ಗಾಂಧಿ ಮಹಾತ್ಮ ಆಗಿದ್ದು ನೈತಿಕತೆಯಿಂದ

Advertisement

ಲೋಕ ಶಿಕ್ಷಣ ಮತ್ತು ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಹಾರನಹಳ್ಳಿ ರಾಮಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ವರ್ತಮಾನದಲ್ಲಿ ಮಹಾತ್ಮಗಾಂಧಿ ಜೀವನ ಮತ್ತು ವೈಚಾರಿಕತೆಯ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ನೀಡಿದ ಉಪನ್ಯಾಸದ ಪೂರ್ಣಪಾಠ ಇಲ್ಲಿದೆ.

ಇವತ್ತು ನಾನು ಬೆಳಗ್ಗೆ ೯.೩೦ಕ್ಕೆ ಟಿವಿಯಲ್ಲಿ ಒಂದು ಕಾರ್ಯಕ್ರಮ ನೋಡಿ ಬಂದೆ. ಅದು ಅದ್ಭುತ ಅನಿಸಿತು. ೭೫ ವರ್ಷಗಳ ಹಿಂದೆ ತನ್ನ ದೇಹತ್ಯಾಗ ಮಾಡಿದ ವ್ಯಕ್ತಿಗೆ ವಿಶ್ವದ ೨೦ ರಾಷ್ಟ್ರಗಳ ರಾಷ್ಟ್ರಪತಿಗಳು ತಲೆಬಗ್ಗಿಸಿ ನಿಂತಿದ್ದರು. ಅವರು ಯಾವುದೇ ಅಧಿಕಾರ ವಹಿಸಿಕೊಳ್ಳದ ವ್ಯಕ್ತಿ ಮುಂದೆ ತಲೆಬಾಗಿದ್ದರು. ೨೦ ರಾಷ್ಟ್ರಗಳ ನಾಯಕರು ತಲೆಬಗ್ಗಿಸಿ ಆ ನಾಯಕನಿಗೆ ನಮಸ್ಮರಿಸಿದರು. ಇದು ಮಹಾತ್ಮ ಗಾಂಧಿಗೆ ಸಂದ ಗೌರವ. ಆ ಸಂತನಿಗೆ ನಮಸ್ಕಾರ ಮಾಡಿದರು. ಇದು ಪ್ರಶಸ್ತುತೆ ಅಲ್ಲವಾ? ೭೫ ವರ್ಷದ ಹಿಂದೆ ದೇಹಬಿಟ್ಟ ಮನುಷ್ಯ, ಒಂದು ಪೈಸೆ ತೆಗೆದುಕೊಳ್ಳದ ಮನುಷ್ಯ, ಯಾವುದೇ ಪಂಚಾಯಿತಿ ಸದಸ್ಯ ಆಗಿರದ ಮನುಷ್ಯ ಆ ಮನುಷ್ಯನಿಗೆ ತಲೆಬಾಗಲು ೨೦ ರಾಷ್ಟ್ರಗಳ ರಾಷ್ಟ್ರಪತಿಗಳು ನಿಂತಿದ್ದರು ಅಂದರೆ ನಮ್ಮ ದೇಶಕ್ಕೆ ದೊರೆತ ದೊಡ್ಡ ಗೌರವ ರಾಷ್ಟ್ರಪಿತನಿಗೆ ಸಿಕ್ಕ ಗೌರವ.
ಗಾಂಧಿಯನ್ನು ಮಹಾತ್ಮನನ್ನಾಗಿ ಮಾಡಿದ್ದು ನೈತಿಕತೆ. ನೈತಿಕ ಶಕ್ತಿ ಇದ್ದರೇ ಎಂಥಾ ಶಕ್ತಿಯನ್ನೂ ಎದುರಿಸಬಹುದು ಎಂಬುದು ತೋರಿಸಿದ್ದು ಗಾಂಧಿ. ಒಂದು ಚಿಂತನೆ, ಒಂದು ಗ್ರಂಥ ಆಗಬಹುದು. ೨೦ ವರ್ಷ ಆದರೆ ಅದರ ಪ್ರಭಾವ ಕಡಿಮೆಯಾಗುತ್ತದೆ. ಮನೆಯಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಬದುಕು ಹೇಗೆ ಎನ್ನಿಸುತ್ತದೆ. ಕ್ರಮೇಣ ದುಃಖ ಕಡಿಮೆಯಾಗುತ್ತದೆ. ಸಂತೋಷ ಕೂಡ ಹಾಗೆ. ಇಂದು