ಕೆ. ಸೋಮಶೇಖರ್‌ ಬಿಡಿಸಿದ ನಾಡದೇವತೆಯ ಚಿತ್ರ ಅಧಿಕೃತ

Advertisement

ಬೆಂಗಳೂರು: ಚಿತ್ರ ಕಲಾವಿದ ಕೆ. ಸೋಮಶೇಖರ್‌ ಅವರು ಸಿದ್ಧಪಡಿಸಿರುವ ‘ನಾಡದೇವಿ’ಯ ಚಿತ್ರವನ್ನು ಅಧಿಕೃತವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
ಕೆ. ಸೋಮಶೇಖರ್‌ ರಚಿಸಿರುವ ಚಿತ್ರವು ಶರೀರ ಶಾಸ್ತ್ರದ ಪ್ರಕಾರ ಪ್ರಮಾಣ ಬದ್ಧವಾಗಿದೆ. ಈ ಚಿತ್ರದಲ್ಲಿ ಕರ್ನಾಟಕದ ವೈಶಿಷ್ಟ್ಯತೆ ಎದ್ದು ಕಾಣುತ್ತದೆ. ಚಾಲುಕ್ಯರು, ಹೊಯ್ಸಳ ಅರಸರ ಕಾಲದ ಕಿರೀಟ, ಆಭರಣಗಳನ್ನು ಹೊಂದಿದ್ದು, ಹಸಿರು ಬಣ್ಣದ ಇಳಕಲ್‌ ಸೀರೆಯನ್ನು ಉಟ್ಟ ಪೂರ್ಣವಾದ ಚಿತ್ರವನ್ನು ಹೊಂದಿದೆ. ನಮ್ಮ ನಾಡಿನ ಭೂಪಟ, ಧ್ವಜ, ಕನ್ನಡ ಭಾಷೆಯನ್ನು ಪ್ರತಿನಿಧಿಸುವ ತಾಳೆಗರಿಯ ಪುಸ್ತಕವನ್ನು ಹಿಡಿದಿರುವ ಹಸ್ತ ಕನ್ನಡಿಗರ ಹಿರಿಮೆಯನ್ನು ಸೂಚಿಸುತ್ತದೆ.
ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ, ಕೌಶಲ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕದ ವೈಶಿಷ್ಟ್ಯದ ಸಿಂಹ ಲಾಂಛನ, ಭುಜ ಕೀರ್ತಿಗಳು, ಕುತ್ತಿಗೆ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕದ ಲಾಂಛನ-ಗಂಡ ಭೇರುಂಡ ಪದಕ, ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಕಂಡು ಬರುವ ಕಟಿಯಲ್ಲಿ ಬೆಳ್ಳಿಯ ಡಾಬು, ಜತೆಗೆ ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಕರ್ನಾಟಕ ಪರಂಪರೆಯ ಆಳೆತ್ತರದ ವೈಜಯಂತಿ ಹಾರ, ಕಾಲಿನಲ್ಲಿ ಕಡಗ, ಋುಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ತಲೆಯಲ್ಲಿ ಮುಡಿದ ಹೂವು ಸೌಭಾಗ್ಯದ ಧ್ಯೋತಕಗಳಾಗಿವೆ. ತಾವರೆ ಹೂವು ಕಾಲುಗಳಿಗೆ ಆಸರೆ ನೀಡಿದೆ.
ನಾಡದೇವಿಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರದ ಆಯ್ಕೆ ಸಮಿತಿಯಲ್ಲಿ ಪ್ರೊ. ಚೂಡಾಮಣಿ ನಂದಗೋಪಾಲ್‌, ಬಾಬುರಾವ್‌ ನಡೋಣಿ, ಎಚ್‌.ಎಚ್‌. ಮ್ಯಾದಾರ್‌, ಪಿ.ಎಸ್‌. ಕಡೇಮನಿ ಅವರಿದ್ದರು.