ಕುಳಗೇರಿ ಕ್ರಾಸ್‌ನಲ್ಲಿ ಬೈಕ್ ಕಳ್ಳರ ಹಾವಳಿ

Advertisement

ಕುಳಗೇರಿ ಕ್ರಾಸ್: ಗ್ರಾಮದಲ್ಲಿ ಕಳವು ಪ್ರಕರಣ ಹೆಚ್ಚುತ್ತಿವೆ. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ ಬೈಕ್ ಪೆಟ್ರೋಲ್ ಕದಿಯುತ್ತಿದ್ದ ಖದೀಮರು ಈ ಬಾರಿ ಬೆಲೆ ಬಾಳುವ ಬೈಕ್‌ಗಳನ್ನೇ ಕದ್ದು ಪರಾರಿಯಾಗಿದ್ದಾರೆ.
ಗ್ರಾಮದ ಪ್ರವಾಸಿ ಮಂದಿರದ ಪಕ್ಕದಲ್ಲಿನ ಬಸವ ನಗರದ ಬಡಾವಣೆಯಲ್ಲಿನ ಬಿ.ಎಸ್. ಹುಳ್ಳಿಯವರಿಗೆ ಸೇರಿದ ಎರೆಡು ಬೈಕ್ ಹಾಗೂ ಶಿಕ್ಷಕ ಕುಂಬಾರ ಅವರಿಗೆ ಸೇರಿದ ಒಂದು ಬೈಕ್ ಸೇರಿ ಮೂರು ಬೈಕ್ ಕದಿಯಲು ಪ್ರಯತ್ನಿಸಿದ ಮೂರು ಜನ ಕಳ್ಳರು ಸ್ಟಾರ್ಟ್ ಆಗದೇ ಇದ್ದ ಒಂದು ಬೈಕ್ ಅಲ್ಲಿಯೇ ಬಿಟ್ಟು ಎರಡು ಬೈಕ್ ಕದ್ದು ಪರಾರಿಯಾಗಿದ್ದಾರೆ.
ತಡರಾತ್ರಿ ಸಮಯದಲ್ಲಿ ಮೂರು ಜನ ಯುವಕರ ಪಡೆ ಕಿವಿಯಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತ ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯ ಸೇರಿದಂತೆ ಬೈಕ್ ಕದ್ದು ಹೋಗುತ್ತಿರುವ ದೃಶ್ಯ ಸಹ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.