ಕೊರೊನಾ ಕಾಲದ ಅಕ್ರಮ ಸ್ವತಂತ್ರ ತನಿಖೆ ಆಗಬೇಕು

ಸಂಪಾದಕೀಯ
Advertisement

ಕೊರೊನಾ ಕಾಲದ ದಿನಗಳು ಒಂದು ದುಃಸ್ವಪ್ನ. ಅಕ್ರಮಗಳ ಬಗ್ಗೆಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಹೇಳಿರುವಂತೆ ಸ್ವತಂತ್ರ ತನಿಖೆ ನಡೆಸುವುದು ಅಗತ್ಯ.

ಕೊರೊನಾ ಕಾಲದಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿತು. ಅಂದು ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿದ್ದರಿಂದ ಯಾರೂ ಆರೋಗ್ಯ ಇಲಾಖೆಯ ಖರ್ಚು ವೆಚ್ಚಗಳ ಬಗ್ಗೆ ಪ್ರಶ್ನಿಸಲು ಹೋಗಿರಲಿಲ್ಲ. ಆದರೆ ವಿಧಾನಸಭೆಯಿಂದ ರಚಿತವಾದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ವಿಶೇಷ ವರದಿಯೊಂದನ್ನು ವಿಧಾನಮಂಡಲದಲ್ಲಿ ಸಲ್ಲಿಸಿದ್ದು ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ವಿಚಾರಣೆ ನಡೆಸಬೇಕೆಂದು ತಿಳಿಸಿದೆ. ಇದರ ಬಗ್ಗೆ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಕೊರೊನಾ ಕಾಲದಲ್ಲಿ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಎಲ್ಲರೂ ಸರ್ಕಾರಿ ಆರೋಗ್ಯ ಇಲಾಖೆಯನ್ನು ನಂಬುವುದು ಅನಿವಾರ್ಯವಾಗಿತ್ತು. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳು ನೀಡುವ ಚಿಕಿತ್ಸೆಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು.. ಕೊರೊನಾ ಕಾಲದಲ್ಲಿ ನಡೆದ ಅಕ್ರಮಗಳ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಪಸ್ವರ ಎತ್ತಿದೆ. ಈ ಸಮಿತಿಗೆ ಎಚ್.ಕೆ. ಪಾಟೀಲ್ ಮತ್ತು ರಾಮಲಿಂಗಾರೆಡ್ಡಿ ಅಧ್ಯಕ್ಷರಾಗಿದ್ದರು. ಇಬ್ಬರ ನೇತೃತ್ವದ ಸಮಿತಿಗಳು ಒಂದೇ ಅಭಿಪ್ರಾಯ ನೀಡಿವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಒಟ್ಟು ೨೧ ಸದಸ್ಯರು ಈ ಸಮಿತಿಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಮೋದಿ ಕೇರ್ ನಿಧಿಯಿಂದಲೂ ಹಣ ಬಂದಿದೆ. ಸರ್ಕಾರದ ವೆಚ್ಚದೊಂದಿಗೆ ವಿಶೇಷ ನೆರವೂ ಬಂದಿದೆ. ಅಲ್ಲದೆ ಗುತ್ತಿಗೆ ಆಧಾರದ ಮೇಲೆ ಕೆಲವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಸರ್ಕಾರೇತರ ಸಂಸ್ಥೆ ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿಯಲ್ಲಿ ಕೊರೊನಾ ವೈರಸ್ ಸಂಬಂಧಿಸಿದ ಔಷಧ ಮತ್ತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಬೃಹತ್ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹೇಳಿದೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ. ಸಾಮಾನ್ಯವಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ಎಚ್.