ಇದ್ದ ಸಂತೋಷ ೨೦ ವರ್ಷಗಳ ನಂತರ ಇರುವುದಿಲ್ಲ. ವ್ಯಕ್ತಿಯ ಚಿತ್ರ ಕೂಡ ಅದೇ ರೀತಿ ಆಗುತ್ತದೆ. ಆದರೆ ಗಾಂಧೀಜಿ ಅವರ ಹೆಸರಲ್ಲಿ ಇದು ಮಾತ್ರ ವಿರುದ್ಧ. ಇದಕ್ಕೆ ನಾನು ರಿವರ್ಸ್ ಇಂಜಿನಿಯರಿಂಗ್ ಅನ್ನುತ್ತೇನೆ. ಜುಲೈ ೪ ೧೯೦೨ನೇ ಇಸವಿಯಂದು ಜೀವ ಬಿಟ್ಟ ವ್ಯಕ್ತಿ ವಿವೇಕಾನಂದರಿಗೆ ಇಂದು ಲಕ್ಷಾಂತರ ಮಂದಿ ಶಿಷ್ಯರು ಹಾಗೂ ಅವರನ್ನು ಅನುಸರಿಸುವವರು ಇದ್ದಾರೆ. ತರುಣರು, ತರುಣಿಯರು ಬದುಕು ಎನ್ನುವ ಬಾಳೆ ಎಲೆಯನ್ನು ಬಿಸಾಕಿ ವಿವೇಕಾನಂದರನ್ನು ಹಿಂಬಾಲಿಸಿ ಸನ್ಯಾಸಗಿಯಾಗಿದ್ದಾರೆ. ಭಗವದ್ಗೀತೆಯನ್ನು ಸುಡುತ್ತೇವೆ ಎಂದರು. ಆದರೂ ಪ್ರಭಾವ ಕಡಿಮೆಯಾಗಿಲ್ಲ. ಭಗವದ್ಗೀತೆಯನ್ನು ನೂರು ವರ್ಷದ ಹಿಂದೆ ಎಷ್ಟು ಮಂದಿ ಓದುತ್ತಿದ್ದರೋ ಅದರ ೧೦ ಪಟ್ಟು ಮಂದಿ ಈಗಲೂ ಓದುತ್ತಿದ್ದಾರೆ. ಇದು ಅದ್ಭುತ ಅನಿಸುತ್ತದೆ. ಇವರನ್ನು ಅನುಸರಿಸುವವರು ಇವತ್ತು ಕೂಡ ಇದ್ದಾರೆ. ನಾಳೆ ಕೂಡ ಇರುತ್ತಾರೆ. ಗಾಂಧಿ, ವಿವೇಕಾನಂದ ಚಿಂತನೆಗಳು ಅವತ್ತು ಎಷ್ಟು ಪ್ರಸ್ತುತವಾಗಿದ್ದವೋ ಇವತ್ತು ಪ್ರಸ್ತುತವಾಗಿರುತ್ತವೆ. ಅವರ ಮಾಡಿದ ಕಾರ್ಯ ಸರ್ವಕಾಲಕ್ಕೂ ಸಲ್ಲುವಂತಾಗಿತ್ತು.
ನಾನು ಪ್ರತಿ ವರ್ಷ ಪಾಠ ಮಾಡಲು ವಿಶ್ವದ ಬೇರೆ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜಿಗೆ ಹೋಗುತ್ತೇನೆ. ಹಾರ್ವರ್ಡ್ ವಿವಿಯಲ್ಲಿ ವಿರಾಮವಾಗಿದ್ದ ವೇಳೆ ಒಂದು ಚರ್ಚೆ ಆರಂಭವಾಯಿತು. ವಿಶ್ವದಲ್ಲಿ ಯಾವ ಗುಣಗಳಿಂದ ದೊಡ್ಡ ನಾಯಕರಾಗುತ್ತಾರೆ. ವಿಶ್ವದಲ್ಲಿ ದೊಡ್ಡ ನಾಯಕರು ಯಾರು ಎಂದು ಚರ್ಚೆ ಆರಂಭವಾಯಿತು. ಬೇರೆ ಬೇರೆ ದೇಶದ ನಾಯಕರು ಈ ಕುರಿತು ತಾಳೆಹಾಕಿ ಹುಡುಕಾಟ ಆರಂಭಿಸಿದರು. ಇದರಲ್ಲಿ ಮಹಾತ್ಮಗಾಂಧಿ ಮೊದಲಿಗರಾಗಿ ಹೊರಹೊಮ್ಮಿದರು. ಉಳಿದವರು ಮಹಾತ್ಮಗಾಂಧಿ ಹತ್ತಿರಕ್ಕೂ ಬರಲಾಗಲಿಲ್ಲ. ಹೇಳಿದಂತೆ ಬದುಕಿದವರು ಮಹಾತ್ಮ ಗಾಂಧಿ. ಇವರಂತೆ ವಿಶ್ವದಲ್ಲಿ ಬೇರೆ ಯಾವ ನಾಯಕರೂ ಇಲ್ಲ.
