ಏಕತೆಯ ಭಾವಕ್ಕೆ ಭಂಗ ಬಂದಂತಾಗಿದೆ.
ನಿಜ. ಇಂತಹ ಬಿಕ್ಕಟ್ಟಿಗೆ ನೇರವಾಗಿ ಯಾರನ್ನೂ ದೂರಲು ಬರುವುದಿಲ್ಲ. ಆದರೆ, ಒಂದಲ್ಲಾ ಒಂದು ಕಾರಣಕ್ಕೆ ಎಲ್ಲರೂ ಹಾಗೂ ಎಲ್ಲಾ ಪಕ್ಷಗಳೂ ಕೂಡಾ ಆರೋಪಿಯ ಸ್ಥಾನದಲ್ಲಿ, ಕೆಲವೊಮ್ಮೆ ಅಪರಾಧಿಗಳ ಸ್ಥಾನದಲ್ಲಿ ಜನರಿಗೆ ಕಂಡುಬಂದರೆ ಅದರಲ್ಲಿ ಯಾವುದೇ ದೃಷ್ಟಿದೋಷವನ್ನು ಹುಡುಕಬಾರದು. ಏಕೆಂದರೆ, ಇವೆಲ್ಲವೂ ಕೂಡಾ ಈಗ ಬರಿಗಣ್ಣಿಗೆ ರಾಚುತ್ತಿರುವ ಸತ್ಯ ಘಟನೆಗಳು. ಸಮ್ಮಿಶ್ರ ರಾಜಕಾರಣದ ಹೊಡೆತದ ಪರಿಣಾಮ ಇಂತಹ ಬಿಕ್ಕಟ್ಟಿಗೆ ಕಾರಣ ಎಂಬುದು ನಿಜವೇ. ಪೈಪೋಟಿಯಿಂದ ಮಿನುಗಲು ಯತ್ನಿಸುತ್ತಿರುವ ರಾಷ್ಟ್ರೀಯ ರಾಜಕೀಯ ಪಕ್ಷಗಳು ವೈಚಾರಿಕವಾಗಿ ಕೈಗೊಳ್ಳುವ ತೀರ್ಮಾನಗಳು ಹಲವು ಬಾರಿ ಒಡಕುಗಳು ತಲೆದೋರಿ ಅಗಲದ ಬದಲು ಉದ್ದದ ರೂಪವನ್ನು ಪಡೆದುಕೊಳ್ಳುತ್ತಿರುವುದು ಹೊಸ ಬೆಳವಣಿಗೆ. ಇದುವರೆಗೆ ಇಂತಹ ವೈಚಾರಿಕ ನಿಲುವುಗಳು ಅಗಲದ ವೈಶಾಲ್ಯತೆಯ ತಳಹದಿಯಲ್ಲಿ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ರೀತಿಯಲ್ಲಿ ಇರುತ್ತಿದ್ದವು. ಆದರೆ, ಈಗ ಕೊಂಚ ರೂಪಾಂತರವಾಗಿದೆ. ಇದರ ಪರಿಣಾಮ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇತರ ಸರ್ಕಾರಗಳು ಕೈಗೊಳ್ಳುವ ನಿಲುವುಗಳು ವೈಚಾರಿಕವಾಗಿ ಇಂತಹ ಹೊಸ ಮಾದರಿಯ ಪ್ರತಿರೂಪವಾಗಿವೆ. ವಿಚಿತ್ರವೆಂದರೆ, ಈ ಹಿಂದೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೂ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ಸೇತರ ಪಕ್ಷಗಳು ಇಂತಹ ದಾರಿಯನ್ನೇ ಮೆಟ್ಟಿದ್ದವು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹತ್ತು ವರ್ಷಗಳಿಂದ ಆಳ್ವಿಕೆಯಲ್ಲಿರುವ ಪರಿಣಾಮ ರಾಜಕೀಯ ಶಕ್ತಿಗಳ ಧ್ರುವೀಕರಣ ಸ್ಪಷ್ಟವೂ ನಿಖರವೂ ಆಗಿದೆ. ನಿಘಂಟುಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಪರಿಹಾರ ಸೂತ್ರಗಳು ಬಿಕ್ಕಟ್ಟುಗಳಾಗಿಯೂ-ಬಿಕ್ಕಟ್ಟುಗಳು ಪರಿಹಾರ ಸೂತ್ರಗಳಾಗಿಯೂ ಜನರ ಮುಂದೆ ಮಂಡನೆಯಾಗುವ ಸಾಧ್ಯತೆ ಹಾಗೂ ಅಪಾಯಗಳಿರುವ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ನೆರಳು ಕವಿಯತ್ತಿರುವುದು ಕಲಸು ಮೇಲೋಗರದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ.