ಕೆ. ಪಾಟೀಲ್ ಮತ್ತು ರಾಮಲಿಂಗಾರೆಡ್ಡಿ ಅಧ್ಯಕ್ಷರಾಗಿದ್ದರು. ಈಗ ಅವರೇ ಇಂದಿನ ಸಂಪುಟದಲ್ಲಿ ಸಚಿವರಾಗಿರುವುದರಿಂದ ಸ್ವತಂತ್ರ ತನಿಖಾಸಂಸ್ಥೆಗೆ ಒಪ್ಪಿಸಿ ತಪ್ಪಿತಸ್ತರಿಗೆ ಶಿಕ್ಷೆ ವಿಧಿಸುವುದು ಅವರ ಕರ್ತವ್ಯವೂ ಹೌದು.
ಕೊರೊನಾ ಕಾಲದಲ್ಲಿ ಚಾಮರಜನಗರದಲ್ಲಿ ಅಮ್ಲಜನಕದ ಪೂರೈಕೆ ಇಲ್ಲದೆ ರೋಗಿಗಳು ಮೃತಪಟ್ಟಿದ್ದರು. ಅದರ ಬಗ್ಗೆ ಸರಿಯಾದ ತನಿಖೆ ನಡೆಯಲೇ ಇಲ್ಲ. ಈಗ ಇದರ ಬಗ್ಗೆ ಸ್ವತಂತ್ರ ತನಿಖೆ ನಡೆಸುವುದು ಅಗತ್ಯ. ಅಲ್ಲದೆ ಅ ಕಾಲದಲ್ಲಿ ವೆಂಟಿಲೇಟರ್, ಪಿಪಿಇ ಕಿಟ್, ಸ್ಯಾನಿಟೈಸರ್‌ಗಳನ್ನು ಖರೀದಿ ಮಾಡಿದ್ದು ಕಳಪೆ ಗುಣಮಟ್ಟದ್ದು ಎಂಬುದು ಆಗಲೇ ವರದಿಯಾಗಿತ್ತು.
ಆಗ ಯಾರೂ ಕ್ರಮ ಕೈಗೊಳ್ಳಲೇ ಇಲ್ಲ. ಈಗಲಾದರೂ ಇದರ ಬಗ್ಗೆ ಈಗಿನ ಸರ್ಕಾರ ನಿಷ್ಪ್ಟಕ್ಷಪಾತ ತನಿಖೆ ನಡೆಸುವುದು ಅಗತ್ಯ. ಕೊರೊನಾ ರೀತಿಯ ವೈರಸ್ ಮುಂದೆಯೂ ಬರಬಹುದು. ಅದನ್ನು ಎದುರಿಸಲು ಒಂದು ಕ್ರಿಯಾಯೋಜನೆ ರೂಪಿಸುವುದು. ಈಗ ಯಾವ ಯಾವ ಅಕ್ರಮಗಳು ನಡೆದಿವೆ ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಂಡಲ್ಲಿ ಮುಂದೆ ಬರಬಹುದಾದ ವೈರಸ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದಕ್ಕೆ ಸಹಕಾರಿಯಾಗಲಿದೆ. ಆಗಿನ ಕಾಲದಲ್ಲಿ ಕೊರೊನಾ ರೋಗಿಗಳನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಮತ್ತು ನರ್ಸ್ ಸಿಬ್ಬಂದಿಯ ಪರಿಸ್ಥಿತಿ ಕರುಣಾಜನಕವಾಗಿತ್ತು. ಅವರಿಗೆ ನೀಡಿದ ಪಿಪಿಇ ಕಿಟ್ ಎಷ್ಟು ಕಳಪೆಯಾಗಿದ್ದವು ಎಂದರೆ ಅದನ್ನು ಒದಗಿಸಿದ ಸಂಸ್ಥೆಯೇ ಬಳಸದಂತೆ ವೈದ್ಯಕೀಯ ಸಿಬ್ಬಂದಿಯನ್ನು ಎಚ್ಚಿರಿಸಿತು. ಅಲ್ಲದೆ ಉತ್ತಮ ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ೨ ಸಾವಿರ ರೂ.ಗಳಿಗೆ ವೈದ್ಯರು ಮತ್ತು ಇತರ ಸಿಬ್ಬಂದಿ ತಮ್ಮ ಹಣದಲ್ಲಿ ಖರೀದಿ ಮಾಡಿದ ಘಟನೆಗಳು ನಡೆದಿವೆ. ಇವುಗಳ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ. ಆಗಿನ ಕಾಲದಲ್ಲಿ ಖರೀದಿ ಮಾಡಿದ ವೆಂಟಿಲೇಟರ್‌ಗಳು ಗುಜರಿ ಸೇರಿವೆ.