ಕಾವೇರಿ ಹೋರಾಟ: ಎತ್ತಿನ ಗಾಡಿ ಏರಿದ ಸ್ವಾಮೀಜಿ

Advertisement

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಸಕ್ಕರೆ ನಗರಿಯಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ಕೂಡಲಸಂಗಮದ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮಿ ಬೆಂಬಲ ಸೂಚಿಸಿದರು.
ಮಂಡಕ್ಕಿ ಆಗಮಿಸಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತದಿಂದ ರೈತರ ಜೊತೆಗೂಡಿ ಎತ್ತಿನಗಾಡಿ ಏರಿ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆ ಹೋರಾಟಗಾರರು ಕೇಂದ್ರ ರಾಜ್ಯ ಸರ್ಕಾರ, ಶಾಸಕ, ಸಂಸದರು ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲವಾಗಿ ನಿಂತರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಧರಣಿ ಸ್ಥಳದ ವರೆಗೆ ಎತ್ತಿನಗಾಡಿಯಲ್ಲಿ ನಿಂತು ಸಾಗಿದ ಶ್ರೀಗಳು ಕಾವೇರಿ ಹೋರಾಟ ಬೆಂಬಲಿಸಿ ರೈತರ ಜೊತೆ ನಿರಂತರವಾಗಿ ನಿಲ್ಲುವುದಾಗಿ ಘೋಷಿಸಿದರು.
ಆಳುವ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿದ ಅವರು ಕದ್ದು ಮುಚ್ಚಿ ನೀರು ಬಿಡುಗಡೆ ಮಾಡುತ್ತಿರುವ ಸರ್ಕಾರದ ವಿರುದ್ಧ ಕಿಡಿಕಾರಿದರು.