ಗಾಂಧಿ ವಿರೋಧಿ ಪ್ರಬಂಧ ಬರೆದಿದ್ದೆ
ಗಾಂಧಿಯನ್ನು ೯ನೇ ತರಗತಿಯಲ್ಲಿ ನಾನು ವಿರೋಧಿಸಿ ಪ್ರಬಂಧ ಬರೆದಿದ್ದೆ. ಮೇಷ್ಟ್ರು ಅದನ್ನು ಓದಿ ನನ್ನನ್ನು ಕರೆದು ಸಂತೋಷದಿಂದ ಗಾಂಧಿಯನ್ನು ಓದಿಕೊಂಡು ಬರೆಯಬೇಕು ಎಂದಿದ್ದರು. ಅದಕ್ಕೆ ನಾನು ಏನನ್ನು ಓದಬೇಕು ಎಂದಿದ್ದೆ. ಆಗ ಅವರು ನನಗೆ ಗೊರೂರು ರಾಮಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ ಗಾಂಧಿ ಜೀವನ ಚರಿತ್ರೆ ಕೃತಿ ನೀಡಿದ್ದರು. ನಮಗೆ ಗೊತ್ತಿರುವ ಹಾಗೆ ಅತ್ಯಂತ ಪ್ರಮಾಣಿಕವಾದ ಜೀವನ ಚರಿತ್ರೆ ಅಂದರೆ ಅದು ಗಾಂಧಿ ಜೀವನ. ಉಳಿದವುಗಳು ಕೇವಲ ಫಿಕ್ಷನ್ ಅಷ್ಟೇ. ತೆಂಡೂಲ್ಕರ್ ಜೀವನ ಚರಿತ್ರೆ ಓದಿದಾಗ ಹುಚ್ಚು ಹಿಡಿದಂತಾಗಿತ್ತು. ಗಾಂಧಿಯನ್ನು ಓದಿದ ನಂತರ ಅವರ ಪ್ರಭಾವ ಅಧಿಕವಾಗಿ ಗಾಂಧಿ ಎಲ್ಲಿದ್ದರೋ ಅಲ್ಲಿಗೆ ಹೋಗಿ ನೋಡಿಕೊಂಡು ಬರಬೇಕು ಅನಿಸಿತು. ಗಾಂಧಿಯನ್ನು ರೈಲ್ವೇ ಬೋಗಿಯಿಂದ ಹೊರಗೆ ಒಗೆದ ಮೆರಿಟ್ಸ್ಬರ್ಗ್ಗೆ ಆ ಘಟನೆ ನಡೆದ ವೇಳೆಯಲ್ಲಿ ತೆರಳಿ ಅಲ್ಲಿ ನಿಂತಿದ್ದೆ. ಗಾಂಧಿಗೆ ಆ ಸಮಯದಲ್ಲಿ ಯಾವ ರೀತಿಯ ಮನಸ್ಥಿತಿ ಇತ್ತು ಎನ್ನುವುದು ಅರ್ಥವಾಯಿತು. ಗಾಂಧಿ ಅವರನ್ನು ಕುರಿತು ಅಡಿಗರು ಹೀಗೆ ಬರೆಯುತ್ತಾರೆ. ಯಾವ ರಸವು ಸೋಕಿತವನ. ಯಾವ ಶಿಲೆ ತಾಗಿತವನ. ಸಾಗುವಾಗ ಗಟ್ಟಿ ಚಿನ್ನವಾಗಿ ಸಾಗಿದ. ನಾನೋ ಲೋಹ ಕರಿ ಕಬ್ಬಿಣ. ಅನಿಸುತ್ತದೆ. ಗಾಂಧಿ ಭಕ್ತರಾಗುವುದು ಸುಲಭ. ಗಾಂಧಿ ಜತೆ ಬದುಕುವುದು ಕಷ್ಟ. ಇದನ್ನು ಅವರ ಪತ್ನಿ ಕಸ್ತೂರಿಬಾ ಅವರಿಂದ ಕೇಳಬೇಕು.
ನಾನು ಕಾಲೇಜಲ್ಲಿ ಪ್ರಿನ್ಸಿಪಾಲ್ ಆಗಿದ್ದ ವೇಳೆ ಸ್ವೀಡನ್ ವಿದ್ಯಾರ್ಥಿಗಳು ನನ್ನ ಭೇಟಿ ಯಾಗಿದ್ದರು. ಕೆಲವು ನನ್ನ ಸ್ನೇಹಿತರು ಗಾಂಧಿಯನ್ನು ಹಚ್ಚಿಕೊಂಡ ಹುಚ್ಚನಿದ್ದಾನೆ ಎಂದು ನನ್ನ ಬಳಿ ಕಳುಹಿಸಿದ್ದರು. ನಾನು ಸ್ವೀಡನ್ ವಿದ್ಯಾರ್ಥಿಗಳನ್ನು ಉದ್ದೇಶಿ ಏಕೆ ಅವರನ್ನು ಗಾಂಧಿ ಓದುತ್ತೀರಿ. ನಿಮಗೆ ಪಠ್ಯ ಇಲ್ಲ ಎಂದಾಗ ಒಂದು ಹುಡುಗಿ ೩ ಕಾರಣಕ್ಕೆ ನಾನು ಗಾಂಧಿಯನ್ನು ಓದುತ್ತೇನೆ ಎಂದಳು
ಮೊದಲನೆಯದ ಪ್ರಪಂಚದ ಯಾವುದೇ ದೇಶದ ಇತಿಹಾಸ ತೆಗೆದುಕೊಂಡಾಗ ಪೂರ್ಣವಾಗಿ ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದ ರಾಷ್ಟ್ರ ಮತ್ತೊಂದಿಲ್ಲ.
ಎರಡನೇಯದರು ಗೆಳೆಯರು ಜಗಳ ಆಡಿದರೆ ಕೋಪ ಮಾಡಿಕೊಂಡು ಮುನಿಸಿಕೊಳ್ಳುತ್ತೇವೆ. ಆದರೆ ಬ್ರಿಟಿಷರ ಜೊತೆ ೨೦೦ ವರ್ಷ ಹೋರಾಡಿ ಸ್ನೇಹಿತರಂತೆ ಬೇರ್ಪಟಿದ್ದರು. ಇದು ಪವಾಡ ಅನಿಸಿತು.
