ಕೊನೆಗೂ ಕೂಡಿ ಬಂತು ಗೋಕಾಕದ ಗ್ರಾಮದೇವತೆ ಜಾತ್ರೆ

Advertisement

ಗೋಕಾಕ : ಗೋಕಾವಿ ನೆಲದ ಇತಿಹಾಸ ಪ್ರಸಿದ್ಧ ಉಭಯ ಮಹಾಲಕ್ಷ್ಮೀ ದೇವಸ್ಥಾನಗಳನ್ನು ನವೀಕೃತಗೊಳಿಸಿ 2025 ರಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಇಡೀ ಜಿಲ್ಲೆಯೇ ಕಣ್ತುಂಬಿ ನೋಡುವಂತಹ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಮಹಾಲಕ್ಷ್ಮೀ ದೇವಿ ಜಾತ್ರಾ ಕಮೀಟಿ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರ ಸಂಜೆ ಇಲ್ಲಿಯ ಮಹಾಲಕ್ಷ್ಮೀ ಸಭಾ ಭವನದಲ್ಲಿ ಆಯೋಜನೆಗೊಂಡಿದ್ದ ಮಹಾಲಕ್ಷ್ಮೀ ಉಭಯ ದೇವಸ್ಥಾನಗಳ ಜೀರ್ಣೋದ್ಧಾರ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಐತಿಹಾಸಿಕ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು ತನು, ಮನ, ಧನದಿಂದ ಸೇವೆ ಸಲ್ಲಿಸಿ ಮಹಾಲಕ್ಷ್ಮೀದೇವಿ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿಕೊಂಡರು.
2020 ರಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಗೋಕಾಕ ಗ್ರಾಮದೇವತೆ ಜಾತ್ರೆ ಕೋವಿಡ್ ಕಾರಣದಿಂದ ರದ್ದಾಗಿದ್ದು, ಸಕಲ ಭಕ್ತರ ಆಶಯದಂತೆ 2025 ರಲ್ಲಿ ನಡೆಸಲು ಉದ್ಧೇಶಿಸಲಾಗಿದೆ. ಜಾತ್ರೆಯನ್ನು ಅದ್ಧೂರಿಯಾಗಿ 5 ದಿನ ಆಚರಿಸಲು ಉಭಯ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಳ್ಳಬೇಕಿದೆ. ಇದಕ್ಕಾಗಿ ಗೋಕಾಕ ತಾಲೂಕಿನ ಎಲ್ಲ ಸಾರ್ವಜನಿಕರು, ವ್ಯಾಪಾರಸ್ಥರ ಸಹಕಾರ ಅಗತ್ಯವಾಗಿದೆ. ಈ ದಿಸೆಯಲ್ಲಿ ಯಾವುದೇ ಜಾತಿ, ಮತಗಳೆಂಬ ತಾರತಮ್ಯ ಮಾಡದೇ ಎಲ್ಲ ಜಾತಿಯ ಜನರು ಒಂದಾಗಿ ಈ ಜಾತ್ರೆಯನ್ನು ಯಶಸ್ವಿಗೊಳಿಸಬೇಕಿದೆ. ಸಕಲರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಿರುವ ಮಹಾಲಕ್ಷ್ಮೀದೇವಿ ಜಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ರಮೇಶ ಜಾರಕಿಹೊಳಿ ಹೇಳಿದರು.