ಕೇಂದ್ರದಿಂದ ಕಾಂಗ್ರೆಸ್ ಗ್ಯಾರಂಟಿ ನಕಲು

Advertisement

ಮಂಗಳೂರು: ಕಾಂಗ್ರೆಸ್‌ನ ಗ್ಯಾರಂಟಿ ಪದವನ್ನು ಬಿಜೆಪಿಯವರು ಕದ್ದು ಈಗ ಮೋದಿ ಗ್ಯಾರಂಟಿ ಅಂತಿದ್ದಾರೆ. ನಮ್ಮ ಕಾರ್ಯಕರ್ತರು ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆಗಳಿಗೆ ತಲುಪಿಸದೇ ಇದ್ದರೆ ಬಿಜೆಪಿಯವರು ನಾವೇ ಮಾಡಿದ್ದು ಅನ್ನುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಅಡ್ಯಾರಿನ ಸಹ್ಯಾದ್ರಿ ಮೈದಾನದಲ್ಲಿ ಶನಿವಾರ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೈದ ಅವರು, ಬಿಜೆಪಿಯವರು ಹಿಂದೆ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿ ಆಗಲ್ಲ ಎನ್ನುತ್ತಿದ್ದರು, ಈಗ ನಮ್ಮ ಗ್ಯಾರಂಟಿ ಪದವನ್ನು ಕದ್ದು ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಸ್ವತಃ ನರೇಂದ್ರ ಮೋದಿಯೇ ಹೇಳಿದ್ದರು. ದಿವಾಳಿ ಆಗಿರುತ್ತಿದ್ದರೆ ೩.೭೧ ಕೋಟಿ ರೂ.ಗಳ ಬಜೆಟ್ ಮಂಡಿಸಲು ಆಗುತ್ತಿತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯ ಈಗ ಆರ್ಥಿಕವಾಗಿ ಸುಭದ್ರವಾಗಿದೆ. ಬಿಜೆಪಿ, ಮೋದಿ ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಿದ್ದಾರೆಂದರೆ ಅವರಲ್ಲಿ ಬೇರೆ ಯಾವ ಬಂಡವಾಳವೇ ಇಲ್ಲ ಎಂದರು.
೧೫ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ೫,೪೯೫ ಕೋಟಿ ರೂ. ಅನುದಾನ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ ಸೇರಿ ೧೧,೪೯೫ ಕೋಟಿ ರೂ. ಬರಬೇಕಿತ್ತು. ಆದರೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಣ ಕೊಡಲಾಗದು ಎಂದು ತಿರಸ್ಕಾರ ಮಾಡಿದ್ದಾರೆ. ರಾಜ್ಯದಿಂದಲೇ ಗೆದ್ದು ಅಧಿಕಾರ ಪಡೆದವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ, ಇದು ನ್ಯಾಯವೇ ಎಂದು ಸಿಎಂ ಪ್ರಶ್ನಿಸಿದರು.
ಸಬ್ ಕಾ ಸಾಥ್, ಸಬ್‌ಕಾ ವಿಕಾಸ್ ಎಂದು ನರೇಂದ್ರ ಮೋದಿ ಹೇಳಿದರೆ, ಟೋಪಿ, ಬುರ್ಖಾ ಹಾಕಿದವರು ಆಫೀಸ್‌ಗೇ ಬರಬೇಡಿ ಎಂದು ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಹೇಳುತ್ತಾರೆ. ಇವರು ಹೇಳಿದಂತೆ ಯಾವತ್ತಾದರೂ ನಡೆದು ಕೊಂಡಿದ್ದಾರಾ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.