ಮೂರನೆಯದು ಗಾಂಧಿ ಹತ್ಯೆಯ ಸುದ್ದಿ ರಾಷ್ಟ್ರ ಹಾಗೂ ವಿಶ್ವಕ್ಕೆ ಮಿಂಚಿನಂತೆ ಹರಡಿತು. ಅಮೆರಿಕಾದ ನ್ಯೂಯಾರ್ಕ್ನ ವಿಶ್ವಸಂಸ್ಥೆ ಮೇಲೆ ಹಾರುತ್ತಿದ್ದ ಎಲ್ಲ ರಾಷ್ಟ್ರಗಳ ಬಾವುಟವನ್ನು ಅರ್ಧಮಟ್ಟಕ್ಕೆ ಇಳಿಸಬೇಕು ಎಂದು ವಿಶ್ವಸಂಸ್ಥೆಯ ಜನರಲ್ ಸೆಕ್ರೆಟರಿ ಲೀ ಆದೇಶಿಸಿದ್ದ. ಕೂಡಲೇ ಭಾರತದ ಧ್ವಜ ಸೇರಿ ಎಲ್ಲ ರಾಷ್ಟ್ರಗಳ ಬಾವುಟವನ್ನು ಅರ್ಧಮಟ್ಟಕ್ಕೆ ಇಳಿಸಲಾಯಿತು. ಈ ರೀತಿ ವಿಶ್ವಸಂಸ್ಥೆಯಲ್ಲಿ ಎಲ್ಲ ರಾಷ್ಟ್ರಗಳ ಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಿದ್ದು ಮೊದಲು ಹಾಗೂ ಕೊನೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿದ್ದ ಅಧಿಕಾರಿಗಳು ಭಾರತದ ಧ್ವಜವನ್ನು ಮಾತ್ರ ಅರ್ಧಮಟ್ಟಕ್ಕೆ ಇಳಿಸಬೇಕಾಗಿತ್ತು. ಎಲ್ಲ ರಾಷ್ಟ್ರದ ಧ್ವಜವನ್ನು ಏಕೆ ಇಳಿಸಲಾಯಿತು ಎಂದು ಪ್ರಶ್ನಿಸಿದರು. ಮನುಷ್ಯತ್ವ ಸತ್ತು ಹೋಯಿತು ಅಂತ ದುಃಖವಾಗಿ ಧ್ವಜವನ್ನು ಇಳಿಸಲಾಯಿತು. ವಿಶ್ವದ ಮನುಷ್ಯತ್ವನ್ನು ಕೊಲೆ ಮಾಡಲಾಯಿತು ಎಂದು ಲೀ ದುಃಖಪಟ್ಟಿದ್ದರು. ಗಾಂಧಿಜಿಯವರ ಬೆಲೆ ನಮಗೆ ಅರ್ಥವಾಗಬೇಕು.
ಗಾಂಧಿಗೆ ರಾಮ ಆದರ್ಶ ಪುರುಷ
ಗಾಂಧಿಗೆ ಆದರ್ಶ ಪುರುಷ ರಾಮ. ಸತ್ಯ ಮತ್ತು ಅಹಿಂಸೆ ನಂಬಿಕೊಂಡವರು ಗಾಂಧಿ, ಸತ್ಯ ಮತ್ತು ಋತ. ಋತ ಅಂದರೂ ಸತ್ಯ. ಋತ ಮತ್ತು ಸತ್ಯ ಎರಡು ಒಂದೇ. ನಾನು ಗುಂಡಪ್ಪ ಅವರನ್ನು ಕೇಳಿದೆ ಋತ ಹಾಗೂ ಸತ್ಯ ಬೇರೆಯೇ ಎಂದು. ಅವರು ಹೌದು ಎಂದರು. ಋತ ಎಂದರೆ ಯಾವುದು ಸತ್ಯ ಎಂದು ಬುದ್ದಿಗೆ ಗೋಚರವಾಗಿದೆಯೋ ಅದು ಋತ. ಬಾಯಿಬಿಟ್ಟು ಹೇಳಿದಾಗ ಅದು ಸತ್ಯ ವಾಗುತ್ತದೆ. ಕೋರ್ಟ್ ಒಪ್ಪುವುದು ಸತ್ಯವನ್ನು ಋತವನ್ನಲ್ಲ. ಅಂದುಕೊಂಡಂತೆ ಮಾತನಾಡುತ್ತೆವೆಯೋ ಅದು ಸತ್ಯ. ಗಾಂಧಿ ಅಪೇಕ್ಷೆ ಇರುವುದು ಋತ ಹಾಗೂ ಸತ್ಯ ಎರಡು ಒಂದೇ ಆಗಿರಬೇಕು. ಅಂದುಕೊಂಡಿದ್ದು ಬೇರೆ ಹಾಗೂ ಹೇಳಿದ್ದೂ ಬೇರೆಯಾಗಬಾರದು.
ಅಹಿಂಸೆ ಹೇಡಿತನ ಅಲ್ಲ
ಅಹಿಂಸೆಯನ್ನ ಕೆಲವು ಹುಡುಗರು ಟೀಕೆ ಮಾಡುತ್ತಾರೆ. ಅಹಿಂಸೆ ಹೇಡಿತನ ಅನ್ನುತ್ತಾರೆ. ಹೇಡಿತನ ಅಹಿಂಸೆ ಅಲ್ಲ. ಧೈರ್ಯವಂತ ಮಾತ್ರ ಅಹಿಂಸೆ ಪಾಲಿಸಬಲ್ಲ. ಹೇಡಿಗಳು ಮಾತ್ರ ಅಸ್ತ್ರ ಬಳಸುತ್ತಾರೆ ಎಂದು ಗಾಂಧಿ ಹೇಳುತ್ತಾರೆ.
