ಕಾಮ-ಕ್ರೋಧಗಳ ಉದ್ವೇಗ ಕಡಿಮೆಯಾಗಬೇಕು

ಗುರಬೋಧೆ
Advertisement

ಎರಡು ವಿಷಯಗಳಲ್ಲಿ ಸಂಯಮ ಅಗತ್ಯ. ಅವೇ ಕಾಮ ಮತ್ತು ಕ್ರೋಧ. ಇವೆರಡೂ ಮನಸ್ಸಿನಲ್ಲಿ ತೀವ್ರವಾದಾಗ ಉದ್ವೇಗವನ್ನುಂಟು ಮಾಡುತ್ತವೆ. ಈ ಉದ್ವೇಗಗಳು ಆರೋಗ್ಯಕ್ಕೆ ಒಳ್ಳೆಯದಲ್ಲ.
ಕಾಮ ಎಂದರೆ ತೀವ್ರವಾದ ಆಸೆ. ಕಣ್ಣೆದುರಿಗೆ ಇರುವ ವಿಷಯಗಳಲ್ಲಿ ಅಥವಾ ಮತ್ತೆಲ್ಲೊ ಇದ್ದು ತನಗೆ ಗೊತ್ತಿರುವ ವಿಷಯಗಳಲ್ಲಿ ಆಸೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಪೋಷಕ ಸಾಮಗ್ರಿ ದೊರೆತಾಗ ತೀವ್ರಗೊಳ್ಳುತ್ತದೆ, ಉದ್ವೇಗದ ಅವಸ್ಥೆಗೆ ತಲುಪುತ್ತದೆ. ರೋಮಾಂಚನದಿಂದ ಕಣ್ಣುಗಳು ಅರಳುವುದು, ಮುಖ ಅರಳುವುದು ಮುಂತಾದ ಚಿಹ್ನೆಗಳು ಹೊರಗೆ ತೋರುತ್ತವೆ. ತೀವ್ರತೆಯ ಹಂತಕ್ಕೆ ಹೋಗದಿದ್ದರೆ ಲೌಕಿಕವಾದ ಅಪಾಯಗಳಿಲ್ಲ. ಆದರೆ ಅಧ್ಯಾತ್ಮ ಸಾಧನೆಗೆ ತೊಡಕಾಗುತ್ತದೆ.
ಕ್ರೋಧವೆಂದರೆ ತನಗೆ ಪ್ರತಿಕೂಲವಾದ ಮತ್ತು ತನಗೆ ನೋವನ್ನುಂಟುಮಾಡುವ ವಿಷಯಗಳು ಕಣ್ಣೆದುರಿಗೆ ಬಂದಾಗ ಅಥವಾ ಮತ್ತೆಲ್ಲೊ ಇದ್ದದ್ದು ಗಮನಕ್ಕೆ ಬಂದಾಗ ಉಂಟಾಗುವ ದ್ವೇಷ. ಅದಕ್ಕೆ ಪರಿಸ್ಥಿತಿ, ಸುತ್ತಲಿನ ವ್ಯಕ್ತಿಗಳು ಮುಂತಾದ ಪೋಷಕ ಸಾಮಗ್ರಿಗಳು ಸೇರಿಕೊಂಡರೆ ತೀವ್ರಗೊಂಡು ಉದ್ವೇಗದ ಅವಸ್ಥೆಯನ್ನು ಪಡೆಯುತ್ತದೆ. ಆಗ ಶರೀರ ಕಂಪಿಸುವುದು, ಬೆವರುವುದು, ಹಲ್ಲುಗಳನ್ನು ಕಡಿಯುವುದು, ಕಣ್ಣು ಕೆಂಪಾಗುವುದು ಮುಂತಾದ ಚಿಹ್ನೆಗಳು ತೋರಿಕೊಳ್ಳುತ್ತವೆ. ಕ್ರೋಧದ ತೀವ್ರತೆ ಆರೋಗ್ಯಕ್ಕೆ ತುಂಬಾ ಹಾನಿಕರ.
ಕಾಮ-ಕ್ರೋಧಗಳನ್ನು ಬಿಡುವ ಪ್ರಯತ್ನ ಬದುಕಿರುವವರೆಗೂ ಇರಬೇಕೆನ್ನುತ್ತಾನೆ ಭಗವಂತ. `ಶಕ್ನೋತಿ ಹೈವ ಯಃ ಸೋಢುಂ ಪ್ರಾಕ್ ಶರೀರವಿಮೋಕ್ಷಣಾತ್ | ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀನರಃ ||’ ಕಾಮ-ಕ್ರೋಧಗಳು ಉದ್ವೇಗದ ಹಂತಕ್ಕೆ ತಲುಪದಂತೆ ನೋಡಿಕೊಳ್ಳುವವನೆ ಯೋಗಿಯಾಗುತ್ತಾನೆ, ಐಹಿಕವಾಗಿ ನೆಮ್ಮದಿಯುಳ್ಳವನಾಗುತ್ತಾನೆ. ಹೀಗೆ ನೋಡಿಕೊಳ್ಳುವ ಕೆಲಸ ಶರೀರದಲ್ಲಿ ಉಸಿರಿರುವ ತನಕವೂ ಆಗಬೇಕು. ಯಾಕೆಂದರೆ ಅಲ್ಲಿಯವರೆಗೂ ಇವೆರಡು ನಮ್ಮನ್ನು ಪ್ರವೇಶಿಸುವ ಸಂಭವಗಳು ಇರುತ್ತವೆ.
ಇಲ್ಲಿ ಗಮನಾರ್ಹವೆಂದರೆ ಉದ್ವೇಗದ ಹಂತಕ್ಕೆ ತಲುಪಿದ ನಂತರ ನಿಯಂತ್ರಿಸುವುದಕ್ಕಿಂತ ಆರಂಭದ ಹಂತದಲ್ಲಿರುವಾಗಲೆ ನಿಯಂತ್ರಿಸಿಕೊಳ್ಳುವುದು ಬುದ್ಧಿವಂತಿಕೆ. ಯಾಕೆಂದರೆ ಕಡಿಮೆ ಪ್ರಯತ್ನದಲ್ಲಿಯೆ ಆಗ ನಿಯಂತ್ರಣಕ್ಕೆ ಬಂದುಬಿಡುತ್ತದೆ. ಪ್ರತಿದಿನವೂ ಬೆಳಿಗ್ಗೆ ಎದ್ದ ತಕ್ಷಣ ಈ ದಿನ ಕಾಮ-ಕ್ರೋಧಗಳ ಉದ್ವೇಗಗಳಿಗೆ ಒಳಗಾಗಬಾರದೆಂಬ ಸಂಕಲ್ಪ, ಮತ್ತು ರಾತ್ರಿ ಮಲಗುವಾಗ ಇಡೀ ದಿನದಲ್ಲಿ ಬಂದುಹೋಗಿರಬಹುದಾದ ಕಾಮ-ಕ್ರೋಧಗಳ ಬಗ್ಗೆ ಆತ್ಮಾವಲೋಕನ ಇರುವುದಾದರೆ ಉತ್ತಮ.