ಕೊನೆಗೂ ಜಯ ಕಂಡ `ಸಾಕವ್ವ’

ಉಮಾಶ್ರೀ
Advertisement

ಬಾಗಲಕೋಟೆ: ಚಿತ್ರನಟಿ, ನೇಕಾರ ನಾಯಕಿಯೆಂದೇ ಗುರುತಿಸಿಕೊಂಡು ತೇರದಾಳ ವಿಧಾನಸಭೆಯಾದ ನಂತರ ಮೂರು ಬಾರಿ ಕಣಕ್ಕಿಳಿದು ಒಂದು ಬಾರಿ ಜಯಶಾಲಿಯಾಗಿ ಸಚಿವರಾಗಿ ಸೈ ಎನ್ನಿಸಿಕೊಂಡ ಉಮಾಶ್ರೀಗೆ ವಿಧಾನ ಪರಿಷತ್ ಸದಸ್ಯರಾಗುವ ಮೂಲಕ ಮತ್ತೊಮ್ಮೆ ತಮ್ಮ ಶಕ್ತಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
೨೦೦೮ ರಿಂದ ೨೦೧೮ರವರೆಗೆ ಸತತ ಮೂರು ಬಾರಿ ತೇರದಾಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಬಾರಿ ಹೊಸ ಮುಖ ಹೊತ್ತು ಸಿದ್ದು ಕೊಣ್ಣೂರರಿಗೆ ಟಿಕೆಟ್ ನೀಡಿದ ಕಾರಣ ತೇರದಾಳ ಕ್ಷೇತ್ರ `ಸಾಕವ್ವ’ಳನ್ನು ಸಾಕುವಲ್ಲಿ ವಿಫಲಗೊಂಡಿತ್ತು. ಇದರಿಂದ ಕೈ ಕಾರ್ಯಕರ್ತರಹಾಗು ಅಭಿಮಾನಿಗಳಲ್ಲಿ ತೀವ್ರ ನಿರಾಶೆಯೂ ಮೂಡಿತ್ತು.
೨೦೦೩ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯ ಅಖಾಡದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಉಮಾಶ್ರೀ ನಿರಂತರ ಹೈಕಮಾಂಡ್ ಹಾಗು ಬೇರು ಮಟ್ಟದ ಕಾರ್ಯಕರ್ತರ ಪಡೆಯೊಂದಿಗೆ ತನ್ನದೇಯಾದ ರಾಜಕೀಯ ರಂಗುಪಡೆಯುವಲ್ಲಿ ಯಶಸ್ವಿಯಾಗಿ ಇಂದು ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗುವ ಮಟ್ಟಿಗೆ ತಂದು ನಿಲ್ಲಿಸಿರುವದು ಅವಿಸ್ಮರಣೀಯ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ಪರಾಭವಗೊಂಡ ನಂತರ ಕಾರ್ಯಕರ್ತರಲ್ಲಿ ತೀವ್ರ ನಿರಾಸೆಯಾಗಿತ್ತು. ಮತ್ತೇ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡ ಉಮಾಶ್ರೀಯವರಿಂದ ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ.
ತೇರದಾಳ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ಬಿಜೆಪಿಯ ಸಿದ್ದು ಸವದಿಯವರೊಂದಿಗೆ ಆಡಳಿತ ಪಕ್ಷದಿಂದ ಉಮಾಶ್ರೀ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದು, ಕ್ಷೇತ್ರ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗುವಲ್ಲಿ ಕಾರಣವಾಗಿದೆ. ಒಟ್ಟಾರೆ ಅತ್ಯಂತ ಹಿಂದುಳಿದ ಕ್ಷೇತ್ರವಾಗಿರುವ ತೇರದಾಳವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಲ್ಲಿ ಸಕಾಲವಾಗಿದ್ದು, ಮುಂದಿನ ದಿನಗಳಲ್ಲಿ ಹಾಲಿ ಶಾಸಕದ್ವಯರ ಪಾತ್ರ ಹಿರಿದಾಗಿದೆ.