`ಕರ್ನಾಟಕ’ ಹೆಸರು ಬರಲು ದಿಗ್ಗಜ ಸಂಸ್ಥೆಗಳು ಕಾರಣ

ಕರ್ನಾಟಕ ವಿದ್ಯಾವರ್ಧಕ ಸಂಘ
Advertisement

ಧಾರವಾಡ: ಸಂಯುಕ್ತ ಕರ್ನಾಟಕ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಇತಿಹಾಸ ಕರ್ನಾಟಕದೊಂದಿಗೆ ಬೆಸೆದುಕೊಂಡಿದ್ದು, ಅವುಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಸಂಯುಕ್ತ ಕರ್ನಾಟಕ ಹುಬ್ಬಳ್ಳಿಯ ಕಾರ್ಯನಿರ್ವಾಹಕ ಸಂಪಾದಕ, ಸಿಇಓ ಮೋಹನ ಹೆಗಡೆ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನ್ಯಾಯವಾದಿ ದಿ. ಮಹದೇವ ಕೇಸರಿ ಸಂಸ್ಮರಣ ನಿಮಿತ್ತ ಆಯೋಜಿಸಿದ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಎರಡೂ ಸಂಸ್ಥೆಗಳು ಕನ್ನಡ ನಾಡಿನ ಸಾಕ್ಷಿಪ್ರಜ್ಞೆಗಳು. ಕನ್ನಡ ನಾಡಿನ ಹೋರಾಟ, ನೆಲ-ಜಲ ಕಾಳಜಿ, ಕಳಕಳಿಗಾಗಿ ಶ್ರಮಿಸಿವೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬರಲು ಸಂಯುಕ್ತ ಕರ್ನಾಟಕ ಹಾಗೂ ವಿದ್ಯಾವರ್ಧಕ ಸಂಘ ಕಾರಣ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘ “ಏಕರೂಪ ನಾಗರಿಕ ಸಂಹಿತೆ’ ಕುರಿತು ಚರ್ಚಾ ಸ್ಪರ್ಧೆ ಆಯೋಜಿಸಿದ್ದು ಶ್ಲಾಘನೀಯ. ಈ ವಿಷಯ ಅವಶ್ಯಕವೋ, ಹೇಗೆ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಜನರಲ್ಲಿ ಜಾಗೃತಿ ಮೂಡುತ್ತಿದೆ. ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಪತ್ರಿಕೆಯನ್ನು ಮೊದಲು ಮಾರಾಟ ಮಾಡಿ ನಂತರ ಮುದ್ರಿಸುವ ಈ ಸಂದರ್ಭದಲ್ಲಿ 9 ದಶಕಗಳಿಂದ ನಮಗೆ ಸುದ್ದಿ ನೀಡುತ್ತ, ರಾಜ್ಯದ ಪ್ರಮುಖ ಘಟನೆಗಳ ಮಾಹಿತಿಯನ್ನು ನಮಗೆ ನೀಡಿದ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಇನ್ನಷ್ಟು ಬೆಳೆಸುವುದು ಅವಶ್ಯ. ಸಾರ್ವಜನಿಕ ಟ್ರಸ್ಟ್ ನಡೆಸುತ್ತಿರುವ ಪತ್ರಿಕೆ ಎಂದರೆ ಸಂಯುಕ್ತ ಕರ್ನಾಟಕ ಒಂದೇ. ಉಳಿದವು ಖಾಸಗಿ ಮಾಲೀಕತ್ವದ ಪತ್ರಿಕೆಗಳು ಎಂದರು.
ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಕೇಶವ ದೇಸಾಯಿ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಡಾ. ವಿದ್ಯಾ ಶೆಟ್ಟೆಮ್ಮನವರ, ಎಸ್.ಎನ್. ಬಣಕಾರ ವಕೀಲರು, ಶಂಕರ ಕುಂಬಿ, ಶಿವಣ್ಣ ಬೆಲ್ಲದ, ವೀರಣ್ಣ ವಡ್ಡೀನ್, ಗುರು ಹಿರೇಮಠ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ ಮತ್ತಿತರರು ಇದ್ದರು.
ಮಂಡ್ಯ, ಹಾಸನ, ಕಲಬುರ್ಗಿ, ಶಿರಸಿ ಸೇರಿದಂತೆ 12 ಕಾನೂನು ಕಾಲೇಜು ವಿದ್ಯಾರ್ಥಿಗಳು ಚರ್ಚಾಸ್ಪಧೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಹಂತದ ಸ್ಪರ್ಧೆಗಳಲ್ಲಿ ವಿಜೇತರಾದ ಸಮರ್ಥ ಎಸ್. ಜಾಧವ, ಮಹೇಶಗೌಡ ಗ. ಸಣ್ಣಪರ್ವತಗೌಡ, ಶಾಫಿಯಾಬಾನು ಸೌದಾಗರ, ತ್ರಿವೇಣಿ ಕೋರಿ, ಅನ್ವರ ಮೆಹಬೂಬ ನದಾಫ್, ಸರಸ್ವತಿ ನಿಂಗಪ್ಪ ಲಕ್ಕಲಕಟ್ಟಿ ಅವರಿಗೆ ಬಹಮಾನ ವಿತರಿಸಲಾಯಿತು.
ಇದೇ ವೇಳೆ ಮಹಾದೇವ ಕೇಸರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.