ಖಣಗಳನ್ನು ವೀಕ್ಷಿಸಿದ ಮೈಸೂರು ರಾಜರ ಮೊಮ್ಮಗ

Advertisement

ಗುಳೇದಗುಡ್ಡ(ಬಾಗಲಕೋಟೆ): ಮೈಸೂರು ಜಯ ಚಾಮರಾಜೇಂದ್ರ ಅವರ ಮೊಮ್ಮಗ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇಅರಸ್ ಅವರು ಪಟ್ಟಣಕ್ಕೆ ಭೇಟಿ ನೀಡಿ ಇಲ್ಲಿನ ಕರಕುಶಲ ಕೈಮಗ್ಗ ನೇಕಾರಿಕೆಯಿಂದ ಸಿದ್ಧಗೊಂಡ ಖಣಗಳನ್ನು ನೋಡಿ ಸಂಭ್ರಮಿಸಿದರು.
ಪಟ್ಟಣ ಕೈಮಗ್ಗ ರೇಷ್ಮೆ ಖಣಗಳಿಗೆ ಹೆಸರಾದ ರಾಠಿ ಕಾವಡೆ ಖಣ ಮರ್ಚಂಟ್ಸ್‌ಗೆ ಭೇಟಿ ನೀಡಿ ರೇಷ್ಮೆಯ ಕೈಮಗ್ಗದ ಖಣಗಳ ತಯಾರಿಕೆ, ಅವುಗಳ ಮಾರಾಟ ಮತ್ತು ಬೇಡಿಕೆ ಕುರಿತು ಮಾಲೀಕರೊಂದಿಗೆ ಚರ್ಚಿಸಿದರು.
ಮೈಸೂರು ಜಯಚಾಮರಾಜೇಂದ್ರ ಅವರ ದ್ವಿತೀಯ ಪುತ್ರಿ ಮಹಾರಾಜಕುಮಾರಿ ಮೀನಾಕ್ಷಿದೇವಿ ಅವರ ಪುತ್ರ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇಅರಸ್ ಹಾಗೂ ಪತ್ನಿ ಸುಷ್ಮಾಜೀವಾಣಿ ಅವರು ಇಲ್ಲಿನ ನುಣುಪಾದ ಹಾಗೂ ಚಂದದ ಚಿತ್ತಾರದ ಕೈಮಗ್ಗ ಖಣಗಳನ್ನು ನೋಡಿ ಖುಷಿ ವ್ಯಕ್ತಪಡಿಸಿದರು ಮತ್ತು ತಮಗೆ ಇಷ್ಟವಾದ ಕೈಮಗ್ಗ ಖಣಗಳನ್ನು ಖರೀದಿಸಿದರು.
ಮುಖಂಡರು ಹಾಗೂ ನೇಕಾರ ಮಾಲೀಕರಾದ ಅಮಾತೆಪ್ಪ ಕೊಪ್ಪಳ ಅವರು ಮೈಸೂರು ಮಹಾರಾಜರ ಮೊಮ್ಮಗ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇಅರಸ್ ಅವರಿಗೆ ಕೈಮಗ್ಗ ಖಣ ಉತ್ಪಾದನೆ, ಮಾರಾಟ, ಬೇಡಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು. ಒಂದು ಕಾಲದಲ್ಲಿ ದೇಶ ವಿದೇಶದಲ್ಲಿ ಖ್ಯಾತಿ ಗಳಿಸಿದ್ದ ಗುಳೇದಗುಡ್ಡ ಕೈಮಗ್ಗ ರೇಷ್ಮೆ ಖಣಗಳು ಈಗ ತನ್ನ ಬೇಡಿಕೆ ಕಳೆದುಕೊಂಡಿದೆ ಎಂದು ಅವರಿಗೆ ನೇಕಾರಿಕೆ ಉದ್ಯಮದ ಮಾಹಿತಿ ವಿವರಿಸಿದರು.
ಮೈಸೂರು ಜಯಚಾಮರಾಜೇಂದ್ರ ಅವರ ಮೊಮ್ಮಗ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇಅರಸ್ ಕರಕುಶಲ ವಸ್ತುಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರು ವಸ್ತ್ರದ ಪಾಲಿಟೆಕ್ನಿಕ್, ಸೂಳಿಭಾವಿ, ಕಮತಗಿ, ಅಮೀನಗಡಕ್ಕೆ ಹೋಗಿ ಅಲ್ಲಿನ ಕರಕುಶಲ ಸೀರೆಗಳ ಮಾಹಿತಿ ಕಲೆ ಹಾಕುತ್ತಿದ್ದು, ಈಗ ಗುಳೇದಗುಡ್ಡಕ್ಕೆ ಆಗಮಿಸಿದ್ದು ಇಲ್ಲಿನ ರೇಷ್ಮೆ ಕೈಮಗ್ಗ ಖಣಗಳನ್ನು ವೀಕ್ಷಣೆ ಮಾಡಿದ್ದು ನಮಗೂ ಕೂಡಾ ಖುಷಿ ತರಿಸಿತು ಎಂದು ರಾಮೇಶ್ವರ ರಾಠಿ, ಅಮಾತೆಪ್ಪ ಕೊಪ್ಪಳ ಅವರು ಸಂಭ್ರಮ ವ್ಯಕ್ತಪಡಿಸಿದರು.