ಗಡಿನಾಡ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

Advertisement

ಬೆಳಗಾವಿ: ಗಡಿನಾಡ ಅಭಿವೃದ್ಧಿ ಹಾಗೂ ಕನ್ನಡ ಶಾಲೆಗಳಿಗೆ ಅಗತ್ಯ ಸೌಲಭ್ಯ, ಹೊಸದಾಗಿ ಶಾಲೆ ಪ್ರಾರಂಭ ಸೇರಿದಂತೆ ಗಡಿನಾಡವನ್ನು ಸಮಗ್ರ ಅಭಿವೃದ್ಧಿ ಪಡಿಸಲು ರೂಪುರೇಷೆ ಸಿದ್ದ ಪಡಿಸಲಾಗಿದ್ದು, ಅದಕ್ಕೆ ಬಜೆಟನಲ್ಲಿ ಸುಮಾರು ೧೦೦ ಕೋ.ರೂ.ಗಳ ಅನುದಾನ‌ ಕಲ್ಪಿಸಲಾಗುವದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿದಿಂದಿಲ್ಲಿ ಹೇಳಿದರು.
ಬೆಳಗಾವಿ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಕನ್ನಡ ಭವನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಂಕುಚಿತ ಮನೋಭಾವದಿಂದ ಹೊರಬಂದು ವಿಶಾಲ ದೃಷ್ಟಿಯಿಂದ ನೋಡಬೇಕಾಗಿದೆ. ಆದರೆ ಗಡಿ ವಿಷಯವನ್ನು ಭಾವನಾತ್ಮಕವಾಗಿ ಉಪಯೋಗಿಸಿಕೊಂಡು ಗದ್ದಲವನ್ನುಂಟು ಮಾಡಲಾಗುತ್ತಿದೆ. ಇಲ್ಲದ ಸಮಸ್ಯೆಯನ್ನು ಹುಟ್ಟುಹಾಕಿ ಇನ್ನೊಬ್ಬರಿಗೆ ಕಿರಿಕಿರಿಯನ್ನು ಮಾಡಲಾಗುತ್ತಿದೆ. ಆದ್ದರಿಂದ ಅವುಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ಗಡಿನಾಡಿನ ಸಮಗ್ರ ಅಭಿವೃದ್ದಿ ಮಾಡಲಾಗುತ್ತದೆ. ಶಾಲೆಗಳಿಗೆ ವಿಶೇಷ ಕಾಳಜಿ ವಹಿಸಿ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಸತ್ಯ ಎಲ್ಲಕ್ಕಿಂತಲೂ ಎತ್ತರದಲ್ಲಿರುತ್ತದೆ.ಕನ್ನಡಕ್ಕೆ ಸದಾ ರಕ್ಷಣೆ ನೀಡಲಾಗುತ್ತದೆ. ವಿಶ್ವ ಕನ್ನಡ ಸಮ್ಮೇಳನವನ್ನು ರಾಜ್ಯದಲ್ಲಿ ಆಯೋಜಿಸಲಾಗುತ್ತದೆ. ಸತ್ಯ ಮಾರ್ಗದಲ್ಲಿ ನಡೆದರೆ ಸ್ವರ್ಗ ದರ್ಶನ ವಾಗುತ್ತದೆ.ಆದ್ದರಿಂದ ನಾವು ಎಲ್ಲಿಯೇ ಕಲಿತರೂ ನಮ್ಮ ಅಸ್ತಿತ್ವವನ್ನು ಬಿಟ್ಟುಕೊಡಬಾರದು. ಕನ್ನಡಕ್ಕೆ ಉತ್ತಮ ಭವಿಷ್ಯವಿದೆ. ಭಾಷೆ ಮತ್ತು ಸಂಸ್ಕೃತಿ ರಹಿತ ಸಮಾಜ ಮನುಷ್ಯರಿಲ್ಲದ್ದು. ಪ್ರಾಣಿಗಳಿಗೂ ಬುದ್ದಿಶಕ್ತಿ ಇದೆ ಆದರೆ ಅವು ಅಭಿವ್ಯಕ್ತಪಡಿಸಲಾರವು. ಆದ್ದರಿಂದ ಭಾಷೆ ಇಡೀ ಮನುಕುಲದ ಅಭಿವೃದ್ಧಿ ಯಲ್ಲಿ ಪ್ರಮುಖ ಪಾತ್ರವಹಿಸುತ್ರದೆ. ತತ್ವಾದರ್ಶ, ದೇಶಭಕ್ತಿ, ಆಧ್ಯಾತ್ಮ, ಸಂತೋಷಭಾವ ಬರುತ್ತದೆ ಎಂದರು.
ನಾಗರೀಕತೆ ಮತ್ತು ಸಂಸ್ಕೃತಿ ಬೇರೆಬೇರೆ. ನಾಗರೀಕತೆ ಅಭಿವೃದ್ಧಿ ಹೊಂದಿದರೆ ನಮ್ಮ ಸಂಸ್ಕೃತಿಯು ನಮ್ಮನ್ನು ಬಿಂಬಿಸುತ್ತದೆ. ಕನ್ನಡದ ಸಾಕ್ಷಿಪ್ರಜ್ಞೆಯಾಗಿ ಅಲ್ಲಮಪ್ರಭು, ಬಸವಣ್ಣ, ವಚನ ಹಾಗೂ ದಾಸ ಸಾಹಿತ್ಯಗಳು ನಿಂತಿವೆ. ಪಂಪ, ರನ್ನ, ಜನ್ನ, ರಾಘವಾಂಕ ಅವರ ಕನ್ನಡ ಎತ್ತಿ ಹಿಡಿದಿದ್ದು, ನಮ್ಮದು ಅತ್ಯಂತ ಹಳೆಯ ಭಾಷೆ ಎಂದ ಅವರು, ನಮ್ಮ ಭಾಷೆ ಮತ್ತು ಸಂಸ್ಕೃತಿಯ ನ್ನು ಉತ್ಕ್ರಷ್ಠಗೊಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ನಮ್ಮ ಅಸ್ತಿತ್ವಕವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡದೇ ಸ್ವಾಭಿಮಾನಿಯಾಗಿರಬೇಕು. ಕನ್ನಡ ಅಂತರಂಗದ ಶಕ್ತಿಯಾಗಿದ್ದು, ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕನ್ನಡಕ್ಕೆ ಯಾವುದೇ ಆತಂಕವಿಲ್ಲ. ಅದರ ಬಳಕೆ ಹೆಚ್ಚೆಚ್ಚು ಆಗಬೇಕು. ತಂತ್ರಜ್ಞಾನದಲ್ಲಿಯೂ ಕನ್ನಡ ಬಳಕೆ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ಭವನದ ಅಧ್ಯಕ್ಷರು ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಪಾರಿಜಾತದಂತಹ ನಶಿಸಿ ಹೋಗುತ್ತಿರುವ ಕಲೆಗಳನ್ನು ಉಳಿಸಲು ನಿರಂತರವಾಗಿ ಕಾರ್ಯ. ಕನಡದ ಜೊತೆಗೂ ನಮ್ಮ ಸಂಸ್ಕೃತಿಯನ್ನು ಉಳಿಸಲು ಕ್ರಮ ಕೈಕೊಳ್ಳಲಾಗಿದೆ. ಗಡಿನಾಡಲ್ಲಿ ಹೆಚ್ಚೆಚ್ಚು ಕನ್ನಡ ಶಾಲೆಗಳನ್ಬು ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಅವರು, ಚಿಕ್ಕೋಡಿಯಲ್ಲಿ ಸುಮಾರು 16 ಗುಂಟೆ ಜಾಗೆಯಲ್ಲಿ ಕನ್ನಡ ಭವನ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಜಗದ್ಗುರು ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಜಿ ಆಶಿರ್ವಚನ‌ ನೀಡಿದರು. ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಮಾಹಾಸ್ವಾಮಿಜಿ, ನಾಗನೂರು ರುದ್ರಾಕ್ಷಿ‌ಮಠದ ಡಾ. ಅಲ್ಲಮಪ್ರಭು ಸ್ವಾಮಿಜಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಅವರು‌ ಮಾತನಾಡಿ, ಬೆಳಗಾವಿಯಲ್ಲಿ ಅಖಿಲ ಭಾರತ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು. ಚಿತ್ರನಟಿ ಗಿರಿಜಾ ಲೋಕೇಶ್ ಮಾತನಾಡಿದರು.
ವೇದಿಕೆಯ ಮೇಲೆ ಸಚಿವರಾದ ಗೋವಿಂದ ಕಾರಜೋಳ, ಸಂಸದರಾದ ಮಂಗಲಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ‌ಬೆನಕೆ, ಮಹಾಂತೇಶ ಕವಟಗಿಮಠ, ಮಂಗಲಾ ಮೆಟಗುಡ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.