ಕಾಗದ ರಹಿತ ಹೈಕೋರ್ಟ್ ಮಾಡಲು ಬದ್ಧ

Advertisement

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಅನ್ನು ಕಾಗದ ರಹಿತ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹೇಳಿದರು.
ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಕೀಲ ಪರಿಷತ್ತು ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೈಕೋರ್ಟ್ ಅನ್ನು ಕಂಪ್ಯೂಟರೀಕರಣ ಮಾಡುವುದರಿಂದ ಕಡತಗಳಣ್ನು ವೇಗವಾಗಿ ಹುಡುಕಿ ವಿಲೇವಾರಿ ಮಾಡಬಹುದು. ಲೋಕ ಅದಾಲತ್, ಮಧ್ಯಸ್ಥಿಕೆ ಕಾರ್ಯಕ್ರಮಗಳಿಂದ ಜನರಿಗೆ ತ್ವರಿತಗತಿಯಲ್ಲಿ ನ್ಯಾಯ ಕೊಡಿಸಬಹುದು. ಮುಂಬರುವ ದಿನಗಳಲ್ಲಿ ತಡ ಮಾಡದೇ ಹೆಚ್ಚು ಪ್ರಕರಣ ವಿಲೇವಾರಿಗೆ ವಕೀಲರು, ನ್ಯಾಯಾಧೀಶರು ಶ್ರಮಿಸಬೇಕು. ನ್ಯಾಯಾಲಯ ಸರ್ವರಿಗೂ ನ್ಯಾಯಕೊಡಿಸಲು ಬದ್ಧವಾಗಿದೆ ಎಂದರು. ವೃತ್ತಿ ಜೀವನದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು. ರಾಜ್ಯ ವಕೀಲ ಪರಿಷತ್ ಅಧ್ಯಕ್ಷ ಎಚ್.ಎಲ್. ವಿಶಾಲ ರಘು ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮುಖ್ಯ ನ್ಯಾಯಮೂರ್ತಿಗಳು ರಾಜ್ಯಾದ್ಯಂತ ಲೋಕ-ಅದಾಲತ್‌ಗಳನ್ನು ನಡೆಸಿ ೨೫,೧೪,೩೪೩ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ ಎಂದರು. ಹೈಕೋರ್ಟ್ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಹಾಗೂ ಸಿಬ್ಬಂದಿ ಇದ್ದರು.