ಕುವೆಂಪು ನುಡಿಗಟ್ಟಿನ ಪ್ರಸಂಗ ಸರ್ಕಾರದ ಅಧಿಕಪ್ರಸಂಗ

Advertisement

ಸಾರ್ವಜನಿಕರ ಹೃದಯಶ್ರೀಮಂತಿಕೆಯ ವಿಸ್ತರಣೆ ಹಾಗೂ ಬಲವರ್ಧನೆಗೆ ಪ್ರೇರಕವಾಗುವ ಮಹಾನ್ ಸಾಧಕರ ನುಡಿಗಟ್ಟುಗಳು ಒಂದು ರೀತಿಯಲ್ಲಿ ವೇದವಾಕ್ಯ. ಜಾತಿ ವರ್ಗ ಭಾಷೆ ಮೀರುವ ಇಂತಹ ನಂಬಿಕೆಗಳನ್ನು ಪ್ರಶ್ನಿಸುವುದು ಜೇನುಗೂಡಿಗೆ ಕೊಳ್ಳಿ ಇಟ್ಟಂತೆ ಎಂಬುದನ್ನು ಅಧಿಕಾರಸ್ಥರು ಯಾವತ್ತಿಗೂ ಜ್ಞಾಪಕದಲ್ಲಿಯೇ ಇಟ್ಟುಕೊಂಡು ಹಾಗೆಯೇ ಕಾರ್ಯ ನಿರ್ವಹಿಸುತ್ತಿದ್ದರೆ ಅದು ಆಡಳಿತ ವ್ಯವಹಾರಕ್ಕೆ ಒಂದು ಎಚ್ಚರಿಕೆಯ ಗಂಟೆಯ ರೂಪದಲ್ಲಿ ಅಧಿಕಾರಿಗಳಿಗೆ ಮಾರ್ಗಸೂಚಿಯಾಗಿ ಇರುತ್ತದೆ. ಯಥಾಸ್ಥಿತಿಯನ್ನು ಕೊಡವಿಹಾಕಬೇಕು ಎಂಬ ಬೀಸು ನಿಲುವುಗಳು ಅಧಿಕಾರಸ್ಥರ ಮನಸ್ಸಿಗೆ ಎಂದಿಗೂ ಬರಲೇಬಾರದು. ಏಕೆಂದರೆ, ಯಥಾಸ್ಥಿತಿ ಅಥವಾ ಚಲನಶೀಲ ಸ್ಥಿತಿ ಯಾವುದು ಎಂಬುದನ್ನು ನಿಖರವಾಗಿ ಗುರುತಿಸಿ ಹೇಳುವುದು ಕಷ್ಟ. ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ' ಎಂಬ ರಾಷ್ಟçಕವಿ ಕುವೆಂಪು ಕಾವ್ಯದ ಸಾಲುಗಳನ್ನು ಬಳಸಿಕೊಂಡು ರೂಪಿಸಿರುವ ಘೋಷವಾಕ್ಯಗಳನ್ನು ಮೊರಾರ್ಜಿ, ಚನ್ನಮ್ಮ ಹಾಗೂ ಇನ್ನಿತರ ಸರ್ಕಾರಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಬದಲಾಯಿಸಿಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂಬ ಶಬ್ದಗಳ ನುಡಿಗಟ್ಟನ್ನು ಅಳವಡಿಸಲು ಹೋಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಸರ್ಕಾರದ ಆಡಳಿತಗಾರರ ಪ್ರಸಂಗ ಸಾರ್ವಜನಿಕರ ದೃಷ್ಟಿಯಲ್ಲಿ ಮಿತಿಮೀರಿದ ಅಧಿಕಪ್ರಸಂಗ.
ವಸತಿ ಶಾಲೆಗಳ ದ್ವಾರಗಳ ಮೇಲಿದ್ದ ಘೋಷವಾಕ್ಯವನ್ನು ರಾತ್ರಿ ಬೆಳಗಾಗುವುದರೊಳಗೆ ಬದಲಾಯಿಸುವ ತುರ್ತು ಪರಿಸ್ಥಿತಿ ಏನು ತಲೆದೋರಿತ್ತೋ ಯಾರೊಬ್ಬರಿಗೂ ಗೊತ್ತಿಲ್ಲ. ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಾ ಇದರ ಬಗ್ಗೆ ಮಾಹಿತಿ ತಿಳಿದು ಹೇಳುತ್ತೇನೆ ಎಂಬ ಮಾತಿನ ಹಿಂದಿರುವುದು ಇದು ಸರ್ಕಾರದ ಮಟ್ಟದಲ್ಲಿ ಆಗಿರುವ ತೀರ್ಮಾನವಲ್ಲ ಎಂಬುದು. ಹಾಗೊಮ್ಮೆ ಈ ಘೋಷ ವಾಕ್ಯಗಳನ್ನು ಬದಲಾವಣೆ ಮಾಡಲೇಬೇಕೆಂದಿದ್ದರೆ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ದಾರಿ ಮುಕ್ತವಾಗಿತ್ತು. ಆದರೆ, ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ರಾಜಮಾರ್ಗವನ್ನು ಬಿಟ್ಟು ಒಳದಾರಿಯಲ್ಲಿ ಈ ಘೋಷ ವಾಕ್ಯಗಳನ್ನು ಬದಲಾವಣೆ ಮಾಡಲು ನಿರ್ಧಾರ ಕೈಗೊಂಡವರು ಯಾರು? ಹಾಗೂ ಈ ನಿರ್ಧಾರ ಕೈಗೊಳ್ಳಲು ಅನಿವಾರ್ಯವಾಗಿದ್ದ ಪ್ರಸಂಗವಾದರೂ ಯಾವುದು? ಇದು ಅಧಿಕೃತ ಆದೇಶದ ಮೂಲಕ ಆದದ್ದೇ ಅಥವಾ ಕೇವಲ ಬಾಯಿ ಮಾತಿನ ಮೂಲಕ ಆಗಿರುವ ಆದೇಶವೇ? ಎಂಬ ಪ್ರಶ್ನಾವಳಿಗೆ ಸಂಬಂಧಿಸಿದಂತೆ ಕರ್ನಾಟಕದ ಜನತೆಗೆ ರಾಜ್ಯ ಸರ್ಕಾರ ಸಮಜಾಯಿಷಿ ನೀಡುವ ಅಗತ್ಯ ಬಂದೊದಗಿದೆ.
ಕುವೆಂಪು ಸಾಹಿತಿಯಾಗಿ, ಸಮಾಜ ಸುಧಾರಕರಾಗಿ, ಶಿಕ್ಷಣ ತಜ್ಞರಾಗಿ ಹಾಗೂ ವಿಶ್ವಮಾನವ ಪರಿಕಲ್ಪನೆಯನ್ನು ಸೃಷ್ಟಿಸುವ ಮೂಲಕ ವಸುದೈವ ಕುಟುಂಬಕಂ ಎಂಬ ಭಾರತೀಯರ ಉದಾತ್ತ ಚಿಂತನೆಗೆ ಆಧುನಿಕ ರೂಪವನ್ನು ನೀಡಿದ ಮಹಾನ್ ಚೇತನ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕುವೆಂಪು ಅವರ ಜಾತ್ಯತೀತ ಹಾಗೂ ವರ್ಗಾತೀತ ನಿಲುವು ಒಂದು ದಾರಿದೀಪ. ಶಾಸನಸಭೆಯೂ ಸೇರಿದಂತೆ ಹಲವಾರು ವೇದಿಕೆಗಳಲ್ಲಿ ಮುಖ್ಯಮಂತ್ರಿಗಳು ಕುವೆಂಪು ಅವರ ಬಗೆಗಿನ ತಮ್ಮ ಗೌರವವನ್ನು