ಕೈಗಾರಿಕೆಗೆ ವಿದ್ಯುತ್ ತೆರಿಗೆ ರಿಯಾಯಿತಿ ಸಕಾಲಿಕ

ಸಂಪಾದಕೀಯ
Advertisement

ರಾಜ್ಯದಲ್ಲಿ ಇತ್ತೀಚೆಗೆ ವಿದ್ಯುತ್ ದರ ಹೆಚ್ಚಿಸಿದ ಮೇಲೆ ಹಲವು ಕಡೆ ಪ್ರತಿಭಟನೆಗಳು ನಡೆದವು. ಕೈಗಾರಿಕೆಗಳನ್ನು ಪ್ರತಿನಿಧಿಸುವ ಹಲವು ಸಂಸ್ಥೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ವಿದ್ಯುತ್ ಬಳಕೆಯ ಮೇಲೆ ವಿಧಿಸಿರುವ ತೆರಿಗೆಯನ್ನು ಕಡಿಮೆ ಮಾಡಲು ಒತ್ತಾಯಿಸಿವೆ. ಈಗ ಎಲ್ಲ ವಿದ್ಯುತ್ ಗ್ರಾಹಕರು ಬಳಸುವ ವಿದ್ಯುತ್ ಮೇಲೆ ಶೇ.೯ ರಷ್ಟು ತೆರಿಗೆ ಇದೆ. ಪ್ರತಿ ವರ್ಷ ವಿದ್ಯುತ್ ದರವನ್ನು ಪರಿಷ್ಕರಿಸುವ ಅಧಿಕಾರವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಹೊಂದಿದೆ. ಈ ವರ್ಷ ಏಪ್ರಿಲ್‌ನಿಂದ ಪೂರ್ವಾನ್ವಯವಾಗುವಂತೆ ದರವನ್ನು ಹೆಚ್ಚಿಸಲಾಗಿದೆ. ಅಲ್ಲದೆ ನಿಗದಿತ ಶುಲ್ಕ ಹಾಗೂ ಇಂಧನ ದರ ಹೊಂದಾಣಿಕೆ ಶುಲ್ಕವನ್ನೂ ಹೆಚ್ಚಿಸಿದೆ. ಇದರ ವಿರುದ್ಧ ಕೈಗಾರಿಕೆಗಳು ಪ್ರತಿಭಟಿಸಿದಾಗ ಸರ್ಕಾರ ಈ ದರವನ್ನು ಬದಲಿಸುವ ಅಧಿಕಾರ ತಮಗಿಲ್ಲ ಎಂದು ಹೇಳಿದ ಮೇಲೆ ವಿದ್ಯುತ್ ಬಳಕೆಯ ಮೇಲೆ ಇರುವ ತೆರಿಗೆ ಪ್ರಮಾಣ ಕಡಿಮೆ ಮಾಡಿ ಎಂದು ಒತ್ತಾಯಿಸಿವೆ.
ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಹಾಗೂ ಬೃಹತ್ ಕೈಗಾರಿಕೆಗಳು ಹಲವು ಜಿಲ್ಲೆಗಳಲ್ಲಿವೆ. ಸಣ್ಣ ಕೈಗಾರಿಕೆಗಳು ಒಟ್ಟು ೫೬೫೫೩೮ ಘಟಕಗಳಿವೆ. ಇವುಗಳು ೨೨೩೮ ದಶಲಕ್ಷ ಯೂನಿಟ್ ಬಳಸುತ್ತಿವೆ. ಎಚ್‌ಟಿ ಮಾರ್ಗ ಪಡೆದಿರುವ ಕೈಗಾರಿಕೆಗಳು ಒಟ್ಟು ೧೫೬೧೩ ಘಟಕಗಳಿವೆ. ಇವುಗಳು ಒಟ್ಟು ೯೦೨೬ ದಶಲಕ್ಷ ಯೂನಿಟ್ ಬಳಸುತ್ತಿವೆ. ಇಡೀ ರಾಜ್ಯದ ಒಟ್ಟು ವಿದ್ಯುತ್ ಬಳಕೆಯಲ್ಲಿ ಕೈಗಾರಿಕೆಗಳು ಶೇ.೧೭.೬೭ ರಷ್ಟು ಪಾಲು ಹೊಂದಿವೆ. ಇವುಗಳಿಂದ ಒಟ್ಟು ಶೇ.೯ ರಷ್ಟು ವಿದ್ಯುತ್ ತೆರಿಗೆ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಸಣ್ಣ ಕೈಗಾರಿಕೆಗಳೇ ರಾಜ್ಯದಲ್ಲಿ ೪೬ ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಇದರಿಂದ ಒಟ್ಟು ೧.