ಕುಂದಗೋಳದಲ್ಲಿ ಆಣೆ, ಪ್ರಮಾಣ ರಾಜಕೀಯ: ಕಂಕಣ ಕಟ್ಟಿಸಿದ ಹಿರಿಯರು.

Advertisement

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಿಬ್ಬರು ಆಣೆ, ಪ್ರಮಾಣ ಮಾಡುವ ಮೂಲಕ ಟಿಕೆಟ್ ಯಾರಿಗೇ ಸಿಕ್ಕರೂ ಪರಸ್ಪರ ಸಹಕಾರ ನೀಡುವುದಾಗಿ ಕಂಕಣ ಕಟ್ಟಿಕೊಂಡಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತ, ಮಾಜಿ ಶಾಸಕ ಎಸ್.ಐ. ಚಿಕ್ಕನನಗೌಡರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಪ್ತ ಎಂ.ಆರ್. ಪಾಟೀಲ್ ಇಬ್ಬರೂ BJPಯ ಪ್ರಬಲ ಟಿಕೆಟ್ ಆಕಾಂಕ್ಷಿಗಳು.

2019ರ ಉಪ ಚುನಾವಣೆಯಲ್ಲಿಯೂ ಉಭಯ ನಾಯಕರು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಆದರೆ, ಎಸ್.ಐ. ಚಿಕ್ಕನಗೌಡರ್ ಟಿಕೆಟ್ ತರುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಮುನಿಸಿಕೊಂಡಿದ್ದ ಎಂ.ಆರ್. ಪಾಟೀಲ ಸಕ್ರೀಯ ಪ್ರಚಾರದಿಂದ ದೂರ ಉಳಿದಿದ್ದರು. ಇದೇ ಕಾರಣಕ್ಕೆ ಚಿಕ್ಕನಗೌಡರ್ ಬಹಳ ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದರು ಎಂಬುದು ಕುಂದಗೋಳ ಹಿರಿಯರ ಅಭಿಪ್ರಾಯ.

ಈ ಬಾರಿಯೂ ಒಬ್ಬರಿಗೊಬ್ಬರು ಒಳ ಹೊಡೆತ ನೀಡುವ ಸಾಧ್ಯತೆಯನ್ನು ಮನಗಂಡ ಕುಂದಗೋಳ ತಾಲೂಕಿನ ಹಿರಿಯರು, ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ತಾಲೂಕಿನ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಇಬ್ಬರ ಕೈಗೂ ಕಂಕಣ ಕಟ್ಟಿಸುವ ಮೂಲಕ ಆಣೆ, ಪ್ರಮಾಣ ಮಾಡಿಸಿಕೊಂಡಿದ್ದಾರೆ.
ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅನ್ಯ ಪಕ್ಷದ ಕಡೆ ಮುಖ ಮಾಡದೇ, ಒಳ ಒಪ್ಪಂದ ಮಾಡಿಕೊಳ್ಳದೆ ಪಕ್ಷದ ಗೆಲವಿಗೆ ಶ್ರಮಿಸುತ್ತೇನೆ ಎಂದು ಆಣೆ ಮಾಡಿಸಿಕೊಂಡಿದ್ದಾರೆ.