ಕಾಂಗ್ರೆಸ್ ತೊರೆಯಲು ಮುಂದಾದ ಮಾಜಿ ಸಚಿವ

Advertisement


ಹಾವೇರಿ: ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಳಿಕ‌ ಹಾನಗಲ್ಲ ಕ್ಷೇತ್ರದಲ್ಲಿ ಆಕ್ರೋಶ ಹೆಚ್ಚುತ್ತಿದೆ. ಹಾನಗಲ್ಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಮನೋಹರ ತಹಸೀಲ್ದಾರ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ.

ಕೈ ಟಿಕೆಟ್ ತಪ್ಪಿದ ಹಿನ್ನೆಲೆ ಮನೋಹರ ತಹಸೀಲ್ದಾರ ಬೆಂಬಲಿಗರು ಹಾನಗಲ್ಲ ಪಟ್ಟಣದಲ್ಲಿ ಟೈಯರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ನಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದರು.

ಈ ಹಿನ್ನೆಲೆ ಇಂದು ಬೆಂಗಳೂರಿಗೆ ತೆರಳಿ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಹಾನಗಲ್ಲನಲ್ಲಿ ಹೇಳಿಕೆ ನೀಡಿರುವ ಮನೋಹರ ತಹಶಿಲ್ದಾರ, ಇದು ನನಗೆ ಕೊನೆ ಚುನಾವಣೆ, ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದೆ. ನನಗೊಂದು ಅವಕಾಶ ಮಾಡಿಕೊಡಿ, 50 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನಿಂದ ಕೆಲಸ ಮಾಡುತ್ತಾ ಬಂದೆ ಎಂದು ಮನವರಿಕೆ ಮಾಡಿದ್ದೆ. 2018 ಹಾಗೂ 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಹ ಟಿಕೆಟ್ ಕೊಡಲಿಲ್ಲ. ಆಗ ಎಂಎಲ್ ಸಿ ಮಾಡುವ ಭರವಸೆ ನೀಡಿ ಉಪಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೋರಿದ್ದರು.

ಸ್ಥಳೀಯ ಸಂಸ್ಥೆಗಳಿಂದ ಎಂಎಲ್ ಸಿ ಮಾಡೋದಾಗಿ ಹೇಳಿದ್ದ ಹೈಕಮಾಂಡ್ ಸಲೀಂ ಅಹ್ಮದ್ ಗೆ ಟಿಕೆಟ್ ನೀಡಿದರು. ಎಂಎಲ್ ಎಗಳಿಂದ ಇಬ್ಬರಿಗೆ ಎಂಎಲ್ ಸಿ ಮಾಡುವ ಅವಕಾಶ ಇದೆ ಆಗ ಎಂಎಲ್ ಸಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು ಆಗಲೂ ಮಾಡಲಿಲ್ಲ ಎಂದು ದೂರಿದರು.

ಈ ಬಾರಿಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ಇದೊಂದು ಬಾರಿ ನನಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆ ಹೊರತು ನನ್ನ ಮಗನಿಗೆ ಟಿಕೆಟ್ ಕೇಳಿರಲಿಲ್ಲ. ಒಂದು ವೇಳೆ ನನಗೆ ಟಿಕೆಟ್ ನೀಡಲು‌ ಆಗದಿದ್ದರೆ, ನನ್ನ ತಾಲೂಕಿನವರಿಗೆ ಯಾರಿಗಾದರು ಕೊಡಿ ಅಂದಿದ್ದೆ. ಆದರೆ ಹೈಕಮಾಂಡ್ ನನಗು ಟಿಕೆಟ್ ಕೊಡಲಿಲ್ಲ, ನನ್ನ ತಾಲೂಕಿನವರಿಗೂ ಕೊಡಲಿಲ್ಲ. ಈ ಸಾರಿ ಹೊರಗಿನವರಿಗೆ ಟಿಕೆಟ್ ಕೊಟ್ಟರೆ ನಾವು ಚುನಾವಣೆ ಮಾಡಲ್ಲ, ನಮ್ಮ ದಾರಿ ಬದಲಿಸಬೇಕಾಗುತ್ತದೆ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವು ಎಂದರು.


ಮಾ.30ಕ್ಕೆ ಬೆಂಬಲಿಗರ ಸಭೆ

ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಮಾ.30ರಂದು ಹಾನಗಲ್ಲನಲ್ಲಿ ನನ್ನ ಬೆಂಬಲಿಗರ ಸಭೆ ಕರೆದಿದ್ದು, ಅಷ್ಟರೊಳಗಾಗಿ ಹೈಕಮಾಂಡ್ ಎಚ್ಚೆತ್ತುಕೊಂಡು ಅಭ್ಯರ್ಥಿ ಬದಲಿಸಲು ಸಾಧ್ಯವಿದ್ದರೆ ಬದಲಿ ಸ್ಥಳಿಯರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸಭೆಯಲ್ಲಿ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಮನೋಹರ ತಹಸೀಲ್ದಾರ ಹೇಳಿದರು.


ನಮ್ಮ‌ ದಾರಿ ನಮಗೆ ಅವರ ದಾರಿ ಅವರಿಗೆ..
ಹೈಕಮಾಂಡ್ ಈ ನಿರ್ಧಾರದಿಂದ ನೋವಾಗಿದೆ. ಬಹಳಷ್ಟು ಕಳಕಳಿಯಿಂದ ಬೇಡಿಕೊಂಡೆ ಅವರಿಗೆ ಕರುಣೆ ಬರಲಿಲ್ಲ. ನನ್ನ 50 ವರ್ಷದ ಸೇವೆಗೆ ಪ್ರತಿಯಾಗಿ ನೋವು ಕೊಟ್ಟರೆ ಹೊರತು ಕೊನೆಗಳಿಗೆಯಲ್ಲಿ ಸಂತೋಷ ಕೊಡಲಿಲ್ಲ. ಇಲ್ಲಿ ಇನ್ಮುಂದೆ ಇರೋದರಲ್ಲಿ‌ ಅರ್ಥವಿಲ್ಲ.ನಮ್ಮ‌ ದಾರಿ ನಮಗೆ ಅವರ ದಾರಿ ಅವರಿಗೆ. ಅವರ ಕ್ಯಾಂಡಿಡೇಟ್ ಹೇಗೆ ಗೆಲ್ಲುತ್ತಾರೆ ಅನ್ನೋದನ್ನ ನಾವು ಸಹ ನೋಡುತ್ತೇವೆ ಎಂದು ಮನೋಹರ ತಹಶೀಲ್ದಾರ ಎಚ್ಚರಿಕೆ ನೀಡಿದರು.