ನೆಪೋಲಿಯನ್, ಹಿಟ್ಲರ್ ಅವರು ಹೇಡಿಗಳು ಹೀಗಾಗಿ ಅಸ್ತ್ರ ಬಳಸಿದರು. ಹಿಟ್ಲರ್ ತನಗೆ ತಾನು ಗುಂಡು ಹಾಕಿಕೊಳ್ಳಲು ಸಾಧ್ಯವಾಗದೆ ಬೇರೆಯವರು ಗುಂಡಿಕ್ಕಿದರು. ಗೌತಮ ಬುದ್ಧ ಕೂಡ ಅಹಿಂಸಾ ಮಾರ್ಗ ಅನುಸರಿಸಿದ್ದ. ಹೇಡಿತನ ಮತ್ತು ಹಿಂಸೆಯನ್ನು ಆರಿಸಿಕೊಳ್ಳುವುದಿದ್ದರೆ ನಾವು ಹೇಡಿತನವನ್ನು ಆರಿಸಿಕೊಳ್ಳುವುದಿಲ್ಲ. ಹಿಂಸೆ ಆರಿಸಿಕೊಳ್ಳುತ್ತೇನೆ ಎಂದು ಗಾಂಧಿ ಹೇಳಿದ್ದರು. ಖಡ್ಗ ಹಿಡಿದು ಕೊಂಡು ಬಂದ ಅಂಗುಲಿಮಾಲನನ್ನು ಬುದ್ಧ ತನ್ನ ಕಣ್ಣಿನಿಂದ ಸೋಲಿಸಿದ.
. ನಾವು ತಪ್ಪು ಮಾಡದೆ ಇದ್ದಾಗ ಅವರನ್ನು ಎದುರಿಸುವುದು ಹಿಂಸೆ ಆಗುವುದಿಲ್ಲ.
ಆಂಗ್‌ಸಾನ್ ಸೂಕಿ ಗಾಂಧಿ ಪ್ರಭಾವಕ್ಕೆ ಒಳಗಾದವರು. ಅವರು ಹೇಳುತ್ತಾರೆ ನನ್ನ ಮೇಲೆ ಅತ್ಯಂತ ಕ್ರೂರವಾಗಿ ನಾಯಕರು ದಬ್ಬಾಳಿಕೆ ಮಾಡಿದಾಗ ಅದನ್ನು ನಾನು ತಡೆದುಕೊಳ್ಳಲು ಸಾಧ್ಯವಾಗಿದ್ದು ಗಾಂಧಿ ನೀತಿಗಳಿಂದ. ಅಮೆರಿಕಾದಲ್ಲಿ ಲೇಸೀಹಾಲ್ ಎಂಬ ದೊಡ್ಡ ಮನಶಾಸ್ತ್ರಜ್ಞ ಇದ್ದಾನೆ. ೧೨ ಸಾವಿರ ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ಡೈರಿ ನೀಡಿ ಅದರಲ್ಲಿ ಗೆರೆ ಎಳೆದು ನಿತ್ಯ ನಿಮ್ಮ ಮನಸ್ಸಿಗೆ ಬಂದ ಧನಾತ್ಮಕ ಮತ್ತೊಂದು ಕಡೆ ಋಣಾತ್ಮಕ ಭಾವನೆಗಳನ್ನು ದಾಖಲಿಸಿ ಎಂದಿದ್ದ. ಅದರಂತೆ ಕೊನೆಯಲ್ಲಿ ನೋಡಿದಾಗ ಶೇ. ೯೧ ಋಣಾತ್ಮಕ ಚಿಂತನೆ ಬರೆದಿದ್ದರು. ಕೇವಲ ಶೇ.೯ರಷ್ಟು ಮಂದಿ ಮಾತ್ರ ಧನಾತ್ಮಕ ಚಿಂತನೆ ದಾಖಲಿಸಿದ್ದರು. ಶೇ. ೯೧ನ್ನು ನೋಡಿಕೊಂಡು ಕುಳಿತವರು ಕೊಚ್ಚಿಕೊಂಡು ಹೋದರು. ೯ ಶೇ. ಕಡೆ ಇದ್ದವರು ಸಾಧನೆ ಮಾಡಿದರು ಎಂದರು.
