ಕೊರಳಿಗೆ ಕಪ್ಪುಪಟ್ಟಿ ಸುತ್ತಿಕೊಂಡು ಕಾವೇರಿ ಹೋರಾಟಗಾರರ ಧರಣಿ

Advertisement

ಮಂಡ್ಯ: ರೈತರ ಜೀವನಾಡಿ ಕೃಷ್ಣರಾಜಸಾಗರದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾವೇರಿ ಹೋರಾಟಗಾರರು ಕೊರಳಿಗೆ ಕಪ್ಪು ಪಟ್ಟಿ ಸುತ್ತಿಕೊಂಡು ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ರೈತರು,ಪ್ರಗತಿಪರ,ಕನ್ನಡ ಪರ ಸಂಘಟನೆ ಹೋರಾಟಗಾರರು ಜಾ.ದಳದ ಮಾಜಿ ಶಾಸಕರು, ವಿವಿಧ ಸಂಘಟನೆ ಕಾರ್ಯಕರ್ತರು ಕೊರಳಿಗೆ ಕಪ್ಪು ಪಟ್ಟಿ ಸುತ್ತಿಕೊಂಡು ಕಪ್ಪು ಬಾವುಟ ಪ್ರದರ್ಶಿಸುತ್ತಾ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಮಾತು ಕೊಟ್ಟಿದ್ದ ಸರ್ಕಾರ ಇದೀಗ ನೀರು ಬಿಟ್ಟಿದ್ದು, ರೈತರಿಗೆ ದ್ರೋಹ ಮಾಡಿದೆ, ಕಾವೇರಿ ಕೊಳ್ಳದ ಜಲಾಶಯಗಳ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಕುಡಿಯುವ ನೀರನ್ನು ಸಹ ಬರಿದು ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲು ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.
ಬೆಳೆದು ನಿಂತಿರುವ ಬೆಳೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ, ಹೊಸ ಬೆಳೆ ಹಾಕಲು ನೀರು ಕೊಡಲಿಲ್ಲ,ಇದೀಗ ಕುಡಿಯಲು ಸಹ ನೀರಿಲ್ಲದಂತೆ ಜಲಾಶಯದಿಂದ ನೀರು ಹರಿಸುತ್ತಿದೆ, ಜಿಲ್ಲೆಯ ಶಾಸಕರು, ಸಂಸದರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಹೇಳಿದರು.
ಕಾವೇರಿ ಕೊಳ್ಳದ ಜಲಾಶಯಗಳ ವಾಸ್ತವ ಪರಿಸ್ಥಿತಿ ಅವಲೋಕಿಸದೆ. ನೀರಿನ ಲಭ್ಯತೆ ಅರಿಯದೆ ಅವ್ಯೆಜ್ಞಾನಿಕವಾಗಿ ನೀರು ಬಿಡಲು ಆದೇಶ ಮಾಡಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ವನ್ನು ರದ್ದು ಮಾಡುವಂತೆ ಒತ್ತಾಯಿಸಿದರು.
ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು, ಕರ್ನಾಟಕದ ರೈತರ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ,ಎಂಎಸ್ ಆತ್ಮಾನಂದ, ಕೆ.ಬೋರಯ್ಯ ,ಮಾಜಿ ಶಾಸಕರಾದ ಸಿ ಎಸ್ ಪುಟ್ಟರಾಜು, ಡಾ. ಕೆ ಅನ್ನದಾನಿ, ಸುರೇಶ ಗೌಡ,ಕೆ ಟಿ ಶ್ರೀಕಂಠೇಗೌಡ,ಜಿ.ಬಿ ಶಿವಕುಮಾರ್,ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್, ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ದಸಂಸ ಮುಖಂಡ ವೆಂಕಟಗಿರಿಯಯ್ಯ, ರೈತ ಸಂಘದ ಇಂಡವಾಳು ಚಂದ್ರಶೇಖರ್. ಮುದ್ದೇಗೌಡ, ಅಂಬುಜಮ್ಮ ನೇತೃತ್ವ ವಹಿಸಿದ್ದರು.