ಕಾವೇರಿ ವಿಷಯದಲ್ಲಿ ಕೇಂದ್ರ ಪ್ರವೇಶ ಮಾಡಬೇಕು

Advertisement

ಬಳ್ಳಾರಿ: ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಆಗಿರುವ ಸಮಸ್ಯೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಡೂರು ತಾಲ್ಲೂಕು ತೋರಣಗಲ್ಲಿನ ಏರ್‌ಸ್ಟ್ರಿಪ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ಮಳೆ ಕಡಮೆ ಆಗಿದೆ. ಕೆ.ಆರ್.ಎಸ್. ಜಲಾಶಯದಲ್ಲಿ ನಿರೀಕ್ಷಿತ ನೀರು ಸಂಗ್ರಹ ಆಗಿಲ್ಲ. ಆದರೂ ತಮಿಳುನಾಡು ನೀರಿಗಾಗಿ ಬೇಡಿಕೆ ಇಡುತ್ತಿದೆ ಎಂದರು.
ಕಬಿನಿ ಜಲಾಶಯದಿಂದ ನೀರು ಬರಬೇಕಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಂದಿಲ್ಲ ಎಂದ ಅವರು ಆಗಿಂದಾಗ್ಗೆ ಎರಡೂ ರಾಜ್ಯಗಳ ನಡುವೆ ನೀರಿನ ಸಮಸ್ಯೆ ತಲೆದೋರುತ್ತಲೇ ಇರುತ್ತದೆ. ಇದಕ್ಕೆ ಶಾಶ್ವತ ಪರಹಾರ ಎಂದರೆ ಮೇಕೆದಾಟು ಯೋಜನೆ ಜಾರಿ ಮಾಡುವುದೇ ಪರಿಹಾರ. ಮೇಕೆದಾಟು ಯೋಜನೆಯಿಂದ ೭೩ ಟಿಎಂಸಿ ನೀರು ಉಳಿತಾಯ ಆಗುತ್ತದೆ. ಆದರೆ, ತಮಿಳುನಾಡು ಸರ್ಕಾರ ವಿನಾಕಾರಣ ಈ ಕುರಿತು ಕ್ಯಾತೆ ತೆಗೆಯುತ್ತಿದೆ. ಎರಡೂ ರಾಜ್ಯಗಳ ನಡುವೆ ಸಮಸ್ಯೆ ಇರುವುದರಿಂದ ಕೇಂದ್ರ ಮಧ್ಯ ಪ್ರವೇಶ ಮಾಡಬೇಕು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿನ ಬರಪೀಡಿತ ತಾಲ್ಲೂಕುಗಳ ಘೋಷಣೆ ನಿರ್ಧಾರ ಸೆ. ೪ರಂದು ತೀರ್ಮಾನ ಆಗಲಿದೆ. ರಾಜ್ಯದಲ್ಲಿ ಮಳೆ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಒಟ್ಟು ೧೧೩ ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಈ ಪೈಕಿ ೭೩ ತಾಲ್ಲೂಕುಗಳನ್ನು ಬರಪೀಡಿತ ಎಂದು ನಾಡಿದ್ದು ಘೋಷಣೆ ಮಾಡಲಾಗುವುದು ಎಂದರು.