ವ್ಯಕ್ತಪಡಿಸಿರುವುದು ಇದಕ್ಕೊಂದು ನಿದರ್ಶನ. ಇಂತಹ ಮಹಾಪುರುಷರ ನುಡಿಗಟ್ಟನ್ನು ವಸತಿ ಶಾಲೆಗಳ ದ್ವಾರಗಳಿಂದ ಬದಲಾವಣೆ ಮಾಡಲು ರಾತ್ರೋರಾತ್ರಿ ಹೊರಟ ಸುಗ್ರೀವಾಜ್ಞೆ ರೀತಿಯ ಆದೇಶ ಮತ್ತೆ ಹಲವು ಪ್ರಶ್ನೆಗಳನ್ನು ಸೃಷ್ಟಿಸಿವೆ. ಈ ವಸತಿ ಶಾಲೆಗಳು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಸೇರುತ್ತವೆ. ಸಮಾಜ ಕಲ್ಯಾಣ ಖಾತೆ ಮಂತ್ರಿ ಡಾ. ಎಚ್.ಸಿ. ಮಹದೇವಪ್ಪ ಅವರು ಭುಗಿಲೆದ್ದಿರುವ ಈ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಪಡಿಸಿರುವ ಅಭಿಪ್ರಾಯದ ಸಾರಾಂಶವೆಂದರೆ ಕುವೆಂಪು ನಮಗೆಲ್ಲಾ ಆರಾಧ್ಯದೈವ. ಘೋಷವಾಕ್ಯದ ಕೆಲ ಶಬ್ದಗಳನ್ನು ಬದಲಾಯಿಸಿರಬಹುದು ಅಷ್ಟೆ ಎಂಬುದು ಅವರ ವಿವರಣೆ. ಆದರೆ, ಇಂತಹ ಮಹತ್ವದ ನಿರ್ಧಾರ ಸರ್ಕಾರದಲ್ಲಿ ಚರ್ಚೆಯಾಗದೆ ಹಾಗೆಯೇ ಜಾರಿಯಾಗುವುದು ಸಾಧ್ಯವೇ ಎಂಬುದು ಉತ್ತರ ದೊರಕದ ಪ್ರಶ್ನೆ.
ಶಾಸನಸಭೆಯಲ್ಲಿ ಪ್ರತಿಪಕ್ಷಗಳ ಮುಖಂಡರು ಹಾಗೂ ಸಾಹಿತಿ ಹಾಗೂ ಕಲಾವಿದರ ಬಳಗದವರು ಈ ಹಠಾತ್ ಬದಲಾವಣೆಯ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸುಸೂತ್ರವಾಗಿ ಜಾರಿಯಲ್ಲಿರುವುದನ್ನು ಬದಲಾವಣೆ ಮಾಡುವುದು ಕ್ರಾಂತಿಯಲ್ಲ. ಅದೊಂದು ಭ್ರಾಂತಿ ಎಂದು ಹಂಗಿಸಿರುವುದು ರಾಜ್ಯದಲ್ಲಿ ಮಾರ್ದನಿಗೊಳ್ಳುತ್ತಿರುವ ಸಾರ್ವಜನಿಕರ ಭಾವನೆಯ ಅಕ್ಷರಗಳ ರೂಪ. ರಾಜ್ಯ ಸರ್ಕಾರ ಶಾಸನಸಭೆಯ ಮೂಲಕ ಈ ಬೆಳವಣಿಗೆಯ ಬಗ್ಗೆ ಸಂಪೂರ್ಣ ವಿವರಣೆ ನೀಡುವುದಲ್ಲದೆ ಇಂತಹ ಅಧಿಕಪ್ರಸಂಗದ ಕ್ರಮಕ್ಕೆ ಕಾರಣವಾದ ವ್ಯಕ್ತಿ ಮತ್ತು ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಮಹಾಚೇತನ ಕುವೆಂಪು ಅವರ ಸದಾಶಯಗಳಿಗೆ ಗೌರವ ಸಲ್ಲುವಂತೆ ಮಾಡುವುದು ಆಗಿರುವ ತಪ್ಪಿಗೆ ಒಂದು ಪ್ರಾಯಶ್ಚಿತ್ತ.