ಗಣೇಶೋತ್ಸವ ಲಕ್ಕಿಡಿಪ್: ವಿಸ್ಕಿ ಬಹುಮಾನ

Advertisement

ಸುಳ್ಯ: ಕೋಟ್ಯಂತರ ಹಿಂದೂಗಳ ಪವಿತ್ರ ಹಬ್ಬ ಗಣೇಶೋತ್ಸವದ ಲಕ್ಕಿಡಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರೆಲ್ ಆಗಿ ಸಾರ್ವಜನಿಕರ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸುಳ್ಯದ ಜಯನಗರದಲ್ಲಿ ನಡೆಯುವ ಗಣೇಶ ಹಬ್ಬದ ಪ್ರಯುಕ್ತ ಎಂಬ ಬರಹದಡಿಯ ಲಕ್ಕಿ ಡಿಪ್‌ನಲ್ಲಿ ಪ್ರಥಮ ಬಹುಮಾನ ಬ್ಲಾಕ್ ಅಂಡ್ ವೈಟ್ ಬ್ಲೆಂಡೆಡ್ ಸ್ಕಾಚ್ ವಿಸ್ಕಿ ಹಾಗೂ ದ್ವಿತೀಯ ಬಹುಮಾನ ಒಂದು ಕೇಸ್ ಯು ಬಿ ಬಿಯರ್ ಎಂದು ನಮೂದಿಸಲಾಗಿದೆ. ಟಿಕೆಟ್ ದರ ರೂ.೧೦೦. ಈ ಲಕ್ಕಿಡಿಪ್‌ನ ಫೋಟೋ ಎಲ್ಲ ಕಡೆ ವೈರಲ್ ಆಗಿದೆ.
ಗಣೇಶೋತ್ಸವ ಹೆಸರಿನಲ್ಲಿ ಈ ರೀತಿ ಲಕ್ಕಿಡಿಪ್ ಮಾಡಿ ಹಿಂದು ಧರ್ಮದ ಅವಹೇಳನ ಮಾಡುವವರ ವಿರುದ್ಧ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ತಾಲೂಕು ತೀವ್ರ ಖಂಡನೆ ವ್ಯಕ್ತಪಡಿಸಿದೆ.
‘ಈ ರೀತಿ ಹಿಂದೂ ಧರ್ಮದ ಹಬ್ಬಗಳ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಪೋಲಿಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂತಹ ಕೀಳು ಮಟ್ಟದ ಮನಸ್ಥಿತಿಯ ವ್ಯಕ್ತಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುವ ಜನರನ್ನು ಮಟ್ಟ ಹಾಕುವ ಕೆಲಸ ಆಗಬೇಕಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಸುಳ್ಯ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ ಹೇಳಿದ್ದಾರೆ.