ಕ್ಷಮೆ ಜಾಹೀರಾತಿನಷ್ಟೇ ದೊಡ್ಡದಾಗಿ ಇರಬೇಕು

Advertisement

ನವದೆಹಲಿ: ಪತಂಜಲಿ ಜಾಹೀರಾತು ಪ್ರಕರಣದಲ್ಲಿ ಕ್ಷಮೆಯಾಚನೆ ಕುರಿತು ಪತಂಜಲಿ ಆಯುರ್ವೇದ ಸಂಸ್ಥೆ ಸೋಮವಾರ ಸುದ್ದಿಪತ್ರಿಕೆಗಳಲ್ಲಿ ಪ್ರಕಟಿಸಿದ ಕ್ಷಮೆಯಾಚನೆ ಜಾಹೀರಾತು ಸರಿಯಾಗಿಲ್ಲ. ಮತ್ತೊಮ್ಮೆ ಭಾರಿ ದೊಡ್ಡದಾಗಿ ಕ್ಷಮೆಯಾಚನೆ ಜಾಹೀರಾತು ಪ್ರಕಟಿಸಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ಕಟ್ಟಪ್ಪಣೆ ಮಾಡಿದೆ.
ಏ. ೨೨ರಂದು ಪತಂಜಲಿ ಸಂಸ್ಥೆಯು ೬೭ ಸುದ್ದಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ ತಾನು ಸುಪ್ರೀಂಕೋಟ್ ಅನ್ನು ಸಂಪೂರ್ಣವಾಗಿ ಗೌರವಿಸುವುದೆಂದು ತಿಳಿಸಿರುವುದರಲ್ಲದೆ, ನ್ಯಾಯಾಲಯದ ಕ್ಷಮೆಯನ್ನೂ ಕೇಳಿತ್ತು. ಆದರೆ ಪತಂಜಲಿ ಹಿಂದೆ ಪ್ರಕಟಿಸಿದ ಜಾಹೀರಾತಿನ ಗಾತ್ರದಲ್ಲೇ ಈ ಕ್ಷಮೆಯಾಚನೆಯನ್ನೂ ಪ್ರಕಟಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಇದೇ ವೇಳೆ ಅಲೋಪತಿ ವೈದ್ಯರು ದುಬಾರಿ ಹಾಗೂ ಅನಗತ್ಯ ಔಷಧಗಳನ್ನು ರೋಗಿಗಳಿಗೆ ಸೂಚಿಸುತ್ತಾರೆ ಎಂದು ಅರ್ಜಿದಾರ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ)ಗೂ ನ್ಯಾಯಪೀಠ ಛೀಮಾರಿ ಹಾಕಿದೆ.
ಎಫ್‌ಎಂಸಿಜಿ ಕಂಪನಿಗಳು ಶಿಶುಗಳು, ಶಾಲಾ ಮಕ್ಕಳು ಹಾಗೂ ಹಿರಿಯ ನಾಗರಿಕರ ಆರೋಗ್ಯ ಮೇಲೆ ಪರಿಣಾಮ ಬೀರುವ ಉತ್ಪನ್ನಗಳ ಜಾಹೀರಾತು ಪ್ರಕಟಿಸುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿವೆ. ಈ ವಿಷಯವಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪರವಾನಗಿ ಅಧಿಕಾರಿಗಳನ್ನು ಕಕ್ಷಿದಾರನ್ನಾಗಿ ಮಾಡುವಂತೆಯೂ ನ್ಯಾಯಪೀಠವು ಸೂಚಿಸಿದೆ. ಇದಲ್ಲದೆ, ಕಳೆದ ೩ ವರ್ಷಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೂ ತಾಕೀತು ಮಾಡಿದೆ.
ಇದುವರೆಗೆ ೩ ಬಾರಿ ಕ್ಷಮೆಯಾಚನೆ: ಪತಂಜಲಿ ಆಯುರ್ವೇದ ಸಂಸ್ಥೆ ಕ್ಷಮೆಯಾಚಿಸಿರುವುದು ಇದು ಮೂರನೇ ಬಾರಿ. ಏ. ೨ರಂದು ಪತಂಜಲಿಗೆ ಛೀಮಾರಿ ಹಾಕಿದಾಗ ಬಾಬಾ ರಾಮ್‌ದೇವ್ ಪರವಾಗಿ ನ್ಯಾಯಾಲಯದಲ್ಲಿ ಕ್ಷಮೆಯಾಚಿಸಲಾಗಿತ್ತು. ಆದರೆ ಬಾಬಾ ರಾಮ್‌ದೇವ್ ಮನ:ಪೂರ್ವಕವಾಗಿ ಕ್ಷಮೆಯಾಚಿಸಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ. ಏಪ್ರಿಲ್ ೧೦ಕ್ಕೆ ವಿಚಾರಣೆ ಮುಂದೂಡಿತ್ತು. ಆದರೆ ಆ ವಿಚಾರಣೆಗೆ ಒಂದು ದಿನದ ಮೊದಲೇ ಬಾಬಾ ರಾಮ್‌ದೇವ್ ಹಾಗೂ ಪತಂಜಲಿ ಆಯುರ್ವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೊಸ ಅಫಿಡವಿಟ್ ಸಲ್ಲಿಸಿ ಪತಂಜಲಿ ಬೇಷರತ್ ಕ್ಷಮೆಯಾಚಿಸಿದ್ದು ತನ್ನ ತಪ್ಪಿಗೆ ಪಶ್ಚಾತಾಪಪಡುತ್ತಿದ್ದು ಮುಂದೆ ಹೀಗಾಗುವುದಿಲ್ಲ ಎಂದು ತಿಳಿಸಿದ್ದರು.