ಕಾಂಗ್ರೆಸ್‌ನವರಿಗೆ ಕೆಲಸವಿಲ್ಲದ ಕಾರಣ ಬಸ್ ಯಾತ್ರೆ : ಸಚಿವ ಬಿ.ಸಿ ಪಾಟೀಲ್

ಪಾಟೀಲ್
Advertisement

ರಾಯಚೂರು: ಕಾಂಗ್ರೆಸ್ ಪಕ್ಷವರಿಗೆ ಮಾಡಲು ಕೆಲಸವಿಲ್ಲದ ಕಾರಣ ಬಸ್ ಯಾತ್ರೆ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯವಾಗಿ ಟೀಕಿಸಿದರು. ಬುಧವಾರ ನಗರದ ಕೃಷಿ ವಿವಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸಾಕಷ್ಟು ಕೆಲಸಗಳಿವೆ. ಆದರೆ ಕಾಂಗ್ರೆಸ್ ಮುಖಂಡರಿಗೆ ಕೆಲಸಗಳಿಲ್ಲ ಅದಕ್ಕಾಗಿಯೇ ಜೋಡೋ, ತೋಡೋ, ಬಸ್, ಸೈಕಲ್ ಯಾತ್ರೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಸೈಕಲ್ ಯಾತ್ರೆ ಮಾಡಿದ್ದರು. ಗಾಲಿ ಪಂಕ್ಚರ್ ಆಯ್ತು. ಎತ್ತಿನ ಬಂಡಿ ಯಾತ್ರೆ ಮಾಡಿದರು ನೊಗೆ ಹರಿದುಕೊಂಡು ಬಿದ್ದರು. ಹೀಗೆ ಬಿದ್ದುಕೊಂಡು ಹೋಗುವುದು ಅವರಿಗೆ ರೂಢಿಯಾಗಿದೆ ಎಂದು ತಿಳಿಸಿದರು. ಎಚ್.ವಿಶ್ವನಾಥ ಅವರು ಉಪಚುನಾವಣೆಯಲ್ಲಿ ಸೋತ ಅವರನ್ನು ಬಿಜೆಪಿ ಎಂಎಲ್ಸಿ ಮಾಡಿದೆ. ಆದರೂ ಅವರು ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ಕೆಲವರಿಗೆ ಮುಖ್ಯದ್ವಾರ, ಕಿಟಕಿಗಳು ಇರುತ್ತವೆ ಹೋಗುವವರು ಹೋಗುತ್ತಾರೆ ಬರುವವರು ಬರುತ್ತಾರೆ ಎಂದು ಹೇಳಿದರು.
ವಿಶ್ವನಾಥ ಹೋಗುವುದಾದರೆ ಹೋಗಲಿ ಏನು ಮಾಡಲು ಆಗುವುದಿಲ್ಲ. ಸ್ಯಾಂಟ್ರೋ ರವಿ ಯಾರು ಎಂದು ನನಗೆ ಗೊತ್ತಿಲ್ಲ, ಟಿವಿಗಳಲ್ಲಿ ನೋಡಿದ ಮೇಲೆಯೇ ಗೊತ್ತಾಗಿದೆ. ನಾನು ನಟ,ಸಚಿವ ಹಲವರು ಬಂದು ಜೊತೆಗೆ ಫೋಟೊಗಳನ್ನು ತೆಗೆದುಕೊಳ್ಳುತ್ತಾರೆ. ಅವರಿಗೆ ಐಡಿ ಕೇಳಲು ಬರುತ್ತದೆಯೇ ಎಂದು ಪ್ರಶ್ನಿಸಿದರು.
ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಇಳಿಕೆಯಾಗಿದ್ದು, ನಿರ್ದಿಷ್ಟ ದರ ನಿಗದಿ ಹಾಗೂ ಖರೀದಿ ಕೇಂದ್ರದ ಮುಖಾಂತರ ಹತ್ತಿ ಬೆಳೆಯನ್ನು ಖರೀದಿಸುವ ವಿಚಾರವಾಗಿ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಭರವಸೆ ನೀಡಿದರು.