ಕಾವೇರಿ ಸಂಕಷ್ಟಕ್ಕೆ ಮೇಕೆದಾಟು ಪರಿಹಾರ

ಸಂಪಾದಕೀಯ
Advertisement

ಮೇಕೆದಾಟು ಸಮತೋಲನ ಜಲಾಶಯಕ್ಕೆ ತಮಿಳುನಾಡು ಅಡ್ಡಿ. ಸಂಕಷ್ಟ ಕಾಲದಲ್ಲಿ ನಿಸರ್ಗದ ಕೊಡುಗೆಯ ಹಂಚಿಕೊಂಡು ಬದುಕುವ ಉದಾರ ಮನೋಭಾವ ಇಲ್ಲ.

ಈಗ ಕಾವೇರಿ ಕಣಿವೆಯಲ್ಲಿ ನೀರಿಗೆ ಬರ. ಕರ್ನಾಟಕ ಮತ್ತು ತಮಿಳುನಾಡು ಸಂಕಷ್ಟವನ್ನು ಹಂಚಿಕೊಳ್ಳಬೇಕು. ಉತ್ತಮ ಮಳೆ ಬಂದಾಗ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದುಹೋಗುತ್ತದೆ. ಆಗ ತಮಿಳುನಾಡು ಉಸಿರೆತ್ತುವುದಿಲ್ಲ. ಮಳೆ ಕಡಿಮೆ ಬಂದ ಕೂಡಲೇ ನೀರು ಬಿಡಿ ಎಂಬ ಒತ್ತಾಯವನ್ನು ದೆಹಲಿಯವರೆಗೆ ತೆಗೆದುಕೊಂಡು ಹೋಗುವುದರಲ್ಲಿ ತಮಿಳುನಾಡು ಸರ್ಕಾರ ಮೊದಲಿನಿಂದಲೂ ಮುಂಚೂಣಿಯಲ್ಲಿದೆ.
ಈಗ ಅದೇ ಸಂದರ್ಭ ಮತ್ತೆ ಒದಗಿಬಂದಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ಮೇಕೆದಾಟು ಯೋಜನೆ ಬಗ್ಗೆ ಪಾದಯಾತ್ರೆ ನಡೆಸಿ ಎಲ್ಲರ ಗಮನ ಸೆಳೆಯಿತು.
ಬೆಂಗಳೂರು ನಗರಕ್ಕೆ ಕುಡಿಯುವ ನೀರು ಬರುತ್ತದೆ ಎಂದು ಜನ ಚುನಾವಣೆಯಲ್ಲಿ ಬಹುಮತ ನೀಡಿದರು. ಈಗ ೫ ಗ್ಯಾರಂಟಿ ಯೋಜನೆ ಹೊರತುಪಡಿಸಿ ಮೇಕೆದಾಟು ಯೋಜನೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಂಡಿಯಾ ಒಕ್ಕೂಟ ರಂಗದಲ್ಲಿ ತಮಿಳುನಾಡು ಪಕ್ಷಗಳೂ ಸೇರಿವೆ. ಕಾಂಗ್ರೆಸ್ ಪಕ್ಷ ಅದರಿಂದ ಮೇಕೆದಾಟು ಯೋಜನೆ ಬಗ್ಗೆ ಮೃದು ಧೋರಣೆ ತಳೆದಿದೆ ಎಂಬ ಭಾವನೆ ಉಂಟಾಗಿದೆ. ಮೇಕೆದಾಟು ಗಡಿ ಭಾಗದಲ್ಲಿದೆ. ಇಲ್ಲ್ಲಿ ಸಮತೋಲನ ಜಲಾಶಯ ನಿರ್ಮಿಸಿದರೆ ೬೭ ಟಿಎಂಸಿ ನೀರು ನಿಲ್ಲುತ್ತದೆ. ಈ ನೀರನ್ನು ನೀರಾವರಿಗೆ ಬಳಸುವುದಿಲ್ಲ. ಕುಡಿಯುವ ನೀರಿಗೆ ೪.೭೫ ಟಿಎಂಸಿ ಮಾತ್ರ ಬಳಕೆಯಾಗುತ್ತದೆ. ೪೦೦ ಮೆಗಾವ್ಯಾಟ್ ವಿದ್ಯುತ್ ಪಡೆಯಬಹುದು. ಇದನ್ನು ಕೇಂದ್ರೀಯ ಜಲ ವಿದ್ಯುತ್ ಯೋಜನೆಯಾಗಿ ಕೈಗೊಳ್ಳಲು ತೀರ್ಮಾನಿಸಲಾಗಿತ್ತು.
ಅಂದಿನಿಂದ ತಮಿಳುನಾಡು ವಿರೋಧಿಸುತ್ತ ಬಂದಿದೆ. ಇದಕ್ಕೆ ಪ್ರಮುಖ ಕಾರಣ ತಮಿಳುನಾಡಿಗೆ ಇರುವ ರಾಜಕೀಯ ಶಕ್ತಿ. ನಮ್ಮ ಸಂಸದರು ಈ ವಿಷಯದಲ್ಲಿ ಶಕ್ತಿಹೀನರು ಎಂಬುದರಲ್ಲಿ ಅತಿಶಯೋಕ್ತಿ ಏನಿಲ್ಲ. ಮಂಡ್ಯ ಮತ್ತು ಇತರ ಜಿಲ್ಲೆ ರೈತರು ನೀರಿನಲ್ಲಿ ನಿಂತು ಪ್ರತಿಭಟಿಸಿದರೂ ಪ್ರಯೋಜನವಾಗುವುದಿಲ್ಲ. ನೀರು ಹರಿದು ಹೋಗುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ನೀರಿನ ಹಂಚಿಕೆಯನ್ನು ಮಾಡಲಾಗಿದೆ.
ಆದರೆ ನೀರು ಕೊರತೆ ಇದ್ದಾಗ ಸಂಕಷ್ಟ ಸೂತ್ರ ಏನು ಎಂಬುದು ಸ್ಪಷ್ಟವಾಗಿಲ್ಲ. ಪ್ರತಿಬಾರಿ ನೀರಿನ ಕೊರತೆ ಉಂಟಾದಾಗ ತಮಿಳುನಾಡು ಮೊದಲು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುತ್ತದೆ. ನಮ್ಮವರು ನೀರು ಬಿಡದೆ ಇರುವುದಕ್ಕೆ ಸಮಜಾಯಿಷಿ ನೀಡುವುದು. ಯಾರೂ ವಾಸ್ತವ ಸಂಗತಿಯನ್ನು ತಿಳಿದುಕೊಳ್ಳಲು ಬಯಸುವುದಿಲ್ಲ. ಕೆಆರ್ ಸಾಗರದಲ್ಲಿ ನೀರಿದ್ದರೂ ನಮ್ಮ ರೈತರು ಬಳಸುವಂತಿಲ್ಲ. ಅವರ ಕಣ್ಣಮುಂದೆ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಇದನ್ನು ಒಕ್ಕೂಟ ವ್ಯವಸ್ಥೆಗಾಗಿ ಒಪ್ಪಿಕೊಳ್ಳಬೇಕಾದ ಅಸಹಾಯಕ ಪರಿಸ್ಥಿತಿ ಬಂದಿದೆ.
ನಮ್ಮಲ್ಲಿ ಯಾವುದೇ ಸರ್ಕಾರ ಬರಲಿ ಒಕ್ಕೂಟ ವ್ಯವಸ್ಥೆಯ ನಿಯಮಗಳು ನಮಗೆ ಮಾತ್ರ ಅನ್ವಯವಾಗುತ್ತದೆ. ನೀರು ನಿರ್ವಹಣೆ ಪ್ರಾಧಿಕಾರಗಳು ಮತ್ತು ನ್ಯಾಯಾಲಯಗಳು ಮೊದಲಿನಿಂದಲೂ ನಮ್ಮನ್ನು ತಕರಾರು ರಾಜ್ಯ ಎಂಬಂತೆ ಕಾಣುತ್ತದೆ. ರಾಜಕೀಯವಾಗಿ ನಾವು ತಮಿಳುನಾಡಿಗಿಂತ ಹಿಂದೆ ಇದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ. ನಮ್ಮ ಸಂಸದರು ಯಾವುದೇ ಪಕ್ಷಕ್ಕೆ ಸೇರಿರಲಿ, ರಾಜ್ಯದ ಪರ ಚಕಾರ ಎತ್ತುವುದಿಲ್ಲ. ಅವರಿಗೆ ನೀರಿನ ವಿವಾದದ ಬಗ್ಗೆ ಮಾತನಾಡುವುದು ಸಂಕುಚಿತ ಮನೋಭಾವ ಎಂಬ ಭಾವನೆ. ತಮಿಳುನಾಡಿನಲ್ಲಿ ಕಾವೇರಿ ವಿವಾದ ರಾಜಕೀಯವಾಗಿ ಪ್ರಮುಖ. ನಮ್ಮಲ್ಲಿ ಇದುಇಡೀ ರಾಜ್ಯದ ಸಮಸ್ಯೆಯಾಗಿ ಪರಿಗಣಿತವಾಗಿಲ್ಲ. ಇತಿಹಾಸವನ್ನು ಕೆದಕಿ ನೋಡಿದರೆ ತಮಿಳುನಾಡು ಕಾವೇರಿ ವಿಷಯದಲ್ಲಿ ಮೇಲುಗೈ ಸಾಧಿಸಿಕೊಂಡು ಬಂದಿರುವುದು ಸ್ಪಷ್ಟ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾತ್ರ ಅವರು ಸೆಟೆದು ನಿಂತಿದ್ದರು. ಆಡಳಿತ ಪಕ್ಷದವರು ಮೌನವಹಿಸುವುದು, ಪ್ರತಿಪಕ್ಷದವರು ಆಡಳಿತದವರನ್ನು ದೂಷಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ದೌರ್ಬಲ್ಯವನ್ನು ತಮಿಳುನಾಡು ಚೆನ್ನಾಗಿ ಬಳಸಿಕೊಳ್ಳುತ್ತ ಬಂದಿದೆ.
ಇದಕ್ಕೆ ಸಹಕಾರಿ ಎಂದರೆ ನದಿಯ ಕೆಳಭಾಗದಲ್ಲಿರುವ ರಾಜ್ಯಗಳಿಗೆ ನೀರು ಬಳಸಿಕೊಳ್ಳುವ ಮೊದಲ ಅಧಿಕಾರ ನೀಡಿರುವುದು. ಇದು ಮೇಲುನೋಟಕ್ಕೆ ಉತ್ತಮವಾಗಿ ಕಾಣಿಸುತ್ತದೆ. ಆದರೆ ವಾಸ್ತವವಾಗಿ ನಮ್ಮ ಕೃಷಿ ಬೆಳವಣಿಗೆಗೆ ಅಡ್ಡಿ. ಇದನ್ನು ವಾಸ್ತವ ಸಂಗತಿ ಎಂದು ನೋವನ್ನು ನುಂಗಿಕೊಳ್ಳಬೇಕೋ ಅಥವಾ ಹೋರಾಟ ಮಾಡಬೇಕೋ ಎಂಬುದು ತಿಳಿಯುತ್ತಿಲ್ಲ.