ಕಾಂಗ್ರೆಸ್‌ನವರಿಗೆ ವಿನಾಶದ ಕನಸುಗಳು ಬೀಳುತ್ತಿವೆ: ಸಿಎಂ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.
Advertisement

ಹುಬ್ಬಳ್ಳಿ: ಕಾಂಗ್ರೆಸ್ ನವರಿಗೆ ವಿನಾಶದ ಕನಸುಗಳು ಬೀಳುತ್ತಿವೆ. ಇತ್ತೀಚೆಗೆ ಅವರ ಭಾಷೆ, ನಡುವಳಿಕೆ, ಚಿಂತನೆ ಕೀಳುಮಟ್ಟಕೆ ತಲುಪಿದ್ದು, ಹತಾಶಕ್ಕೆ ಒಳಗಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುವಜನೋತ್ಸವಕ್ಕೆ ಯುವ ವಿನಾಶೋತ್ಸವ ಎಂಬ ಕಾಂಗ್ರೆಸ್ನವರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದಲ್ಲದೆ, ಯತಾ ಬುದ್ದಿ ತತಾ ಮಾತುಗಳು ಎಂದರು.
ಯಾವುದಾದರೂ ಒಳ್ಳೆಯ ಕೆಲಸವನ್ನು ಪ್ರೋತ್ಸಾಹಿಸಿ ಕಾಂಗ್ರೆಸ್ನವರಿಗೆ ಗೊತ್ತಿಲ್ಲ. ದೇಶ, ಭಾಷೆ, ರಾಜ್ಯದ ಪ್ರಗತಿ ಬಗ್ಗೆ ಎಲ್ಲದರಲ್ಲೂ ಕೆಳಮಟ್ಟದ ಮಾತುಗಳನ್ನು ಆಡುತ್ತಿದ್ದಾರೆ. ಇದಕ್ಕೆ ಬಹಳ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದರು.
ರಾಜ್ಯಕ್ಕೆ ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ಅವರು ಬರುತ್ತಿದ್ದಾರೆ. ಆದರೆ ಕಾಂಗ್ರೆಸ್ನವರು ನಾ ನಾಯಕಿ ಎಂಬ ಟೈಟಲ್ ಇಟ್ಟಿದ್ದಾರೆ ಎಂದರೆ ನಾ ನಾಯಕಿ ಎಂದು ಅವರೇ ಹೇಳಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಅವರನ್ನು ನಾಯಕಿ ಮಾಡುವುದಕ್ಕೆ ನಮ್ಮ ರಾಜ್ಯದ ಮಹಿಳೆಯರು ತಯಾರಿಲ್ಲ. ಮಹಿಳೆಯರು ಅವರ ಪರವಾಗಿ ಇಲ್ಲದ ಕಾರಣ ನಾ ನಾಯಕಿ ಎಂದು ಹೇಳುತ್ತಿದ್ದಾರೆ. ಇದು ನಮಗೆ ಅರ್ಥವಾಗಿಲ್ಲ ಎಂದರು.
ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಕಾಂಗ್ರೆಸ್ನವರಿಗೆ ಅಧಿಕಾರ ಸಿಗುವುದಿಲ್ಲ. ಅಧಿಕಾರ ಸಿಗಲ್ಲ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಏನೇನೋ ಘೋಷಣೆ ಮಾಡುತ್ತಿದ್ದಾರೆ ಎಂದರು.
ರಾಷ್ಟ್ರೀಯ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಬೆದರಿಕೆ ಕರೆ ಹೋಗಿರುವುದು ಗಂಬೀರವಾಗಿ ಪರಿಗಣಿಸಲಾಗಿದೆ. ಸಂಪೂರ್ಣ ತನಿಖೆ ಮಾಡಲಾಗುತ್ತಿದೆ. ಅದರ ಹಿನ್ನೆಲೆ ಸೇರಿದಂತೆ ಎಲ್ಲವನ್ನು ತನಿಖೆ ನಡೆಸಲಾಗುವುದು ಎಂದರು.