ಶಾಸನಸಭೆಯಲ್ಲಿ ಕೈಗೊಂಡಿರುವ ನಿರ್ಣಯವನ್ನು ಸರ್ಕಾರ ವಾಪಸ್ ಪಡೆಯುವುದು ಅಸಾಧ್ಯ. ಹಾಗೆಯೇ ಪ್ರತಿಪಕ್ಷಗಳು ರೂಪಿಸಿರುವ ನಿರ್ಣಯದ ದಾರಿಯನ್ನೂ ಬದಲಾಯಿಸುವುದೂ ಅಸಾಧ್ಯ. ಇಂತಹ ಅಸಾಧ್ಯಗಳ ಪರಿಸ್ಥಿತಿಯಲ್ಲಿ ಪರಿಹಾರ ಕಂಡುಕೊಳ್ಳುವ ಮನಸ್ಸಿದ್ದರೆ ಸಾಧ್ಯತೆಯನ್ನು ಹುಡುಕಿಕೊಳ್ಳುವುದು ಸಮಸ್ಯೆಯಾಗಬಾರದು. ಹೇಗಿದ್ದರೂ ಅಧಿವೇಶನ ಇನ್ನೂ ಪ್ರಗತಿಯಲ್ಲಿದೆ. ಇದಕ್ಕೆ ಮೊದಲು ಸರ್ವಪಕ್ಷಗಳ ಮುಖಂಡರು ಸಮಾಲೋಚಿಸಿ ರಾಜಕೀಯ ನಿಲುವುಗಳನ್ನು ಬದಿಗೊತ್ತಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಎಲ್ಲರೂ ಒಪ್ಪುವ ಸರ್ವಸಮ್ಮತದ ನಿರ್ಣಯವನ್ನು ಅಂಗೀಕರಿಸುವ ಮೂಲಕ ರಾಷ್ಟ್ರಕ್ಕೆ ಕರ್ನಾಟಕದ ಏಕತೆಯ ಸಂದೇಶವನ್ನು ಗಟ್ಟಿಧ್ವನಿಯಲ್ಲಿ ಸಾರುವ ಅವಕಾಶ ಮುಕ್ತವಾಗಿದೆ. ಇದಕ್ಕೆ ಬೇಕಾದದ್ದು ತೆರೆದ ಮನಸ್ಸು. ಇಂತಹ ವಿಚಾರಗಳಲ್ಲಿ ಅಧಿಕಾರಸ್ಥರು ಅರ್ಥಾತ್ ಸರ್ಕಾರ ದೊಡ್ಡ ಮನಸ್ಸು ಮಾಡಿ ಮಾತುಕತೆಗೆ ಮುಂದಾಗಬೇಕು. ಪ್ರತಿಪಕ್ಷಗಳು ಕೂಡಾ ಒಣಪ್ರತಿಷ್ಠೆಗೆ ಕಟ್ಟುಬೀಳದೆ ಕರ್ನಾಟಕದ ಪ್ರತಿಷ್ಠೆಯನ್ನು ಸಂರಕ್ಷಿಸಿ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಕೈಜೋಡಿಸಿ ಕನ್ನಡಿಗರು ಪರಂಪರಾಗತವಾಗಿ ಸಂವೇದನಾಶೀಲ ಹೃದಯ ಶ್ರೀಮಂತಿಕೆಯ ತವರಿನ ಜನ ಎಂಬ ಕೀರ್ತಿ ಪತಾಕೆ ಹಾರಾಡುವಂತೆ ಮಾಡುವುದರಲ್ಲಿ ಜನಾದೇಶದ ಸಾರ್ಥಕತೆ ಹಾಗೂ ಧನ್ಯತೆ ಮೇಳೈಸಿದೆ ಎಂಬುದನ್ನು ಯಾರೂ ಮರೆಯಬಾರದು.