ಗಟ್ಟಿ ಧ್ವನಿ ಕಣ್ಮರೆಯಾಗಿ ಇಂದಿಗೆ ಒಂದು ವರ್ಷ

Advertisement

ವಿಲಾಸ ಜೋಶಿ
ಬೆಳಗಾವಿ: ಉತ್ತರ ಕರ್ನಾಟಕದ ನೇರ ನುಡಿಯ ಗಟ್ಟಿ ರಾಜಕಾರಣಿ ಎಂದರೆ ಥಟ್ಟನೆ ನೆನಪಿಗೆ ಬರುವ ಹೆಸರು ಉಮೇಶ ಕತ್ತಿ, ಅಂತಹ ರಾಜಕಾರಣಿ ಕಣ್ಮರೆಯಾಗಿ ಸೆ. ೬ರಂದು ಬರೊಬ್ಬರಿ ಒಂದು ವರ್ಷ.
ಈಗಲೂ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಉಮೇಶ್ ಕತ್ತಿ ಅವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ. ಪ್ರತ್ಯೇಕ ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಯಾವುದೇ ಸರ್ಕಾರವಿದ್ದರೂ ತಮ್ಮ ಕೂಗನ್ನು ಎಂದಿಗೂ ತಗ್ಗಿಸುವ ಕೆಲಸ ಮಾಡಲೇ ಇಲ್ಲ. ಕೆಲವರು ಪ್ರತ್ಯೇಕತೆಯ ಕೂಗಿನ ಬಗ್ಗೆ ಅಪಸ್ವರ ಎತ್ತಿದರೂ ಅದಕ್ಕೆ ಸಮರ್ಥವಾಗಿ ಉತ್ತರ ಕೊಡುವ ಧಾಡಸಿತನ ಅವರಲ್ಲಿತ್ತು.
ಆಗ ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯವಾದರೆ ನಾನೇ ಸಿಎಂ, ನನ್ನ ಮಗ ಹೋಮ್ ಮಿನಿಸ್ಟರ್ ಎನ್ನುತ್ತಿದ್ದರು. ಈಗ ಅವರ ನಿಧನದ ನಂತರ ಅವರ ಪುತ್ರ ನಿಖಿಲ್ ಕತ್ತಿ ಶಾಸಕರಾಗಿದ್ದಾರೆ.
ಹಾಗೆ ನೋಡಿದರೆ ಉಮೇಶ ಕತ್ತಿ ನೇರ ನುಡಿಗೆ ಹೆಸರಾದವರು. ಸಹಕಾರಿ ರಂಗದ ಜೊತೆಗೆ ರಾಜಕೀಯದಲ್ಲಿ ಹೆಸರು ಮಾಡಿದ ಅವರಿಗೆ ತಮ್ಮದೇ ಆದ ಆತ್ಮೀಯ ಬಳಗವಿತ್ತು,. ತಮ್ಮನ್ನು ನಂಬಿದವರನ್ನು ಎಂದಿಗೂ ಅರ್ಧದಾರಿಯಲ್ಲಿ ಕೈಬಿಡುತ್ತಿರಲಿಲ್ಲ. ರಾಜೇಂದ್ರ ದೇಸಾಯಿ ಸೇರಿದಂತೆ ಇನ್ನೂ ಹಲವು ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಅವರಿಗೆ ಉದ್ಯೋಗದಲ್ಲಿ ಯಾವ ರೀತಿ ಏಳಿಗೆ ಸಾಧಿಸಬೇಕು ಎನ್ನುವುದು ಸೇರಿದಂತೆ ಎಲ್ಲವನ್ನು ಕಲಿಸಿಕೊಟ್ಟು ಮುಂದಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ರಾಜಕಾರಣದ ಮನೆತನ
ಉಮೇಶ ಕತ್ತಿ ಅವರದ್ದು ರಾಜಕಾರಣದ ಮನೆತನ. ಮಾರ್ಚ್ ೧೪, ೧೯೬೧ ರಲ್ಲಿ ಹುಟ್ಟಿದ ಉಮೇಶ ಕತ್ತಿಯವರ ತಂದೆ ವಿಶ್ವನಾಥ ಕತ್ತಿ ಕೂಡ ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದರು. ಉಮೇಶ ಕತ್ತಿ ಅವರ ಸಹೋದರ ರಮೇಶ ಕತ್ತಿ ಸಹ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು, ಈಗ ಅವರ ಪುತ್ರ ನಿಖಿಲ್ ಕತ್ತಿ ಹುಕ್ಕೇರಿ ಕ್ಷೇತ್ರದ ಶಾಸಕರು, ಹಾಗೆ ನೋಡಿದರೆ ತಂದೆ ವಿಶ್ವನಾಥ ನಿಧನದ ಬಳಿಕ ಉಮೇಶ ಕತ್ತಿ ರಾಜಕೀಯ ಪ್ರವೇಶ ಮಾಡಿದರು.
ವಿಶ್ವನಾಥ ಕತ್ತಿ ಅಂದಿನ ರಾಜ್ಯ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದವರು. ದುರಾದೃಷ್ಟವಶಾತ್ ಅಂದು ವಿಧಾನಸಭೆಯಲ್ಲೇ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು. ವಿಪರ್ಯಾಸ ಅಂದರೆ ಉಮೇಶ ಕತ್ತಿ ಕೂಡ ಅಧಿಕಾರದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.
ಉಮೇಶ್ ಕತ್ತಿಯವರು ಮೊದಲ ಪ್ರಯತ್ನದಲ್ಲೇ ಗೆಲುವು ಕಂಡರು. ೧೯೮೯ರಲ್ಲಿ ಜನತಾದಳಕ್ಕೆ ಬಂದು ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದರು. ೧೯೯೪ ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಬಾರಿಸಿದರು. ೧೯೯೯ರಲ್ಲಿ ಸಂಯುಕ್ತ ಜನತಾದಳ (ಜೆಡಿಯು) ನಿಂದ ಸ್ಪರ್ಧಿಸಿ ೪ನೇ ಬಾರಿಯೂ ಗೆದ್ದರು.
೨೦೦೪ರಲ್ಲಿ ಕಾಂಗ್ರೆಸ್‌ಗೆ ಬಂದ ಉಮೇಶ್ ಕತ್ತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲು ಕಂಡರು. ರಾಜಕೀಯ ಜೀವನದಲ್ಲಿ ಇದೊಂದೇ ಚುನಾವಣೆಯಲ್ಲಿ ಉಮೇಶ್ ಕತ್ತಿ ಸೋಲು ಕಂಡಿರುವುದು. ೨೦೦೮ರಲ್ಲಿ ಜೆಡಿಎಸ್ ಸೇರಿದರು, ಬಳಿಕ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡರು.
ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ೬ನೇ ಗೆಲುವು ಸಾಧಿಸಿದರು. ೨೦೧೩ ಹಾಗೂ ೨೦೧೮ರ ಚುನಾವಣೆಯಲ್ಲಿಯೂ ಹುಕ್ಕೇರಿ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು.
೨೦೧೦ರಲ್ಲಿ ಕೃಷಿ ಸಚಿವರಾದ ಉಮೇಶ ಕತ್ತಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾದರು, ೨೦೧೯ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದರು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಿಕ್ಕಿತು.
ಈಗಲೂ ಉಮೇಶ ಕತ್ತಿ ಇದ್ದಿದ್ದರೆ ಬೆಳಗಾವಿ ಜಿಲ್ಲೆಯಿಂದ ಇನ್ನೂ ಹೆಚ್ಚಿಗೆ ವಿಧಾನಸಭೆ ಕ್ಷೇತ್ರಗಳು ಬಿಜೆಪಿಗೆ ಬರುತ್ತಿದ್ದವು ಎನ್ನುವ ಮಾತನ್ನು ಜಿಲ್ಲೆಯ ಜನ ಹೇಳುತ್ತಾರೆ. ಅದು ಅವರ ತಾಕತ್ತು ಎನ್ನಬಹುದು.