ಕಲಿಯುಗದ ಜಾತ್ಯತೀತ ಜಗದ್ಗುರು

Advertisement

ಸಿದ್ಧಾರೂಢರ ಕೃಪೆಯಿಂದ ಸೈಯದ್ ಅಮೀನ್ ಕಬೀರದಾಸನಾದನು. ಅವರು ಹುಬ್ಬಳ್ಳಿಗೆ ಬಂದು ನೆಲೆಸಿದ ಮೇಲೆ ಅವರ ಜ್ಞಾನ ಶಕ್ತಿ, ಯೋಗ ಶಕ್ತಿ ಕಂಡು ದೇಶದ ನಾನಾ ಮೂಲೆಗಳಿಂದ ಅಸಂಖ್ಯಾತ ಸದ್ಭಕ್ತರು, ಸಾಧು ಸಂತರು ಮುಮುಕ್ಷಗಳ ತಂಡವೇ ಸಿದ್ಧರ ಬಳಿಗೆ ಸಾಗರೋಪಾದಿಯಲ್ಲಿ ಬಂದು ಸೇರಿದರು.
ಇಂತಹ ಸಿದ್ಧರ ಕೀರ್ತಿವಾರ್ತೆಯನ್ನು ಕೇಳಿ ಹೈದರಾಬಾದದ ಸಯ್ಯದ್ ಅಮೀನ್ ಎಂಬ ಮುಸ್ಲಿಂ ಯುವಕ ಅವರ ಬಳಿಗೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿ ಸದ್ಗುರುವೇ ನನ್ನನ್ನು ಉದ್ದರಿಸಬೇಕು ಎಂದು ಪ್ರಾರ್ಥಿಸಿದನು. ಆಗ ಸದ್ಗುರುಗಳು ನೀನು ಯಾರು ಎಂದು ಕೇಳಿದರು. ಈ ದೇಹಕ್ಕೆ ಸೈಯದ್ ಅಮೀನ್ ಎಂದು ಕರೆಯುತ್ತಾರೆ. ಜನ್ಮ ಸಾರ್ಥಕ ಮಾಡಿಕೊಳ್ಳಲು ತಮ್ಮ ಚರಣ ಸನ್ನಿಧಿಗೆ ಬಂದಿದ್ದೇನೆ ಎಂದು ಉತ್ತರಿಸಿದನು. ಅವಾಗ ಸಿದ್ಧರು ಈತನನ್ನು ಪರೀಕ್ಷಿಸಬೇಕೆಂದು ತಿಳಿದು ಉದಾಸೀನ ಮಾಡಿ ಸುಮ್ಮನಾದರು. ಆಗ ಆ ಯುವಕನು ಮಠದಲ್ಲಿ ಎಲ್ಲ ರೀತಿಯ ಸೇವೆಗಳಲ್ಲಿ ತೊಡಗಿದನು. ಅವನಲ್ಲಿರುವ ಸೇವಾ ಭಾವನೆ ಹಾಗೂ ದಾಸ್ಯತ್ವವನ್ನು ಕಂಡು ಸಿದ್ಧಾರೂಢರು ಅವನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಇನ್ನು ಮೇಲೆ ನೀನು ಕಬೀರದಾಸ ನನ್ನ ಪ್ರೀತಿಯ ಶಿಷ್ಯ ಎಂದು ನಾಮಕರಣ ಮಾಡಿದರು.
ಇವನು ಉತ್ತಮ ಅಧಿಕಾರಿ ಇರುತ್ತಾನೆ ಎಂದು ತಿಳಿದು ಇವರಿಗೋಸ್ಕರ ೧೦ ಉಪನಿಷತ್ತುಗಳನ್ನು ಕ್ರಮಬದ್ಧವಾಗಿ ಕಬೀರದಾಸರಿಗೆ ಬೋಧಿಸಿದರು. ಇದರಿಂದ ಕಬೀರದಾಸರು ಬ್ರಹ್ಮಜ್ಞಾನಿಗಳಾಗಿ ಯಾವಾಗಲೂ ಸ್ಥಿತಪ್ರಜ್ಞ ಸ್ಥಿತಿಯಲ್ಲಿ ಇರುವಂತವರಾದರು. ಕಬೀರದಾಸರು ಯಾವಾಗಲೂ ರಾಜಪೋಷಾಕದಲ್ಲಿ
ಇರುತ್ತಿದ್ದರು. ಇದನ್ನು ನೋಡಿ ಸಹಿಸದ ಕೆಲವು ಜನರು ಕಬೀರದಾಸರಿಗೆ ಭೋಗದ ಆಸೆ ಹೋಗಿಲ್ಲ ಎಂದು ಸಿದ್ಧಾರೂಢರ ಮುಂದೆ ಹೇಳಿದರು. ಇದನ್ನು ಪರೀಕ್ಷಿಸಲು ಸಿದ್ಧಾರೂಢರು ಅತಿ ಸಣ್ಣ ಧ್ವನಿಯಲ್ಲಿ ಕಬೀರ ಎಂದು ಕರೆಯುತ್ತಾರೆ. ಆವಾಗ ಕಬೀರರು ಬೆತ್ತಲೆಯಾಗಿ ಸ್ನಾನ ಮಾಡುತ್ತಿರುತ್ತಿರುತ್ತಾರೆ. ಸಿದ್ಧಾರೂಢರು ಕರೆದಿದ್ದು ಕೇಳಿಸಿಕೊಂಡು ಕಬೀರದಾಸರು ಅದೇ ಸ್ಥಿತಿಯಲ್ಲಿ ಸಿದ್ದಾರೂಢರ ಮುಂದೆ ಬಂದು ನಿಂತರು. ಅವಾಗ ಸಿದ್ದಾರೂಢರು ಇದೇನು ಕಬೀರ ಹೀಗೇಕೆ ಬಂದೆ ಎಂದಾಗ ತಂದೆ ನೀ ಕರೆದೆ ನಾ ಬಂದೆ ಎಂದು ಹೇಳಿದರು. ಆವಾಗ ಸಿದ್ಧಾರೂಢರು ತಮ್ಮ ಬಳಿಯಲ್ಲಿರುವ ಒಂದು ವಸ್ತçವನ್ನು ಕೊಟ್ಟು ಇದನ್ನು ಕೌಪೀನ ಮಾಡಿಕೊಂಡು ಇಲ್ಲಿಂದ ಹೊರಡು ಎಂದು ಹೇಳಿದರು.

ಗುರು ಆಜ್ಞೆ ಎಂದು ತಿಳಿದು ಮರುಮಾತನಾಡದೆ ಕಬೀರರು ಅಲ್ಲಿಂದ ಹೊರಟರು. ಆದರೆ ಭಕ್ತವೃಂದವು ಅವರ ಬೆನ್ನು ಹತ್ತಿ ಅವರಿಗೆ ಮೊದಲಿನಂತೆ ಎಲ್ಲ ರಾಜಪೋಷಾಕವನ್ನು ತಂದುಕೊಟ್ಟು ಮರಳಿ ಸಿದ್ಧಾರೂಢರ ಹತ್ತಿರ ಕರೆದುಕೊಂಡು ಬಂದರು. ಅಲ್ಲಿಯೇ ಕುಳಿತಿರುವ ಜನರಿಗೆ ಸಿದ್ಧಾರೂಢರು ನೋಡಿ ಕಬೀರದಾಸರ ಪ್ರಾರಬ್ಧ ಹೇಗಿದೆ, ನಾನು ಆತನ ಎಲ್ಲ ವೇಷಗಳನ್ನು ಕಳಿಸಿ ಕೇವಲ ಒಂದು ಕೌಪೀನ ಕೊಟ್ಟು ಕಳಿಸಿದ್ದೆ. ಆದರೆ ಆತನ
ಪ್ರಾರಬ್ಧ ಕೆಲವೇ ನಿಮಿಷಗಳಲ್ಲಿ ಮತ್ತೆ ರಾಜಪೋಷಾಕವನ್ನು ತಂದು ಕೊಟ್ಟಿತು. ಆದುದರಿಂದ ಬ್ರಹ್ಮ ಜ್ಞಾನಿಯು ಹೇಗಿದ್ದರೂ ಚಂದ ಎಂದು ಹೇಳಿದರು.
ಕಬೀರದಾಸರು ದೇಹ ಬಿಟ್ಟ ನಂತರ ಸ್ವತಃ ಸಿದ್ಧಾರೂಢರೇ ಕಣ್ಣೀರು ಹಾಕುತ್ತಾರೆ. ಅವರ ಸಮಾಧಿಯನ್ನು ತಮ್ಮ ಕೈಯಾರೆ ಮಾಡುತ್ತಾರೆ. ಸಿದ್ಧಾರೂಢರ ಮಠದ ಆಸ್ತಿಯ ವಿಷಯವಾಗಿ ಕೋರ್ಟಿನಲ್ಲಿ ದಾವೆ ನಡೆದಿರುವ ಸಂದರ್ಭದಲ್ಲಿ ಎದುರು ಪಕ್ಷದ ವಕೀಲರು ಕಬೀರದಾಸರ ವಿಷಯವಾಗಿ ಹಲವಾರು ಪ್ರಶ್ನೆಗಳನ್ನು ಕೇಳಿ ಕೊನೆಗೆ ಅವರು ಯಾವ ಜಾತಿಯವರು ಎಂದು ಸಿದ್ಧಾರೂಢರನ್ನು ಕೇಳುತ್ತಾರೆ.
ಆವಾಗ ಸಿದ್ಧಾರೂಢರು ಅವನು ಮನುಷ್ಯ ಜಾತಿಗೆ ಸೇರಿದವನು ಎಂದು ಉತ್ತರಿಸುತ್ತಾರೆ. ಇವರು ಕಲಿಯುಗದ ಏಕೈಕ ಜಾತ್ಯತೀತ ಜಗದ್ಗುರುಗಳು. ಸ್ವತಃ ಕಬೀರದಾಸರು ಮುಸ್ಲಿಂ ಸಮುದಾಯದವರಾಗಿದ್ದರೂ ಕೂಡ ಎಂದು ಜಾತಿಭೇದ ಮಾಡಲಿಲ್ಲ.ಇಂತಹ ಜಾತ್ಯತೀತ ಜಗದ್ಗುರುವನ್ನು ಪಡೆದ ನಾವೇ ಧನ್ಯರು.