ಕಾಳಮ್ಮವಾಡಿ ಡ್ಯಾಮನಲ್ಲಿ ಬಿರಕು: ಜನರಲ್ಲಿ ಆತಂಕ

Advertisement

ಚಿಕ್ಕೋಡಿ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಳಮ್ಮವಾಡಿಯಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯದಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ.
ಒಟ್ಟು ೨೮ ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಬಿರುಕು ಬಿಟ್ಟಿರುವುದರಿಂದ ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಇದು ಕರ್ನಾಟಕದ ಗಡಿಭಾಗದ ಜನರಲ್ಲಿ ತಲ್ಲಣ ಮೂಡಿಸಿದೆ.
ಮಳೆಗಾಲದಲ್ಲಿ ಡ್ಯಾಂನಲ್ಲಿ ನೀರು ಭರ್ತಿ ಮಾಡಿದಲ್ಲಿ ಡ್ಯಾಂ ಕುಸಿದರೆ ನದಿ ತೀರದ ಜನರ ಪಾಡೇನು ಎಂದು ಅಲ್ಲಿನ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಕಾಳಮ್ಮವಾಡಿ ಡ್ಯಾಂನಲ್ಲಿ ರಾಜ್ಯದ ನೀರಿನ ಪಾಲು ಸಹ ಇದೆ. ಪ್ರತಿ ಬೇಸಿಗೆಯಲ್ಲಿ ದೂಧಗಂಗಾ ನದಿ ಮೂಲಕ ೪ ಟಿಎಂಸಿ ರಾಜ್ಯದ ಪಾಲಿನ ನೀರನ್ನು ಅಲ್ಲಿನ ಸರಕಾರ ಬಿಡುಗಡೆ ಮಾಡುತ್ತಿದೆ.
ಕಾಳಮ್ಮವಾಡಿ ಡ್ಯಾಂ ನಿರ್ಮಾಣದ ನಂತರ ನಿಪ್ಪಾಣಿ ಶಾಸಕರಾಗಿದ್ದ ಕಾಕಾಸಾಹೇಬ ಪಾಟೀಲ ಅವರು ಮಹಾರಾಷ್ಟ್ರ ಹಾಗೂ ರಾಜ್ಯ ಸರಕಾರದ ಪ್ರತಿನಿಧಿಯಾಗಿ ಕರಾರು ಮಾಡಿಸಿದ್ದರು.
ಕಾಳಮ್ಮವಾಡಿ ಡ್ಯಾಂನಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸತೇಜ ಪಾಟೀಲ ಮಹಾರಾಷ್ಟ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಳಮ್ಮವಾಡಿ ಡ್ಯಾಂನಲ್ಲಿ ಬಿರುಕು ಬಿಟ್ಟಿದ್ದರೂ ಮಹಾರಾಷ್ಟ್ರ ಸರಕಾರ ನಿರ್ಲಕ್ಷ್ಯ ವಹಿಸಿರುವುದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.