ಕಾಶಿಯಿಂದ ಕಲಿತುಬಂದ ವಿದ್ಯೆ

Advertisement

ಯಾರಾಗಲಿ ಬಿಡಲಿ ತಿಗಡೇಸಿಯವರೇ ನೀವು ಮಾತ್ರ ಆಗಿಯೇ ಆಗುತ್ತೀರಿ. ನನಗೆ ಗೊತ್ತು ನೀವು ಯಾವುದಕ್ಕೂ ಹಿಂದೆ ಮುಂದೆ ನೋಡುವವರಲ್ಲ ಎಂದು ಏನೇನೋ ಮಾಡಿದ್ದ ಕರಿಲಕ್ಷಂಪತಿ ಈಗ ಪೇಚಾಡುತ್ತಿದ್ದಾನೆ. ಚುನಾವಣೆ ಘೋಷಣೆಯಾದಾಗಿನಿಂದಲೂ ಕರಿಲಕ್ಷಂಪತಿ ತಿಗಡೇಸಿಯನ್ನು ಮುಂದೆ ಕೂಡಿಸಿಕೊಂಡು ಮುಂಗೈಗೆ ದಪ್ಪನೆಯ ಕೆಂಪುದಾರ ಕಟ್ಟಿದ್ದ. ನೀವು ಜನರಿಗೆ ಕೈ ಮುಗಿಯುವಾಗ ಈ ದಾರ ಅವರಿಗೆ ಕಾಣಿಸಬೇಕು. ಆಗ ಅವರು ನಿಮಗೆ ವಶವಾಗುತ್ತಾರೆ. ಇದನ್ನು ನಾನು ಕಾಶಿಯಿಂದ ಕಲಿತುಬಂದಿದ್ದೇನೆ. ಅಲ್ಲಿ ನನ್ನ ಗುರುಗಳಾದ ಕುಂಟ್ತಿರುಪ್ತಿ ಅವರು ಮೂರು ಹಗಲು-ಮೂರು ರಾತ್ರಿ ನನ್ನನ್ನು ನದಿಯಲ್ಲಿ ನಿಲ್ಲಿಸಿ ಮಂತ್ರ ಹೇಳಿಕೊಟ್ಟಿದ್ದರು. ಆ ಮಂತ್ರ ಬಾಯಿಪಾಟ ಮಾಡಿ ಕರಗತ ಮಾಡಿಕೊಂಡಿರುವೆ. ಈ ದಾರವನ್ನು ನೋಡಿದವರು ಸಾಕು ನಿಮಗೆ ವಶವಾಗುತ್ತಾರೆ. ರಾತ್ರಿ ನೀವು ಅವರ ಕನಸಿಗೆ ಹೋಗಿ ಹೇಳಿದಂಗೆ ಆಗುತ್ತದೆ ಎಂದು ಹೇಳಿ ಪೆಂಡಿ..ಪೆಂಡಿ ನೋಟುಗಳನ್ನು ಕೈಲಿ ಮುಟ್ಟುವುದಿಲ್ಲ ಎಂದು ಹೇಳಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಸಿಕೊಂಡಿದ್ದ. ಬರೀ ಆರಿಸಿಬರುವುದು ಅಷ್ಟೇ ಅಲ್ಲ. ನೀವು ಮಂತ್ರಿ ಆಗಬೇಕು. ಅದಕ್ಕಾಗಿ ಕೆಲವೊಂದು ವ್ರತಗಳು ಇವೆ ಎಂದು ಹೇಳಿ ರಾತ್ರಿಯಿಡೀ ತಣ್ಣೀರು ಸ್ನಾನ ಮಾಡಿಸಿದ್ದ. ತಣ್ಣೀರಿನ ಸ್ನಾನದಿಂದ ತಿಗಡೇಸಿಗೆ ನೆಗಡಿ ಜ್ವರಬಂದು ನಾಲ್ಕುದಿನ ಮಲಗಿ ಮತ್ತೆ ಕ್ಯಾನ್ವಸ್ ಮಾಡಿದ್ದ. ಅಲ್ಲದೇ ಮಂತ್ರಿಯಾಗ ಮಾಡಿಸುತ್ತೇನೆ ಎಂದು ಓಣಿತುಂಬ ಹೊಗೆ ಎಬ್ಬಿಸಿ ಹೋಮ ಮಾಡಿಸಿದ್ದ. ಚುನಾವಣೆಯಲ್ಲಿ ನೋಟು ಕೊಟ್ಟರೂ ಓಟು ಬರದೇ ತಿಗಡೇಸಿ ಸೋತು ಹೋಗಿ ಮನೆ ಸೇರಿದ್ದ. ಕುರಿಲಚುಮವ್ವನ ಕಡೆಯಿಂದ ತಿಗಡೇಸಿಗೆ ಹೇಳಿ ಕಳುಹಿಸಿ ತಿಗಡೇಸಿಯನ್ನು ಕರೆಯಿಸಿಕೊಂಡ ಕರಿಲಕ್ಷಂಪತಿ…ಐತಿ..ಐತಿ ನಿಮಗೈತಿ ರಾಜನಾಗುವ ಯೋಗ…ಅಂದರೆ ರಾಜ್ಯದ ಸಭೆಯಲ್ಲಿ ನೀವು ಕಾಲು ಹಾಕುತ್ತೀರಿ ಆಗ ನಿಮ್ಮನ್ನು ಮಂತ್ರಿ ಮಾಡಿಯೇ ಮಾಡುತ್ತಾರೆ ಎಂದು ಪೆಟ್ಟಿಗೆಯನ್ನು ಮುಂದೆ ತಳ್ಳಿದ. ಮೊದಲೇ ಸಿಟ್ಟಿಗೆದ್ದಿದ್ದ ತಿಗಡೇಸಿ ತನ್ನ ಹಿಂಬಾಲಕರಿಗೆ ಕೈ ಮಾಡಿದ. ಅವರೆಲ್ಲರೂ ಬಂದು ಕರಿಲಕ್ಷಂಪತಿಯ ಮುಖ ಮಾರಿ ನೋಡದೇ ಎಲ್ಲಿಬೇಕಲ್ಲಿ ಜಜ್ಜಾಡಿದರು. ಅಂದಿನಿಂದ ಕರಿಲಕ್ಷಂಪತಿ ಜಾತಕ ಹೇಳುವುದನ್ನೂ ಬಿಟ್ಟಿದ್ದಾನೆ.