ಗಾಂಧಿಯನ್ನು ಹೊರಕ್ಕೆ ಹಾಕಿಸಿದ್ದ ಬ್ರಿಟಿಷ್ ರೆಸಿಡೆನ್ಸಿ
ಗಾಂಧೀಜಿ ಶಿಕ್ಷಣ ಮುಗಿಸಿ ಇಂಗ್ಲೆಂಡ್‌ನಿಂದ ಪೋರಬಂದರ್‌ಗೆ ಬಂದರು. ಆಗ ಅವರ ಸಹೋದರನಿಗೆ ಪೋರ್‌ಬಂದರ್‌ನ ದಿವಾನರಾಗುವ ಅವಕಾಶ ಇತ್ತು. ಈ ಬಗ್ಗೆ ಸಹೋದರ ಗಾಂಧಿ ಜತೆ ಮಾತನಾಡಿ ಬ್ರಿಟಿಷ್ ರೆಸೆಡೆನ್ಸಿ ಬಳಿ ಹೋಗಿ ಚರ್ಚಿಸು ಎಂದಾಗ ಗಾಂಧೀಜಿ ಅವರನ್ನು ನಾನು ಇಂಗ್ಲೆಂಡ್ ಕ್ಲಬ್‌ನಲ್ಲಿ ಭೇಟಿಯಾಗಿದ್ದೆ ಪ್ರಯತ್ನಿಸುತ್ತೇನೆ ಎಂದರು. ನನ್ನ ಅಣ್ಣ ದಿವಾನನಾಗುವ ಅವಕಾಶ ಇದೆ ಸಹಾಯ ಮಾಡಿ. ಲಂಡನ್ ಕ್ಲಬ್‌ನಲ್ಲಿ ನಾವು ಭೇಟಿಯಾಗಿದ್ದವಲ್ಲ ಎಂದರು. ಆಗ ಅವರು ಭೇಟಿಯಾಗಿದ್ದು ನಿಜ ಆದರೆ ಶಿಫಾರಸ್ಸು ಮಾಡಲು ಸಾಧ್ಯವಿಲ್ಲ ಎಂದು ಗಾಂಧಿಯನ್ನು ಮನೆಯಿಂದ ಹೊರಹಾಕಿಸುತ್ತಾನೆ. ಮೂರು ದಿನಗಳ ನಂತರ ಗಾಂಧಿಗೆ ತಪ್ಪಿನ ಅರಿವಾಗಿ ಅವರ ಮನೆಗೆ ಹೋಗಿ ಕ್ಷಮೆ ಕೇಳುತ್ತಾರೆ. ಸ್ನೇಹವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ಕ್ಷಮೆ ಕೋರುತ್ತಾರೆ.
ಮೆರಿಟ್‌ಬರ್ಗ್ ರೈಲು ನಿಲ್ದಾಣದಲ್ಲಿ ಮೊದಲ ದರ್ಜೆ ಟಿಕೆಟ್ ಇದ್ದರೂ ಬೋಗಿಯಿಂದ ಹೊರಹಾಕಿದ್ದಾಗ ಗಾಂಧೀಜಿ ಎಲ್ಲಿಯೂ ಹೋಗದೇ ಅಲ್ಲೇ ಕುಳಿತು ಚಳವಳಿ ಆರಂಭಿಸಿದರು. ಬಿಳಿಯರು ಮಾತ್ರ ಜನರಲ್ ಬೋಗಿಯಲ್ಲಿ ಪ್ರಯಾಣಿಸಬೇಕಿತ್ತು. ಕರಿಯರು ಕೆಳದರ್ಜೆಯ ಬೋಗಿಯಲ್ಲಿ ಪ್ರಯಾಣಿಸಬೇಕಿತ್ತು. ಇದನ್ನು ಅವರು ಪ್ರತಿಭಟಿಸಲು ಮುಂದಾದರು. ದರ್ಬಾನ್‌ನಲ್ಲಿ ಇದ್ದ ಅಧಿಕಾರಿ ಗಾಂಧಿಯನ್ನು ಮೆರವಣಿಗೆ ಹೋಗಬೇಡ ಎಂದಿದ್ದ. ಮರುದಿನ ಮೆರವಣಿಗೆ ಆರಂಭವಾಯಿತು. ಕುದುರೆ ಮೇಲೆ ಬಂದ ಆ ಅಧಿಕಾರಿ ಗಾಂಧಿ ಎದೆಗೆ ಕಾಲಿನಿಂದ ಒದ್ದ. ಇದರಿಂದ ಗಾಂಧೀಜಿಯವರಿಗೆ ಹಲ್ಲು ಮುರಿಯಿತು. ಚಿಕಿತ್ಸೆ ನೀಡಿ ಜೈಲಿನಲ್ಲಿ ಇಟ್ಟರು. ೩ ತಿಂಗಳು ಶಿಕ್ಷೆ ಮುಗಿಸಿ ಹೊರ ಬಂದ ಗಾಂಧೀಜಿ ನೇರವಾಗಿ ಕಾಲಿನಿಂದ ಒದ್ದ ಅಧಿಕಾರಿ ಮನೆಗೆ ಹೋದರು. ಅಲ್ಲಿ ಅವರು ನಾನು ಜೈಲಿನಲ್ಲಿ ೩ ತಿಂಗಳು ಇದ್ದಾಗ ಚಪ್ಪಲಿ ಹೊಲಿಯುವವನು ಜತೆಯಲ್ಲಿ ಇದ್ದೆ ಅವನಿಂದ ಕಲಿತು ೨ ಜೊತೆ ಚಪ್ಪಲಿ ತಯಾರಿಸಿದ್ದೇನೆ. ೨ ಜೊತೆ ನನಗೆ ಅವಶ್ಯಕತೆ ಇಲ್ಲ. ನಿಮಗೆ ಒಂದು ಜೊತೆ ಕೊಡುತ್ತೇನೆ ತೆಗೆದುಕೊಳ್ಳಿ ಎಂದರು. ಎಡಗೆನ್ನೆಗೆ ಹೊಡೆದರೆ ಬಲಗೆನ್ನೆ ತೋರಿಸಿ ಎಂದು ಯೇಸು ಕ್ರಿಸ್ತ ಹೇಳಿದ್ದಾನೆ. ಎದೆಗೆ ಒದ್ದವನಿಗೆ ಚಪ್ಪಲಿ ಹೊಲೆದುಕೊಟ್ಟಿದ್ದಾನೆ ಎಂದು ಆ ಅಧಿಕಾರಿ ಅಂದುಕೊಂಡರು. ಈಗಲೂ ಈ ಚಪ್ಪಲಿ ಬಿರ್ಲಾಭವನದಲ್ಲಿ ಇವೆ.
ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಗಾಂಧಿ ಎಲ್ಲಿದ್ದರು? ಇಡೀ ರಾಷ್ಟ್ರವೇ ಸಂಭ್ರಮವನ್ನು ಆಚರಿಸುತ್ತಿರುತ್ತದೆ. ಇನ್ನೂರು ವರ್ಷದ ಕನಸೂ ನನಸಾಗಿರುತ್ತದೆ. ನೆಹರು ಗಾಂಧಿಗೆ ಕರೆ ಮಾಡುತ್ತಾರೆ. ಬನ್ನಿ ಸಂಭ್ರಮಿಸೋಣ ಎಂದು. ಕೊಲ್ಕತ್ತಾದಲ್ಲಿ ಹಿಂದು ಮುಸ್ಲಿಂ ಗಲೆಭೆಯ ಸ್ಥಳದಲ್ಲಿ ಇದ್ದು ಉಪವಾಸ ಮಾಡುತ್ತಿದ್ದಾರೆ. ಸಂಭ್ರಮಕ್ಕೆ ಬೆನ್ನು ಮಾಡಿ ಉಪವಾಸ ಕೂತಿರುತ್ತಾರೆ.
ಸ್ವಾತಂತ್ರ್ಯ ಪಡೆಯಲು ಗುರಿಯಷ್ಟೇ ವಿಧಾನ ಕೂಡ ಮುಖ್ಯ. ಸ್ವಾತಂತ್ರ್ಯ ಚಳವಳಿಯನ್ನು ಗಾಂಧಿ ದೊಡ್ಡದು ಮಾಡಿದ್ದರು. ಜನರ ಧ್ವನಿಯಾಗಬೇಕು. ಚೌರಿಚೌರಾ ಚಳವಳಿಯಲ್ಲಿ ಹಿಂಸೆ ಸಂಭವಿಸಿತು. ಗಾಂಧೀಜಿ ತಕ್ಷಣ ಚಳವಳಿ ನಿಲ್ಲಿಸಬಾರದು ಎಂದು ನೆಹರು ಸೇರಿದಂತೆ ಹಲವು ನಾಯಕರು ಕೋರಿದರು. ಈ ಚಳವಳಿ ಇನ್ನು ಅಹಿಂಸಾತ್ಮಕ ರೂಪುರೇಷೆಯಂತೆ ಆಗಿಲ್ಲ. ಹೀಗಾಗಿ ನಿಲ್ಲಿಸುತ್ತೇನೆ ಎಂಬ ನಿರ್ಧಾರಕ್ಕೆ ಬಂದರು.
ಗಾಂಧಿ ಹೋರಾಟ
ಜೀವನ ನಡೆಯಲು ವರ್ಣಗಳು ಬೇಕು. ಶೂದ್ರತ್ವ ಕೆಟ್ಟದಲ್ಲ. ಅದನ್ನು ಅರ್ಥ ಮಾಡಿಕೊಂಡಿರುವುದು ಕೆಟ್ಟದಾಗಿದೆ. ಗಾಂಧೀಜಿ ಹೇಳುತ್ತಾರೆ. ಹುಟ್ಟಿನಿಂದ ಜಾತಿ ಇರುವುದಿಲ್ಲ. ವರ್ಣ ಬರುತ್ತದೆ. ಗಾಂಧಿ ಹೋರಾಟ ಬಂಡವಾಳಶಾಹಿಗಳ ವಿರುದ್ಧ ಅಲ್ಲ. ಬಂಡವಾಳಶಾಹಿತ್ವದ ವಿರುದ್ಧ ಹೋರಾಡುತ್ತಾರೆ. ಬಂಡವಾಳಶಾಹಿ ಬಾಲಬಿಚ್ಚಿದರೆ ಸರ್ಕಾರ ಅದನ್ನು ನಿಗ್ರಹಿಸಬೇಕು ಎನ್ನುತ್ತಾರೆ.
