ಕಾನೂನು ರಾಜ್ಯದ ಮಹಾಭಾರತ

ಸಂಪಾದಕೀಯ
Advertisement

ಒಕ್ಕೂಟ ವ್ಯವಸ್ಥೆ ಎಂದ ಮೇಲೆ ಎಷ್ಟೇ ಒಪ್ಪಂದಗಳು ಹಾಗೂ ಸಹಮತದ ಸಿದ್ಧಾಂತಗಳು ಇದ್ದರೂ ಕೂಡಾ ಒಂದಲ್ಲಾ ಒಂದು ಕಾರಣಕ್ಕೆ ತಂಟೆ ತಕರಾರು ಇದ್ದದ್ದೆ. ಏಕೆಂದರೆ, ದೇಶವೆಂದ ಮೇಲೆ ಅದೇನು ಬರೀ ಮಣ್ಣಿನಿಂದ ಮಾಡಿದ್ದಲ್ಲ. ಮಣ್ಣಿನ ಮಕ್ಕಳಲ್ಲಿ ಮಾನವ ಸಹಜ ಹಕ್ಕುಬಾಧ್ಯತೆಗಳ ವಿಚಾರದಲ್ಲಿ ಭಿನ್ನಮತ ಸ್ವಾಭಾವಿಕ. ಅದರಲ್ಲೂ ಹಣಕಾಸಿನ ವಿಚಾರದಲ್ಲಿ ಸಹಮತಕ್ಕಿಂತ ಭಿನ್ನಮತದ ಕೊರಗುಗಳೇ ಸಾಮಾನ್ಯ ಎಂಬುದಕ್ಕೆ ಸುಪ್ರೀಂಕೋರ್ಟಿನ ಮುಂದೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಕೇಂದ್ರದ ವಿರುದ್ಧ ಪ್ರತ್ಯೇಕವಾಗಿ ಹೂಡಿರುವ ದಾವೆಯೇ ನಿದರ್ಶನ. ರಾಜ್ಯಾಂಗದ ೩೨ನೇ ಪರಿಚ್ಛೇದದ ಅವಕಾಶವನ್ನು ಬಳಸಿಕೊಂಡು ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಹಣ ಕೊಡಿಸುವಂತೆ ಈ ಎರಡೂ ರಾಜ್ಯಗಳು ಹೂಡಿರುವ ದಾವೆಯಲ್ಲಿ ರಾಜ್ಯ ಹಾಗೂ ಕೇಂದ್ರಗಳ ನಡುವಣ ಸಂಬಂಧದ ಸೂಕ್ಷ್ಮಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಮುಂದಿರುವ ಈ ದಾವೆಯ ತೀರ್ಪಿನಷ್ಟೇ ಮುಖ್ಯವಾಗಿ ಅದರ ವಿಚಾರಣೆಯ ಸ್ವರೂಪವೂ ಬಹಳ ಮುಖ್ಯ. ಕೇರಳ ಸರ್ಕಾರದ ದಾವೆ ಈಗಾಗಲೇ ವಿಚಾರಣೆಯ ಹಂತದಲ್ಲಿದ್ದು ಕೇಂದ್ರ ಸರ್ಕಾರ ಕಾನೂನಿನ ಇತಿಮಿತಿಗಳನ್ನು ಆಧರಿಸಿ ತನ್ನ ಉತ್ತರವನ್ನೂ ಒದಗಿಸಿದೆ. ಆದರೆ, ವಾದ ಪ್ರತಿವಾದಗಳು ಇನ್ನೂ ಪ್ರಗತಿಯಲ್ಲಿವೆ. ಕರ್ನಾಟಕ ಸರ್ಕಾರದ ದಾವೆ ಇನ್ನೂ ವಿಚಾರಣೆಗೆ ಬಂದಿಲ್ಲ. ಬೇಸಿಗೆ ರಜೆಯ ನಂತರ ದಾವೆ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.
