ಖಾಲಿಸ್ತಾನಕ್ಕೆ ವಿದಾಯ ಸಿಖ್ ಸಮುದಾಯದ ಕರ್ತವ್ಯ

ಸಂಪಾದಕೀಯ
Advertisement

ಸಿಖ್ಖ್ ಸಮುದಾಯಕ್ಕೆ ಪ್ರತ್ಯೇಕ ದೇಶ ಕಟ್ಟಬೇಕು ಎಂಬ ಉದ್ದೇಶದಿಂದ ಹಿಂಸಾತ್ಮಕ ಹೋರಾಟ ಕೈಗೊಂಡಿರುವ ಖಾಲಿಸ್ತಾನಿಗಳಿಗೆ ಯಾರ ಬೆಂಬಲವೂ ಸಿಗಬಾರದು ಎಂದರೆ ಮೊದಲು ಭಾರತದಲ್ಲಿರುವ ಎಲ್ಲ ಸಿಖ್ ಸಮುದಾಯದವರು ಪ್ರತ್ಯೇಕತಾವಾದದಿಂದ ದೂರ ಇದ್ದೇವೆ ಎಂದು ಘೋಷಿಸಬೇಕು. ಇವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೂರ್ಣ ಬೆಂಬಲ ನೀಡಬೇಕು. ಅವರನ್ನು ಉಗ್ರವಾದಿಗಳಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ರಕ್ಷಣೆ ನೀಡುವುದು ಬಹಳ ಮುಖ್ಯ.
ಖಾಲಿಸ್ತಾನಕ್ಕೆ ದೊಡ್ಡ ಇತಿಹಾಸವೇ ಇದೆ. ಸಿಖ್ ಸಮುದಾಯದವರು ಮಹಾನ್ ದೇಶಾಭಿಮಾನಿಗಳು. ಗಡಿಯಲ್ಲಿ ಅವರ ಹೋರಾಟದಿಂದಲೇ ನಮ್ಮ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಇಂಥ ಸಮುದಾಯವನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಬ್ರಿಟಿಷರು ೧೮೦೦ ರಲ್ಲೇ ಕೈಗೊಂಡಿದ್ದರು. ೧೯೭೮ ರಲ್ಲಿ ಖಾಲಿಸ್ತಾನ್ ಚಳವಳಿ ಅಧಿಕಗೊಳ್ಳಲು ಬಿಂದ್ರನ್‌ವಾಲೆ ಕಾರಣರಾದರು. ೧೯೮೫ ರಲ್ಲಿ ಟೊರಾಂಟೋದಿಂದ ಹೊರಟಿದ ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸಿ ೩೨೯ ಜನರಿಗೆ ಸಾವಿಗೆ ಕಾರಣವಾಗಿದ್ದು ಇದೇ ಗುಂಪು ಎನ್ನುವುದನ್ನು ಮರೆಯುವಂತಿಲ್ಲ. ಇಂದಿರಾಗಾಂಧಿ ಕಾಲದಲ್ಲಿ ನಡೆದ ಆಪರೇಷನ್ ಬ್ಲೂಸ್ಟಾರ್ , ಇಂದಿರಾ ಹತ್ಯೆ ನಂತರ ದೆಹಲಿಯಲ್ಲಿ ನಡೆದ ಸಿಖ್ಖರ ನರಮೇಧ ಇಂದಿಗೂ ನೆನಪಿನಲ್ಲಿ ಹಾಗೆ ಉಳಿದುಬಿಟ್ಟಿದೆ. ಇದನ್ನು ಮರೆಯುವುದು ಕಷ್ಟ. ಆದರೆ ಹಿಂಸಾಕೃತ್ಯದಿಂದ ಒಂದು ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಅದರಲ್ಲೂ ಪ್ರಜಾಪ್ರಭುತ್ವ ನಂಬಿರುವ ದೇಶದಲ್ಲಿ ಹಿಂಸಾಕೃತ್ಯಕ್ಕೆ ಅವಕಾಶವಿಲ್ಲ. ಹಿಂದೆ ನಕ್ಸಲ್‌ವಾದ ನಂಬಿದವರೂ ಇದೇ ರೀತಿ ಹಿಂಸಾಕೃತ್ಯದಲ್ಲಿ ತೊಡಗಿದ್ದರು. ಕಾಲಕ್ರಮೇಣ ಇಳಿಮುಖಗೊಂಡಿತು. ಅಸಮಾನತೆಯ ವಿರುದ್ಧ ಹೋರಾಟ ಎಂದರೆ ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಕ್ರಮಕೈಗೊಳ್ಳಬೇಕು. ಯಾವುದೇ ಸಂಘಟನೆಯಾಗಲಿ ಚುನಾವಣೆ ಮೂಲಕವೇ ಅಧಿಕಾರ ಪಡೆಯಬೇಕು. ನಮ್ಮದೇಶದಲ್ಲಿ ಯಾವುದೇ ಭಾಗದಿಂದ ಬೇಕಾದರೂ ಚುನಾವಣೆ ಕಣಕ್ಕೆ ಇಳಿಯಬಹುದು. ಅಲ್ಲದೆ ಯಾವುದೇ ರಾಜಕೀಯ ಸಿದ್ಧಾಂತವನ್ನು ಬೇಕಾದರೂ ಅನುಸರಿಸಬಹುದು. ಜನಾದೇಶದ ಮೂಲಕವೇ ಸಾಮಾಜಿಕ ಬದಲಾವಣೆ ತರಬೇಕು. ಶಸ್ತçಗಳ ಮೂಲಕ ಬದಲಾವಣೆ ತರಲು ನಮ್ಮಲ್ಲಿ ಅವಕಾಶವಿಲ್ಲ. ಈಗ ಖಾಲಿಸ್ತಾನ ಉಗ್ರಸಂಘಟನೆ ಅಮೆರಿಕ, ಕೆನಡ ಮತ್ತು ಯುಕೆಗಳಲ್ಲಿ ಆಶ್ರಯ ಪಡೆದು ಅಲ್ಲಿಂದ ಭಾರತಕ್ಕೆ ಬೆದರಿಕೆ ಒಡ್ಡಲು ಪ್ರಯತ್ನಿಸುತ್ತಿದೆ. ಕೆನಡದಲ್ಲಿ ಈ ಸಂಘಟನೆ ಆಡಳಿತದ ಮೇಲೆ ಪ್ರಭಾವ ಬೀರುವಷ್ಟು ಪ್ರಭಾವ ಪಡೆದಿದೆ. ವಿದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಉದಾರ ನಿಲುವು ತಳೆಯುವುದನ್ನು ಉಗ್ರ ಸಂಘಟನೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಂದುಗೂಡಬೇಕು. ಪಾಕ್ ಗುಪ್ತಚರ ಸಂಸ್ಥೆ ಈ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಅನುಮಾನ ಇದೆ. ಇದರೊಂದಿಗೆ ನಮ್ಮ ದೇಶದಲ್ಲೇ ಇರುವ ಕೆಲ ಶಕ್ತಿಗಳು ಆರ್ಥಿಕ ನೆರವು ನೀಡುತ್ತಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ದೇಶ ವಿರೋಧಿ ಸಂಘಟನೆಗಳಿಗೆ ನೆರವು ಹೋಗಬಾರದರು. ದೇಶದ ಹಿತ ಬಯಸುವವರು ಯಾರೂ ಇಂಥ ಸಂಘಟನೆಗೆ ನೆರವು ನೀಡುವುದಿಲ್ಲ. ಖಾಲಿಸ್ತಾನ ಖಾಲಿಯಾಗಬೇಕು. ಆ ಸಂಘಟನೆಯವರು ತಮ್ಮ ಹಾದಿಯನ್ನು ಬದಲಿಸಿ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು.