ಕುಡುಕ ಎನ್ನಬೇಡಿ… ಕುಡಿದು ಸತ್ತರೆ ೧೦ ಲಕ್ಷ ಪರಿಹಾರ ಕೊಡಿ

Advertisement

ಬೆಳಗಾವಿ: ಇಲ್ಲಿನ ಸುವರ್ಣ ಗಾರ್ಡನ್ ಬಳಿ ಗುರುವಾರ ವಿಶೇಷ ಪ್ರತಿಭಟನೆಯೊಂದು ಗಮನ ಸೆಳೆದಿದೆ. ರಾಜ್ಯದ ಮದ್ಯಪಾನ ಪ್ರಿಯರೆಲ್ಲ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರ ಸಂಘ ಮಾಡಿಕೊಂಡು ತಮ್ಮದೆ ಆದ ವಿಶಿಷ್ಟ ಬೇಡಿಕೆ ಮುಂದಿಟ್ಟಿದ್ದಾರೆ. ಕುಡಿದು ಸತ್ತವರಿಗೆ ೧೦ ಲಕ್ಷ ಪರಿಹಾರ ಸೇರಿದಂತೆ ೨೦ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದ್ದಾರೆ.
ಕಾರ್ಮಿಕ ಮಂಡಳಿಯಂತೆ ಮದ್ಯಪಾನ ಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಮದ್ಯಪ್ರಿಯರನ್ನು ಕುಡುಕ ಎಂದು ಅವಹೇಳನ ಮಾಡಬಾರದು ಮತ್ತು ವಾರ್ಷಿಕ ಆದಾಯದಲ್ಲಿ ಶೇ.೧೦ರಷ್ಟು ಕಲ್ಯಾಣ ನಿಧಿಗೆ ವರ್ಗಾಯಿಸುವುದು, ಮದ್ಯಪಾನ ಪ್ರಿಯರ ಪ್ರತಿಭಾವಂತ ಮಕ್ಕಳಿಗೆ ಸರಕಾರದಿಂದ ಮಾಸಾಶನ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮದ್ಯಪಾನ ಪ್ರಿಯರಿಗೆ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಇತರೆ ಸಾಲ ಸೌಲಭ್ಯ, ವಸತಿ ಸೌಲಭ್ಯವನ್ನು ಸರಕಾರವೇ ಮಾಡಿಕೊಡಬೇಕು. ಮದ್ಯಪಾನ ಸೇವಿಸಿ ವ್ಯಕ್ತಿ ಮೃತಪಟ್ಟರೆ ಅವರ ಕುಟುಂಬಕ್ಕೆ ಸರಕಾರ ೧೦ ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರ ಮದುವೆ ಸಮಾರಂಭಕ್ಕೆ ೨ ಲಕ್ಷ ರೂ. ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸರಕಾರ ಮದ್ಯದ ದರ ಹೆಚ್ಚಿಸುವ ಸಂದರ್ಭದಲ್ಲಿ ಮದ್ಯಪಾನ ಸಂಘದ ಸದಸ್ಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ದರ ಹೆಚ್ಚಳ ಮಾಡಬೇಕು. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗುಣಮಟ್ಟದ ಆಹಾರ ಒದಗಿಸಬೇಕು. ಅಲ್ಲಿನ ಶೌಚಾಲಯ ಶುಚಿಯಾಗಿಟ್ಟುಕೊಳ್ಳುವಂತೆ ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಮದ್ಯದ ಬಾಟಲ್ ಎಂಆರ್‌ಪಿ ದರ ತೆಗೆದುಕೊಳ್ಳಬೇಕು ಎಂದು ಸರಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದ್ದಾರೆ.
ಈಗಾಗಲೇ ಕಾನೂನು ಉಲ್ಲಂಘಿಸಿ ದೇವಾಲಯ, ಶಾಲೆಗಳಲ್ಲಿ ಬಾರ್ ತೆರೆದಿದ್ದು ಅವುಗಳನ್ನು ಬಂದ್ ಮಾಡಿಸಬೇಕು. ಮದ್ಯದ ಅಂಗಡಿ ತೆರೆಯುವಾಗ ಸರಕಾರ ಸೂಕ್ತ ಜಾಗ ನೋಡಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಮದ್ಯಪಾನ ಸಂಘದ ಅಧ್ಯಕ್ಷ ವೆಂಕಟೇಶ ಗೌಡ ಬೋರೆಹಳ್ಳಿ, ರಾಮಸ್ವಾಮಿ, ಮೋಹನ ನಾಯಕ, ಎ.ಎಂ.ಸಿದ್ದೇಶ ಮತ್ತಿತರರು ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದರು.