ದಾವಣಗೆರೆ: ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಾ ಇದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಬರುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮನಸ್ಸು ಮಾಡಿ ಕರೆದರೆ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಖಾಲಿಯೇ ಆಗಿ ಬಿಡುತ್ತವೆ. ಆ ಮಟ್ಟದಲ್ಲಿ ಎರಡೂ ಪಕ್ಷಗಳ ಶಾಸಕರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದರು.
ಹಿಂದೆ ಬಿಜೆಪಿಗೆ ಸ್ವಾರ್ಥಕ್ಕಾಗಿ ಹೋಗಿದ್ದರು. ಆದರೆ ಈಗ ಬಿಜೆಪಿ ತರ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ಗೆ ಬರುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಗಾಗಿ ಮತ್ತು ಜನಪರ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಬರುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
136 ಶಾಸಕರಿದ್ದೇವೆ ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ. ಆದರೂ ನಮ್ಮ ಜೊತೆ ಬರ್ತಾ ಇದ್ದರೆ ಅಂದ್ರೆ ಕಾಂಗ್ರೆಸ್‌ಗೆ ಶಕ್ತಿ ತುಂಬಲು ಬರುತ್ತಾ ಇದ್ದಾರೆ. ಬಿಜೆಪಿಗೆ ಹೋದವರು ಮಾತ್ರವಲ್ಲ ಬಿಜೆಪಿಯಲ್ಲಿ ಇದ್ದವರು ಬರುತ್ತಾರೆ ಎನ್ನುವ ಮೂಲಕ ಕುತೂಹಲ ಹುಟ್ಟುಹಾಕಿದರು.
ಬಿಜೆಪಿಯವರು ಈಗ ತಣ್ಣಗಾಗಿದ್ದಾರೆ. ಅವರು ಆಪರೇಷನ್ ಮಾಡುವ ಸ್ಥಿತಿಯಲ್ಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಗಲ್ಲಿ ಗಲ್ಲಿ ತಿರುಗಿ ಪ್ರಚಾರ ನಡೆಸಿದರೂ ಬಿಜೆಪಿಯವರು 65 ಸೀಟು ಗೆದ್ದಿದ್ದಾರೆ. ನಾವು ಮನಸ್ಸು ಮಾಡಿ ಕರೆದರೆ ಬಿಜೆಪಿ ಜೊತೆಗೆ ಜೆಡಿಎಸ್ ಸಹ ಖಾಲಿ ಆಗುತ್ತದೆ ಎಂದು ಪುನರುಚ್ಚರಿಸಿದರು.