ತತ್ವರಹಿತ ರಾಜಕೀಯ ಪಾತಕವಾಗುತ್ತದೆ. ದುಡಿಮೆ ಇಲ್ಲದ ಸಂಪತ್ತು ಬಹುದೊಡ್ಡ ಪಾತಕ. ನೀತಿ ಇಲ್ಲದ ವಾಣಿಜ್ಯ ದೊಡ್ಡ ಪಾತಕ. ಶೀಲವಿಲ್ಲದ ಶಿಕ್ಷಣ ಕೂಡ ಪಾತಕ. ಇದು ದೊಡ್ಡ ಅಪಾಯಕಾರಿ. ಆತ್ಮಸಾಕ್ಷಿ ಇಲ್ಲದ ಭೋಗ ಮಾನತ್ವ ಇಲ್ಲದ ವಿಜ್ಞಾನ ಪ್ರಯೋಜನವಿಲ್ಲ. ಹಾಗೆಯೇ ತ್ಯಾಗವಿಲ್ಲದ ಪೂಜೆ. ಯಾವ ಪೂಜೆ ತ್ಯಾಗ ಇಲ್ಲದೆ ನಡೆದರೆ ಅದು ಫಲಿಸುವುದಿಲ್ಲ. ಚಾರ್ಲಿಚಾಪ್ಲಿನ್ ಎಲ್ಲರನ್ನೂ ಮುಲಾಜಿಲ್ಲದೆ ಟೀಕೆ ಮಾಡುತ್ತಿದ್ದ. ಆತ ಗಾಂಧಿಯವರನ್ನು ನೋಡಲು ಬಯಸಿದ್ದ ಅವಕಾಶ ಸಿಕ್ಕಿರಲಿಲ್ಲ. ಬಕ್ಕಿಂಗ್‌ಹ್ಯಾಮ್ ಅರಮೆನೆಯಿಂದ ಬರುವಾಗ ಮೆಟ್ಟಿಲು ಮೇಲೆ ಬಂದು ಮಾತನಾಡಲು ಅವಕಾಶ ಸಿಕ್ಕಿತು. ಆಗ ಏನು ಮಾತನಾಡಿದರೋ ಗೊತ್ತಿಲ್ಲ. ಗಾಂಧಿಜಿ ಕಾರಿನಲ್ಲಿ ಹೋಗುವಾಗ ಬಗ್ಗಿ ಕಾಲು ಮುಟ್ಟಿ ನಮಸ್ಕಾರ ಮಾಡಿದ ನಂತರ ಹೇಳುತ್ತಾನೆ. ದೇವರ ಕಾಲುಗಳು ಎಂಬಂತೆ ನನಗೆ ಭಾಸವಾಗಿದ್ದವು ಎಂದಿದ್ದರು. ಏಕೆಂದರೆ ಲಂಡನ್‌ನಲ್ಲಿ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ಪದ್ಧತಿ ಇರಲಿಲ್ಲ. ಮಾರ್ಟಿನ್ ಲೂಥರ್ ಕಿಂಗ್ ಗಾಂಧಿಯನ್ನು ನನ್ನ ಗುರು ಎಂದಿದ್ದ. ಕುವೆಂಪು ಅಂತೂ ಗಾಂಧಿ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ. ಕೈಲಾಸಂ ಬರೆದಿದ್ದಾರೆ. ಮೌಂಟ್‌ಬ್ಯಾಟನ್‌ನಿಂದ ಆರಂಭವಾಗಿ ಕೈಲಾಸಂವರೆಗೂ ಬರೆದಿದ್ದಾರೆ. ಗಾಂಧಿ ಸತ್ತ ನಂತರ ಬ್ರಿಟಿಷ್ ತತ್ವಜ್ಞಾನಿ ಭಾರತಕ್ಕೆ ಬರತ್ತಾನೆ. ರೈಲ್ವೇ ನಿಲ್ದಾಣಗಳಲ್ಲಿ ಗಾಂಧಿ ತೀರಿಕೊಂಡ ಸ್ವಲ್ಪ ದಿನಗಳಲ್ಲಿ ಪೋಸ್ಟರ್ ಅಂಟಿಸಿ ಅಲ್ಲಿ ಗಾಂಧಿ ಹೆಜ್ಜೆ ತೋರಿಸಿ ದಾರಿತೋರಿದರು ಎಂದು ಬರೆದಿದ್ದರು. ನಂತರ ಪೋಸ್ಟರ್‌ಗಳು ಮಾಯವಾಗಿ ಈಗ ಸುಂದರ ವಿಗ್ರಹಗಳು ಬಂದಿವೆ ಎಂದು ಬರೆಯುತ್ತಾನೆ.
ಗಾಂಧೀಜಿ ಅವರ ಒಂದು ಅಂಶವನ್ನಾದರೂ ನಾವು ಅಳವಡಿಸಿಕೊಳ್ಳಬೇಕು. ಅವರ ಅಂಶ ನಮಗೆ ಇರಬೇಕು. ಸಹಿಷ್ಣುತೆ ಅಂದರೆ ಏನು ಸಹಿಸಿಕೊಳ್ಳುವುದು. ಸಮಭಾವ ಆಗಬೇಕು. ಗಾಂಧಿ ನಮಗೆ ಕೇವಲ ನೀತಿಪಾಠ ಹೇಳುವ ಮಾಸ್ಟರ್ ಏಕೆ ಆದರು. ನಾವು ಕನ್ನಡಿ ಆಗಿದ್ದೇವೆ ಗಾಜು ಆಗಿಲ್ಲ. ಗಾಜು ಆಗಿದ್ದರೆ ಹೊರಗಿನ ಬೆಳಕು ಒಳಕ್ಕೆ ಬರುತ್ತಿತ್ತು. ಗಾಂಧಿ ತಮ್ಮನ್ನು ಟೀಕೆ ಮಾಡಿದರೆ ಒಪ್ಪಿಕೊಳ್ಳುತ್ತಿದ್ದರು. ನಾನ ಕೂಡ ಅವರನ್ನು ಓದಿಕೊಂಡು ಟೀಕೆ ಮಾಡಿ ಎನ್ನುತ್ತೇನೆ. ಗಾಂಧಿ ಟೀಕೆಯನ್ನು ಪ್ರೀತಿಯಿಂದ ಒಪ್ಪಿಕೊಳ್ಳುತ್ತಿದ್ದರು. ಓದಿಕೊಂಡು ತಿಳಿದುಕೊಂಡು ಟೀಕೆಮಾಡಬೇಕು. ಆ ಚಿಂತನೆ ಗಂಗೆ ಹರಿದು ಬಂದಾಗ ಮನಸ್ಸಿನ ಕಲ್ಮಶ ಹೋಗುತ್ತದೆ.