ಈ ಎರಡೂ ರಾಜ್ಯಗಳು ಹೂಡಿರುವ ದಾವೆಯ ಒಟ್ಟಾರೆ ಸಾರಾಂಶವೆಂದರೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್) ಅಗತ್ಯ ಸಮಯದಲ್ಲಿ ಹಣವನ್ನು ಒದಗಿಸದೇ ಸತಾಯಿಸುತ್ತಿದೆ ಎಂಬುದು. ಕರ್ನಾಟಕದ ಪರವಾಗಿ ಹೂಡಿರುವ ದಾವೆಯ ಮುಖ್ಯಾಂಶವೆಂದರೆ ಕರ್ನಾಟಕದ ಪರವಾಗಿ ಪ್ರಧಾನಿಯೂ ಸೇರಿದಂತೆ ಹಲವು ಬಾರಿ ಮನವಿ ಪತ್ರದ ಮೂಲಕ ಪರಿಹಾರ ಕೋರಿದ್ದರೂ ಬಿಡಿಗಾಸಿನ ನೆರವೂ ದೊರಕಿಲ್ಲ ಎಂಬುದು. ಈ ಹಣವನ್ನು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಕೊಡಿಸಬೇಕು ಎಂಬುದು ಕರ್ನಾಟಕದ ಪ್ರಾರ್ಥನೆ. ವಿಚಾರಣೆ ಮುಗಿದು ತೀರ್ಪು ಹೊರಬೀಳುವವರೆಗೆ ಈ ಪ್ರಕರಣದ ವಿಮರ್ಶೆ ಸಾಧುವಾಗಲಾರದು.
ರಾಜ್ಯ ಹಾಗೂ ಕೇಂದ್ರಗಳ ನಡುವಣ ಸಂಬಂಧಗಳ ನಿರ್ವಹಣೆಗೆ ಸಂವಿಧಾನದಲ್ಲಿ ಖಚಿತವಾದ ಪ್ರಸ್ತಾಪಗಳಿವೆ. ತೆರಿಗೆಯ ಹಣ ಸಾಮಾನ್ಯವಾಗಿ ಬರುವುದು ರಾಜ್ಯಗಳ ಮೂಲಕ. ಆದರೆ, ಈ ತೆರಿಗೆ ಹಣದ ನಿರ್ವಹಣೆ ಹಾಗೂ ಹಂಚಿಕೆಯ ಪರಮಾಧಿಕಾರ ಇರುವುದು ಕೇಂದ್ರದ ಬಳಿ. ಕರ್ನಾಟಕದ ರಾಜಧಾನಿ ಬೆಂಗಳೂರು ಗರಿಷ್ಠ ಪ್ರಮಾಣದ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದೆ. ಆದರೆ, ಪಾವತಿ ಮಾಡುವ ತೆರಿಗೆಗೂ ಕೇಂದ್ರದಿಂದ ದೊರೆಯುತ್ತಿರುವ ಅನುದಾನಕ್ಕೂ ಏನೇನೂ ಸಂಬಂಧವಿಲ್ಲ. ಇದು ತಾರತಮ್ಯ ಎಂಬ ಮಾತು ಈಗಿನದಲ್ಲ. ಬಹಳ ಹಿಂದೆ ಸರಿಸುಮಾರು ೧೯೮೦ರ ದಶಕದಲ್ಲಿ ಕಾಂಗ್ಸೆಸ್ಸೇತರ ಮುಖ್ಯಮಂತ್ರಿಗಳು ಕರ್ನಾಟಕದ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಸೇರಿ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂಬ ಪಟ್ಟು ಹಿಡಿದ ಪರಿಣಾಮವೆಂದರೆ ಹಣಕಾಸಿನ ವಿಚಾರಗಳನ್ನು ಬದಿಗೊತ್ತಿ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ನೇಮಕ ಹಾಗೂ ಸರ್ಕಾರಗಳ ಪದಚ್ಯುತಿಗೆ ಅನುಸರಿಸುವ ಪಾರದರ್ಶಕ ಮಾರ್ಗಸೂಚಿ ಮುಂತಾದ ವಿಷಯಗಳ ಬಗ್ಗೆ ಪರಿಶೀಲಿಸಿ ಶಿಫಾರಸು ಮಾಡಲು ನ್ಯಾಯಮೂರ್ತಿ ಸರ್ಕಾರಿಯಾ ಆಯೋಗವನ್ನು ಆಗಿನ ಪ್ರಧಾನಿ ಇಂದಿರಾಗಾಂಧಿ ರಚಿಸಿದ್ದರು. ಸರ್ಕಾರಿಯಾ ಆಯೋಗದ ಶಿಫಾರಸುಗಳ ಜಾರಿಯಿಂದ ರಾಜ್ಯಗಳಿಗೆ ದೊರಕಿದ್ದು ರಾಜಕೀಯ ಅಧಿಕಾರವೇ ವಿನಃ ಹಣಕಾಸಿನ ಅಧಿಕಾರವಲ್ಲ. ಸುಮಾರು ೪೦ ವರ್ಷಗಳಿಗೂ ಹೆಚ್ಚಿನ ಸಮಯದ ನಂತರ ಮತ್ತೆ ಮಾರ್ದನಿಗೊಳ್ಳುತ್ತಿರುವ ರಾಜ್ಯಗಳ ಕೂಗಿನಲ್ಲಿ ಹಣಕಾಸಿನ ನಿರ್ವಹಣೆ ಮತ್ತು ಹಂಚಿಕೆಯ ವಿಚಾರ ಪ್ರಸ್ತಾಪವಾಗುತ್ತಿರುವಾಗ ಸ್ವಾತಂತ್ರ್ಯಾನಂತರದ ದೇಶದ ಎಲ್ಲಾ ಅನುಕೂಲ ಹಾಗೂ ಅನನುಕೂಲಗಳನ್ನು ಪರಿಶೀಲಿಸಿ ಈಗ ಅಗತ್ಯವಿರುವ ಮಾರ್ಗಸೂಚಿಯನ್ನೇ ರೂಪಿಸಲು ಮತ್ತೊಂದು ಆಯೋಗವನ್ನು ರಚಿಸುವುದು ಸಕಾಲಿಕವೂ ಹೌದು ನ್ಯಾಯಸಮ್ಮತವೂ ಹೌದು. ಲೋಕಸಭಾ ಚುನಾವಣೆಯ ಈ ಹಂತದಲ್ಲಿ ನೀತಿ ನಿಲುವಿಗೆ ಸಂಬಂಧಿಸಿದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲು ಬರುವುದಿಲ್ಲ. ಆದರೆ, ಅಧಿಕಾರಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಭರವಸೆಯ ರೂಪದಲ್ಲಿ ಸೇರ್ಪಡೆ ಮಾಡುವುದು ಒಂದು ರೀತಿಯಲ್ಲಿ ರಾಜಕೀಯ ಬದ್ಧತೆಗೆ ಸಾಕ್ಷಿಯಾಗುತ್ತದೆ. ಕಾನೂನಿನ ಮೂಲಕ ಮಹಾಭಾರತ ಸಮರವನ್ನು ನಡೆಸುವುದು ಬೇರೆ ವಿಚಾರ. ಆದರೆ, ಜನತಾ ನ್ಯಾಯಾಲಯದ ಮೂಲಕ ಜನಾದೇಶ ಪಡೆದು ಲೋಪದೋಷವನ್ನು ಸರಿಪಡಿಸಿಕೊಳ್ಳುವುದು ಬೇರೆ ಎಂಬುದನ್ನು ಸಮಸ್ತರೂ ಅರಿತರೆ ಅದೊಂದು ಸಂತುಲಿತ ಆಹಾರವಾಗುತ್ತದೆ.