ಕಾವೇರಿ ನೀರಿನ ಸಂಕಷ್ಟ ಜನರು ಜಾಗೃತರಾಗಬೇಕು

Advertisement

ಕಾವೇರಿ ವಿಷಯದಲ್ಲಿ ಸರ್ಕಾರ ಅಸಹಾಯಕಸ್ಥಿತಿಗೆ ಬಂದು ನಿಂತಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ನಾಟಕವಾಡುತ್ತಿದ್ದಾರೆ. ಕರ್ನಾಟಕದ ಜನ ಎದ್ದುನಿಂತು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಬೇಕಾಗಿದೆ.

ಕಾವೇರಿ ಸಂಕಷ್ಟದಲ್ಲಿ ಕರ್ನಾಟಕದ ಜನ ನೊಂದು ರೋಸಿಹೋಗಿದ್ದಾರೆ. ಪರಿಹಾರ ಕಂಡು ಬರುತ್ತಿಲ್ಲ. ರಾಜಕಾರಣಿಗಳು ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳು ಬರಿದಾಗುತ್ತಿವೆ. ಆದರೂ ಕಾವೇರಿ ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ ಎಂದು ಹೇಳಿಲ್ಲ. ನ್ಯಾಯಾಲಯಗಳು ಕೂಡ ಕರ್ನಾಟಕದ ಸಂಕಷ್ಟಕ್ಕೆ ಮರುಕ ತೋರುತ್ತಿಲ್ಲ. ಒಕ್ಕೂಟ ವ್ಯವಸ್ಥೆಗೇ ಧಕ್ಕೆ ಬರುವ ಕಾಲ ಸನ್ನಿಹಿತವಾಗುತ್ತಿದೆ. ಹಿಂದೆ ಬಂಗಾರಪ್ಪ ಕೈಗೊಂಡ ಕ್ರಮವನ್ನು ಮತ್ತೆ ಕೈಗೊಳ್ಳಬೇಕಾದ ಸನ್ನಿವೇಶ ಬರಲಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಮೊದಲಿನಿಂದಲೂ ಕಾವೇರಿ ವಿಷಯ ಬಂದಾಗ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಒಂದುಗೂಡಿ ಹೋರಾಟ ಮಾಡುತ್ತವೆ. ಅಲ್ಲಿ ಒಡಕು ಧ್ವನಿಯೂ ಕೇಳಿ ಬರುವುದಿಲ್ಲ. ಅಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಹೊಂದಿವೆ. ಕೇಂದ್ರದಲ್ಲಿ ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಅದನ್ನು ಒಲಿಸಿಕೊಳ್ಳುವ ಚಾಕಚಕ್ಯತೆ ಅವರಲ್ಲಿದೆ. ನಮ್ಮ ಸಂಸದರು ದೆಹಲಿಗೆ ಹೋದ ಕೂಡಲೇ ಕರ್ನಾಟಕವನ್ನೇ ಮರೆತು ಬಿಡುತ್ತಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಸೋನಿಯಾ ಮತ್ತು ರಾಹುಲ್ ಕಾವೇರಿ ಬಗ್ಗೆ ಚಕಾರ ಎತ್ತಿಲ್ಲ. ಹಿಂದೆ ಬಿಜೆಪಿ ಆಡಳಿತ ಇತ್ತು. ಡಬ್ಬಲ್ ಎಂಜಿನ್ ಸರ್ಕಾರ ಇದ್ದಾಗಲೂ ಮೇಕೆದಾಟು ಮತ್ತು ಮಹದಾಯಿ ಸಮಸ್ಯೆಗಳು ಬಗೆಹರಿಯಲಿಲ್ಲ. ತಮಿಳುನಾಡಿನವರು ಸಂದರ್ಭ ಬಂದರೆ ಒಕ್ಕೂಟ ವ್ಯವಸ್ಥೆಯ ವಿರುದ್ಧ ಹೋಗಲು ಹಿಂಜರಿಯುವುದಿಲ್ಲ. ನಮ್ಮ ನೆಲ ಮತ್ತು ಜಲ ಕಾಪಾಡಿಕೊಳ್ಳಬೇಕು ಎಂದರೆ ನಾವೇ ಕಣಕ್ಕೆ ಇಳಿಯಬೇಕು. ನಮ್ಮ ಜನಪ್ರತಿನಿಧಿಗಳು ರಾಜ್ಯದ ಹಿತ ಕಾಪಾಡುವುದಿಲ್ಲ ಎಂದರೆ ಅವರನ್ನು ಪ್ರಶ್ನಿಸುವ ಹಕ್ಕು ನಮಗೆ ಇದ್ದೇ ಇದೆ. ೫ ವರ್ಷಕ್ಕೊಮ್ಮೆ ಜನರ ಮುಂದೆ ಹೋಗುವುದು ತಾನೇ ಎಂದು ಜನಪ್ರತಿನಿಧಿಗಳು ಉದಾಸೀನವಾಗಿ ಮನೆಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದರೆ ಅವರನ್ನು ಬಡಿದೆಬ್ಬಿಸುವ ಕೆಲಸ ಮಾಡುವುದೂ ಮತದಾರನ ಕರ್ತವ್ಯ.
