ಕಾಂಗ್ರೆಸ್ ಗ್ಯಾರಂಟಿ ಹಿಂದೆ ಭ್ರಷ್ಟಾಚಾರ ಅಡಗಿದೆ

Advertisement

ದಾವಣಗೆರೆ: ಕಾಂಗ್ರೆಸ್ ಸರ್ಕಾರ ನೀಡಿದ್ದ ಗ್ಯಾರಂಟಿ ಯೋಜನೆಯ ಹಿಂದೆ ಭ್ರಷ್ಟಾಚಾರ ಅಡಗಿದೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್. ನರಸಿಂಹರಾವ್ ಆರೋಪಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿತ್ತು. ಈಗ ಆ ಎಲ್ಲಾ ಗ್ಯಾರಂಟಿಗಳು ಭ್ರಷ್ಟಾಚಾರದ ಮತ್ತು ವಿನಾಶದ ಗ್ಯಾರಂಟಿ ಎಂಬುದು ಜನರಿಗೂ ತಿಳಿದಿದೆ. ಕಾಂಗ್ರೆಸ್ ಗ್ಯಾರಂಟಿ ರಾಜಕೀಯ ಮೂಲಕ ಕರ್ನಾಟಕದ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು ಟೀಕಿಸಿದರು.
ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಲ್ಲಿಯೇ ಕಾಂಗ್ರೆಸ್ ಗ್ಯಾರಂಟಿ ಬಣ್ಣ ಬಯಲಾಗಿದೆ. ಈ ಗ್ಯಾರಂಟಿ ವಿರುದ್ಧ ಈಗಾಗಲೇ ಜನರು ಸಿಡಿದೆದಿದ್ದಾರೆ. ೨೦೨೪ ಚುನಾವಣೆಯ ವೇಳೆ ಮತ್ತಷ್ಟು ಜನರು ಸಿಡಿದೇಳಲಿದ್ದು, ಕಾಂಗ್ರೆಸ್‌ನ ದುರಾಡಳಿತ ಜನರಿಗೆ ತಲುಪಿಸಲು ಚುನಾವಣೆಯ ವರೆಗೂ ನಮಗೊಂದು ಅವಕಾಶ ದೊರೆತಿದೆ ಎಂದರು.
ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ರಾಜ್ಯ ಸರಕಾರವು, ಟೊಮೆಟೋ, ಬೇಳೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ, ಜನಸಾಮಾನ್ಯರ ಜೇಬಿನಿಂದ ಹಣ ಲೂಟಿ ಮಾಡುತ್ತಿದೆ. ಚುನಾವಣೆಗೂ ಮುನ್ನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಈಗ ತರಕಾರಿ, ಬೇಳೆಕಾಳುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಡಕಾಯತಿಗೆ ಮುಂದಾಗಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಮುಖಂಡರಾದ ಮಂಜಾ ನಾಯ್ಕ, ಶಿವರಾಜ್ ಪಾಟೀಲ್, ಮಹೇಶ ನಾಯ್ಕ, ಬಿ.ಎಸ್. ಜಗದೀಶ್, ಓದೋ ಗಂಗಪ್ಪ, ಶಾಂತರಾಜ್ ಪಾಟೀಲ್, ಕೊಟ್ರೇಶ್‌ಗೌಡ, ಲಿಂಗರಾಜ್ ಗೌಳಿ, ಬಸವರಾಜಯ್ಯ, ಎಚ್.ಪಿ. ವಿಶ್ವಾಸ್ ಇದ್ದರು