೬ ಕೋಟಿ ಜನರಿಗೆ ಆಶ್ರಯ ಲಭಿಸಿದಂತಾಗಿದೆ. ಕೈಗಾರಿಕೆಯಿಂದ ಬರುವ ತೆರಿಗೆ ಪ್ರಮಾಣವನ್ನು ಶೇ.೯ ರಿಂದ ೩ಕ್ಕೆ ಇಳಿಸಿದರೆ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಗುವುದಂತೂ ನಿಜ. ಆದರೆ ಇದು ಮುಂಬರುವ ದಿನಗಳಲ್ಲಿ ಕೈಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆ ಅಧಿಕಗೊಂಡು ವ್ಯಾಪಾರ ಮತ್ತು ವಹಿವಾಟು ಅಧಿಕಗೊಳ್ಳುವುದರಿಂದ ಜಿಎಸ್‌ಟಿ ಸಂಗ್ರಹದ ಮೂಲಕ ಸರ್ಕಾರಕ್ಕೆ ಲಭಿಸಲಿದೆ. ಹೀಗಾಗಿ ಒಟ್ಟಾರೆ ರಾಜ್ಯ ಸರ್ಕಾರಕ್ಕೆ ನಷ್ಟವೇನೂ ಆಗುವುದಿಲ್ಲ. ವಿದ್ಯುತ್ ತೆರಿಗೆ ಕಡಿಮೆ ಮಾಡುವುದರಿಂದ ಆಗುವ ನಷ್ಟ ಕೈಗಾರಿಕೆ ಉತ್ಪಾದನೆ ಅಧಿಕಗೊಂಡು ಅದರಿಂದ ಬರುವ ಜಿಎಸ್‌ಟಿ ತೆರಿಗೆ ಪ್ರಮಾಣ ಅಧಿಕಗೊಂಡು ಆರ್ಥಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇದರ ಬಗ್ಗೆ ವಾಣಿಜ್ಯ ಸಂಘಟನೆಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿವೆ. ಇಂಧನ ಸಚಿವರು ಇದರ ಬಗ್ಗೆ ಸಹಾನುಭೂತಿ ತೋರಿದ್ದು ಬೃಹತ್ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆ ಸಚಿವರೊಂದಿಗೆ ಚರ್ಚಿಸಬೇಕಿದೆ. ನಂತರ ಹಣಕಾಸು ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಬೇಕಿದೆ.
ಕೊರೊನಾ ಕಾಲದಲ್ಲಿ ನೆಲಕಚ್ಚಿದ್ದ ಕೈಗಾರಿಕೆಗಳು ಈಗ ಮೆಲ್ಲನೆ ತಲೆಎತ್ತುತ್ತಿವೆ. ಕೈಗಾರಿಕೆ ಉತ್ಪನ್ನ ಅಧಿಕಗೊಳ್ಳಬೇಕು ಎಂದರೆ ಸರ್ಕಾರ ಹಲವು ರಿಯಾಯಿತಿಗಳನ್ನು ನೀಡುವುದು ಅನಿವಾರ್ಯ. ವಿದ್ಯುತ್ ದರವನ್ನು ಕಡಿಮೆ ಮಾಡಲು ಸಾಧ್ಯವಾಗದೇ ಹೋದರೂ ವಿದ್ಯುತ್ ಬಳಕೆ ಮೇಲಿರುವ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದು ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲವೇನೂ ಅಲ್ಲ. ಹೀಗಾಗಿ ಕೈಗಾರಿಕೆಗಳಿಗೆ ತೆರಿಗೆ ರಿಯಾಯಿತಿ ನೀಡಲು ಅವಕಾಶವಿದೆ ಎಂದು ವಾಣಿಜ್ಯ ಸಂಘಟನೆಗಳು ವಾದ ಮಂಡಿಸಿವೆ. ವಾಣಿಜ್ಯ ಸಂಘಟನೆಗಳಲ್ಲಿ ಒಮ್ಮತ ಕಂಡು ಬಾರದೇ ಇರುವುದೂ ಅಡ್ಡಿಯಾಗಿದೆ. ಉತ್ತರ ಕರ್ನಾಟಕದ ಸಂಘಟನೆ ಚಳವಳಿ ಮಾರ್ಗ ಅನುಸರಿಸಿದರೆ ಬೆಂಗಳೂರಿನಲ್ಲಿರುವ ವಾಣಿಜ್ಯ ಒಕ್ಕೂಟ ಮಾತುಕತೆ- ಸಂಧಾನ ಮಾರ್ಗವನ್ನು ಅನುಸರಿಸಲು ಬಯಸಿದೆ. ಆದರೂ ಸರ್ಕಾರದ ಮುಂದಿಟ್ಟಿರುವ ಮನವಿ ಮಾತ್ರ ಏಕಮುಖವಾಗಿದೆ. ವಿದ್ಯುತ್ ರಂಗದಲ್ಲಿ ಬದಲಾವಣೆಗಳು ಬಂದ ಮೇಲೆ ಸರ್ಕಾರ ನೀಡುತ್ತಿರುವ ಎಲ್ಲ ಕೊಡುಗೆಗಳೂ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚುವರಿ ಹೊರೆಯಾಗಿ ರೂಪುಗೊಳ್ಳುತ್ತಿವೆ. ಕ್ರಾಸ್ ಸಬ್ಸಿಡಿ ಹೆಸರಿನಲ್ಲಿ ಹೆಚ್ಚುವರಿ ದರವನ್ನು ಪಾವತಿಸುವುದು ಅನಿವಾರ್ಯವಾಗಿದೆ. ಪ್ರತಿ ವರ್ಗದ ಗ್ರಾಹಕರಿಗೆ ಪ್ರತ್ಯೇಕವಾಗಿ ವಿದ್ಯುತ್ ಸರಬರಾಜು ದರ ನಿಗದಿಪಡಿಸಬೇಕೆಂಬ ನಿಯಮ ಇದ್ದರೂ ಇನ್ನೂ ಇದು ಸಾಧ್ಯವಾಗಿಲ್ಲ. ವಿದ್ಯುತ್ ಬಳಕೆಯನ್ನು ಒಟ್ಟಾರೆಯಾಗಿ ತೆಗೆದುಕೊಂಡು ಅದಕ್ಕೆ ತಗಲುವ ವೆಚ್ಚವನ್ನು ತಲಾವಾರು ಹಂಚುವ ಪದ್ಧತಿ ಅನುಸರಿಸಲಾಗುತ್ತಿದೆ. ಇದು ವೈಜ್ಞಾನಿಕ ಕ್ರಮವಲ್ಲ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಂಘಟನೆಗಳು ವಾದಿಸುತ್ತ ಬಂದಿದೆ. ಕಡು ಬಡವರಿಗೆ ಭಾಗ್ಯಜ್ಯೋತಿ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಹಾಗೂ ಗೃಹ ಬಳಕೆದಾರರಿಗೆ ಪ್ರತಿ ತಿಂಗಳು ನೀಡುವ ೨೦೦ ಯೂನಿಟ್ ಉಚಿತ ವಿದ್ಯುತ್‌ಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಿದರೂ ಇತರ ವೆಚ್ಚಗಳನ್ನು ಕೈಗಾರಿಕೆಗಳು ಭರಿಸಲೇಬೇಕು. ವಿದ್ಯುತ್ ಬಳಕೆ ತೆರಿಗೆಯನ್ನು ಕಡಿಮೆ ಮಾಡಿದರೆ ಸ್ವಲ್ಪ ಮಟ್ಟಿಗೆ ಕೈಗಾರಿಕೆಗಳಿಗೆ ಹೊರೆ ಕಡಿಮೆಯಾಗಲಿದೆ. ಹಿಂದೆ ವಿದ್ಯುತ್ ಮೇಲಿನ ತೆರಿಗೆ ಶೇ.೬ ಇತ್ತು. ನಂತರದ ದಿನಗಳಲ್ಲಿ ಶೇ.೯ಕ್ಕೆ ಹೆಚ್ಚಿಸಲಾಯಿತು. ಆಗಲೂ ಕೈಗಾರಿಕೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈಗ ದುಬಾರಿ ವಿದ್ಯುತ್ ಬಿಲ್‌ನಿಂದ ತತ್ತರಿಸಿರುವ ಉದ್ಯಮಿಗಳು ವಿದ್ಯುತ್ ಬಳಕೆ ತೆರಿಗೆಯನ್ನಾದರೂ ಕಡಿಮೆ ಮಾಡುವುದು ಸೂಕ್ತ ಎಂದು ಒತ್ತಾಯಿಸಿವೆ. ಇದರ ಬಗ್ಗೆ ಸರ್ಕಾರ ಸಕಾರಾತ್ಮಕ ನಿಲುವು ತಳೆಯಬೇಕಾದ ಅನಿವಾರ್ಯತೆ ಮೂಡಿದೆ.