ಕಾವೇರಿ ವಿಷಯ ಬಂದಾಗ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಮೌನವಹಿಸುವುದು, ಕೃಷ್ಣ್ಣಾ ಮತ್ತು ಮಹದಾಯಿ ವಿಷಯಬಂದಾಗ ಹಳೆ ಮೈಸೂರು ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತದೆ ಇರುವುದು ಇಂದಿನ ದುಃಸ್ಥಿತಿಗೆ ಕಾರಣ. ಇದನ್ನು ಸರಿಪಡಿಸಬೇಕು ಎಂದರೆ ಕರ್ನಾಟಕದ ಜನ ಎದ್ದು ನಿಲ್ಲಬೇಕು. ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಬೇಕು. ಸರ್ವಪಕ್ಷಗಳ ಸಭೆ ಎಂದು ಬೆಂಗಳೂರು-ದೆಹಲಿಯಲ್ಲಿ ನಾಟಕವಾಡುವುದಲ್ಲ. ಆಡಳಿತ ಮತ್ತು ಪ್ರತಿಪಕ್ಷ ಸೇರಿದಂತೆ ಎಲ್ಲ ರಾಜಕೀಯ ನಾಯಕರಿಗೆ ಜನರೇ ಎಚ್ಚರಿಕೆ ಕೊಟ್ಟು ಗಡುವು ನೀಡಬೇಕು. ನಮಗೆ ಬೇಕಾಗಿರುವುದು ನ್ಯಾಯ. ಇದರಲ್ಲಿ ಭಾವನಾತ್ಮಕ ವಿಷಯವೇನೂ ಇಲ್ಲ. ಕಾವೇರಿ ನೀರು ಇಲ್ಲ ಎಂದರೆ ಮಂಡ್ಯ ನಾಳೆ ಬೆಂಗಾಡು ಆಗುತ್ತದೆ. ತಮಿಳುನಾಡಿಗೆ ನೀರು ಬಿಟ್ಟು ಅಕ್ಕಿಗಾಗಿ ಅವರ ಬಳಿ ಭಿಕ್ಷಾಪಾತ್ರೆ ಹಿಡಿಯಬೇಕಾಗುತ್ತದೆ. ನಮಗೆ ಕಾವೇರಿ-ಕೃಷ್ಣ್ಣಾ ಎರಡೂ ಬೇಕು. ಅದಕ್ಕೆ ಇಡೀ ಕರ್ನಾಟಕದ ಜನ ಎದ್ದು ನಿಲ್ಲಬೇಕು. ಜನರೊಂದಿಗೆ ನಿಲ್ಲದ ಜನಪ್ರತಿನಿಧಿಗಳನ್ನು ಕೈಬಿಡುವುದೂ ಅನಿವಾರ್ಯವಾಗಬಹುದು. ಕರ್ನಾಟಕದ ನೆಲ-ಜಲದ ಪ್ರಶ್ನೆ ಬಂದಾಗ ಎಲ್ಲ ರಾಜಕೀಯ ಪಕ್ಷಗಳೂ ಒಂದೇ. ಎಲ್ಲ ಹಂತಗಳಲ್ಲೂ ಹೋರಾಟ ನಡೆಸಬೇಕಾದ ಕಾಲ ಬಂದಿದೆ. ಹಿಂದೆ ಇಂಥ ಪರಿಸ್ಥಿತಿ ಬಂದಿರಲಿಲ್ಲ. ಕಾವೇರಿಯಲ್ಲಿ ಹೆಚ್ಚು ನೀರು ಹರಿದುಹೋಗುತ್ತಿತ್ತು. ತಮಿಳುನಾಡಿಗೆ ನಿಗದಿತ ನೀರಿನ ಪ್ರಮಾಣಕ್ಕಿಂತ ಹೆಚ್ಚು ನೀರು ಲಭಿಸುತ್ತಿತ್ತು. ಆಗ ತಮಿಳುನಾಡು ಚಕಾರ ಎತ್ತಿರಲಿಲ್ಲ. ಈ ಬಾರಿ ಮಳೆ ಕೈಕೊಟ್ಟಿದೆ. ಅವರಿಗೆ ಅಕ್ಟೋಬರ್‌ನಿಂದ ಜನವರಿವರೆಗೆ ತಮಿಳುನಾಡಿಗೆ ಮಳೆ ಬರುವ ನಿರೀಕ್ಷೆ ಇದೆ. ಅಲ್ಲದೆ ಅಂತರ್ಜಲವೂ ಇದೆ. ಇದನ್ನು ತಮಿಳುನಾಡು ಪ್ರಸ್ತಾಪಿಸುವುದೇ ಇಲ್ಲ. ಕರ್ನಾಟಕ ಸರ್ಕಾರ ನ್ಯಾಯಾಲಯದ ಮುಂದೆ ತನ್ನ ವಾದವನ್ನು ಪರಿಣಾಮಕಾರಿಯಾಗಿ ಮಂಡಿಸಬೇಕಿದೆ. ಸಂಕಷ್ಟ ಸೂತ್ರ ರೂಪಿಸುವಂತೆ ಒತ್ತಾಯ ಹೇರುವುದು ಅಗತ್ಯ.