ಕೆರೆ, ಕಾಲುವೆ ಒತ್ತುವರಿ ಮಾಡಿದ್ದೇ ಈಗ ಬೆಂಗಳೂರಿಗೆ ಕಂಟಕ: ನ್ಯಾ.ಸಂತೋಷ ಹೆಗ್ಡೆ

ಸಂತೋಷ ಹೆಗ್ಡೆ
Advertisement

ಧಾರವಾಡ: ಬೆಂಗಳೂರಿನಲ್ಲಿ ಕೆರೆಗಳು ಹಾಗೂ ಕಾಲುವೆಗಳನ್ನು ಒತ್ತುವರಿ ಮಾಡಿ ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ್ದರಿಂದಲೇ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೇ ಸಮಸ್ಯೆ ಉಂಟಾಗಿದೆ ಎಂದು ಮಾಜಿ ನ್ಯಾಯಮೂರ್ತಿ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬೆಂಗಳೂರಿನ ಕೆರೆ ಒತ್ತುವರಿ ಕುರಿತು ಬಹಳ ವರ್ಷಗಳ ಹಿಂದೆಯೇ ಎರಡು ವರದಿಗಳನ್ನು ಸರ್ಕಾರಕ್ಕೆ ನೀಡಿದ್ದೆ. ಹಿಂದೆ ಮಹಾರಾಜರು ನಿರ್ಮಿಸಿದ್ದ ಕೆರೆಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿತ್ತು. ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎಂದರು.
ನಗರದಲ್ಲಿ ಸುಮಾರು ೨೦೦ ಕೆರೆಗಳಿದ್ದವು. ಆಗ ಸರ್ಕಾರ ಯೋಜನೆ ಸೂಕ್ತ ಜಾಗೆ ನೀಡುವುದನ್ನು ಬಿಟ್ಟು ರಾಜಕಾಲುವೆ ಒತ್ತುವರಿಗೆ ಅವಕಾಶ ನೀಡಿತು. ಈ ಮಳೆ ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವರು ತಮ್ಮ ಲಾಭಕ್ಕೆ ಒತ್ತುವರಿ ಮಾಡಿದ್ದೂ ಇದೆ. ಸುಭಾಷನಗರ ಬಸ್ ನಿಲ್ದಾಣ, ಸಂಪಂಗಿಯಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಅಕ್ಕತಿಮ್ಮನಹಳ್ಳಿಯಲ್ಲಿ ಹಾಕಿ ಕ್ರೀಡಾಂಗಣ ಹೀಗೆ ಎಲ್ಲ ಕೆರೆಗಳನ್ನು ಬಿಡಿಎ ಮೂಲಕ ಲಾಭಕ್ಕೆ ಬಳಸಿಕೊಳ್ಳಲಾಗಿದೆ. ಇದರಲ್ಲಿ ಅಧಿಕಾರದಲ್ಲಿ ಇದ್ದವರ ಹಾಗೂ ಇಲ್ಲದವರ ದುರಾಸೆ ಜತೆಗೆ ಜನರ ದುರಾಸೆಯೂ ಇದೆ. ಐಟಿ ಕಂಪನಿಗಳು ಇದರಲ್ಲಿ ಶಾಮೀಲಾಗಿವೆ ಎಂದರು.
ಹಿಂದೆ ಕೆರೆ ನೀರು ಹೋಗಲು ಒಂದು ವ್ಯವಸ್ಥೆ ಇತ್ತು. ಬೆಂಗಳೂರಿಗೆ ಗಾರ್ಡನ್ ಸಿಟಿ, ಏರ್ ಕಂಡೀಷನ್ ಸಿಟಿ ಎಂದು ಕರೆಯುತ್ತಿದ್ದರು. ಕೆರೆಗಳಿದ್ದಾಗ ನಗರದಲ್ಲಿ ತಂಪಾದ ವಾತಾವರಣ ಇತ್ತು. ಪ್ರಸ್ತುತ ಬಿಸಿಲಿನ ಪ್ರಮಾಣ ಹೆಚ್ಚಳವಾಗಿದೆ. ಇದು ಮನುಷ್ಯನ ದುರಾಸೆಯ ಪ್ರತಿಫಲ ಎಂದರು.